

ನವದೆಹಲಿ: ಬಳ್ಳಾರಿಯಲ್ಲಿ ಪೊಲೀಸ್ ಅಧಿಕಾರಿಗಳ ಸಭೆ ನಡೆಸುವುದಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಯಾರು? ಅವರಿಗೆ ಆ ಅಧಿಕಾರ ಯಾರು ಕೊಟ್ಟರು? ರಾಜ್ಯದಲ್ಲಿ ಇರೋದು ರಬ್ಬರ್ ಸ್ಟ್ಯಾಂಪ್ ಗೃಹ ಸಚಿವರಾ? ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ನವದೆಹಲಿಯ ತಮ್ಮ ಗೃಹ ಕಚೇರಿಯಲ್ಲಿ ಮಾತಾಡಿದ ಕೇಂದ್ರ ಸಚಿವರು ಡಿಸಿಎಂ ಅವರು ಮಂಗಳವಾರ ಬಳ್ಳಾರಿಯಲ್ಲಿ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಅದಕ್ಕೆ ಗೃಹ ಸಚಿವರು ಇಲ್ಲವೇ? ರಾಜ್ಯದಲ್ಲಿರುವ ಗೃಹ ಸಚಿವರು ಹೆಬ್ಬೆಟ್ಟು ಸಚಿವರಾ? ಎಂದು ಪ್ರಶ್ನಿಸಿದರು.
ಡಿಸಿಎಂ ಅವರು ಯಾವ ಅಧಿಕಾರದ ಮೇಲೆ ಬಳ್ಳಾರಿಯಲ್ಲಿ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ್ದಾರೆ? ಗೃಹ ಇಲಾಖೆಯಲ್ಲಿ ಇವರ ಹಸ್ತಕ್ಷೇಪ ಯಾಕೆ? ಡಿಸಿಎಂ ಎಂದರೆ ಅವರು ಮಂತ್ರಿ ಅಷ್ಟೇ. ಕಾಂಗ್ರೆಸ್ ಸತ್ಯ ಶೋಧನಾ ಸಮಿತಿಗೆ ಅಧಿಕಾರಿಗಳು ಯಾವ ಮಾಹಿತಿ ಕೊಡುತ್ತಾರೆ? ಕಾರ್ಯಕರ್ತರು, ಕಾಂಗ್ರೆಸ್ ನಾಯಕರು ಘಟನೆಗೆ ಕಾರಣರಾದ ಶಾಸಕರ ವಿರುದ್ದವೇ ಸತ್ಯಶೋಧನೆ ಸಮಿತಿಯ ಮುಂದೆ ದೂರು ನೀಡಿದ್ದಾರೆ. ಹಾಗಾದರೆ ನಿಮ್ಮ ತನಿಖೆಯ ಹಣೆಬರಹ ಏನು ಎಂದು ಅವರು ತೀಕ್ಷ್ಣವಾಗಿ ಪ್ರಶ್ನಿಸಿದರು.
ಬಳ್ಳಾರಿ ನಗರದಲ್ಲಿ ನಡೆದ ಇಡೀ ಪ್ರಕರಣವನ್ನು ಮುಚ್ಚಿ ಹಾಕಲು ಸರ್ಕಾರ ತರಾತುರಿಯಲ್ಲಿ ಕೆಲಸ ಮಾಡುತ್ತಿದೆ. ಕೇವಲ ಬ್ಯಾನರ್ ಕಟ್ಟುವ ವಿಚಾರಕ್ಕೆ ಬೀದಿಯಲ್ಲಿ ಗುಂಡು ಹಾರಿಸ್ತಾರಾ? ಮರಣೋತ್ತರ ಪರೀಕ್ಷೆ ನಡೆದ ನಂತರ ಕೊಲೆಯಾದ ಕಾರ್ಯಕರ್ತನ ಮೃತದೇಹವನ್ನು ತರಾತುರಿಯಲ್ಲಿ ಸುಟ್ಟು ಹಾಕಿದ್ದು ಯಾಕೆ? ಕುಟುಂಬದವರಿಗೆ ಅಂತಿಮ ವಿಧಿ ವಿಧಾನ ನಡೆಸುವುದಕ್ಕೆ ಅವಕಾಶವನ್ನೂ ನೀಡದೆ ಮೃತದೇಹವನ್ನು ತರಾತುರಿಯಲ್ಲಿ ಸುಟ್ಟಿದ್ದು ಯಾಕೆ? ಇದಕ್ಕೆಲ್ಲಾ ಸರ್ಕಾರ ಉತ್ತರ ಕೊಡಬೇಕಲ್ಲವೇ? ಇಂದು ಕುಮಾರಸ್ವಾಮಿ ಅವರು ಒತ್ತಾಯಿಸಿದರು.
ಬಳ್ಳಾರಿಯಲ್ಲಿ ನಡೆದದ್ದು ಅಹಿತರ ಘಟನೆ, ಸಾವು ಪ್ರಕರಣ ಎಲ್ಲರಿಗೂ ನೋವು ತರುತ್ತದೆ. ಕಳೆದ ಒಂದು ವಾರದಿಂದ ಹಲವು ನಾಯಕರು ಬಳ್ಳಾರಿಗೆ ಭೇಟಿ ನೀಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕರು ಸತ್ಯಶೋಧನೆ ಮಾಡುತ್ತೇವೆ ಎಂದು ಹೋಗಿದ್ದರು! ಅಲ್ಲಿ ಅವರೇನು ಸತ್ಯ ಶೋಧನೆ ಮಾಡಿದರು ಎಂಬುದನ್ನು ಜನರ ಮುಂದೆ ಹೇಳಲಿ. ಯಾಕೆಂದರೆ ಕಾಂಗ್ರೆಸ್ಸಿಗರು ಸತ್ಯ ಬಿಟ್ಟು ಬೇರೇನು ಹೇಳುವುದಿಲ್ಲ. ಹಾಗಿದ್ದ ಮೇಲೆ ಈ ಸಮಿತಿ ಸತ್ಯವನ್ನೇ ಹೇಳಲಿ ಎಂದು ಸಚಿವ ಕುಮಾರಸ್ವಾಮಿ ಅವರು ವ್ಯಂಗ್ಯವಾಡಿದರು.
ನನ್ನ ಮತ್ತು ಜನಾರ್ದನ ರೆಡ್ಡಿ ನಡುವೆ ನಡೆದ ಗಲಾಟೆ ಹಳೇ ಕಥೆ. ಅದನ್ನು ಈಗ ಮುಂದೆ ತಂದು ಅವರು ಏನು ಮಾಡಲು ಸಾಧ್ಯ? ನಾನು ಯಾವುದೋ ರಾಗದ್ವೇಷ ಇಲ್ಲದೇ ಮಾಧ್ಯಮಗಳ ಮುಂದೆ ಸತ್ಯ ಹೇಳಿದ್ದೇನೆ. ಕಾಂಗ್ರೆಸ್ ಜತೆ ಕೂಡ ಸರ್ಕಾರ ಮಾಡಿದ್ದೇನೆ.. ಆಗ ಬಂಡೆ ತರ ನಿಂತಿದ್ದು ಇವರೇ ತಾನೇ. ಎಲ್ಲರೂ ಜೋಡೆತ್ತು ಎಂದರು. ಆಮೇಲೆ ಆಗಿದ್ದು ಏನು? ಬೆನ್ನಿಗೆ ಚೂರಿ ಹಾಕಿ ವಿಶ್ವಾಸ ದ್ರೋಹ ಎಸಗಿದರು ಎಂದು ಕಿಡಿಕಾರಿದರು.
Advertisement