

ಬೆಂಗಳೂರು: ಕೋಗಿಲು ಲೇಔಟ್ ನಲ್ಲಿ ಅಕ್ರಮ ಮನೆಗಳನ್ನು ತೆರವುಗೊಳಿಸಿದ ಬಳಿಕ ನಿರಾಶ್ರಿತರಿಗೆ ಮನೆ ನೀಡುವ ಸಂಬಂಧ ಪ್ರತಿಕ್ರಿಯಿಸಿರುವ ವಸತಿ ಸಚಿವ ಜಮೀರ್ ಅಹ್ಮದ್ ಖಾನ್, ತೆರವಾಗಿರುವ ಮನೆಗಳ ಪೈಕಿ 26 ಜನರಿಗೆ ಮಾತ್ರ ಮನೆ ಕೊಡಲು ಅವಕಾಶವಿದೆ ಎಂದಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ಅವರನ್ನ ಭೇಟಿಯಾಗಿ ಚರ್ಚಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಜಮೀರ್ ಅಹ್ಮದ್ ಖಾನ್, ಅಕ್ರಮ ಮನೆ ತೆರವಾಗಿರುವವರ ಪೈಕಿ 26 ಜನರಿಗೆ ಮನೆ ಕೊಡಲು ಅವಕಾಶವಿದೆ. ಪರಿಶೀಲನೆ ವೇಳೆ 26 ನಿವಾಸಿಗಳ ದಾಖಲೆಗಳು ಮಾತ್ರ ಸರಿಯಾಗಿದೆ. ಇನ್ನೂ ಹಲವರ ಕಾರ್ಯ ನಡೆಯುತ್ತಿದೆ ಎಂದರು. ಒಟ್ಟು 161 ಮನೆಗಳನ್ನು ತೆರವು ಮಾಡಲಾಗಿದೆ.
ಹೊರಗಿನವರಿಗೆ ಯಾವುದೇ ಕಾರಣಕ್ಕೂ ಮನೆ ನೀಡಲ್ಲ. 26 ಜನರ ದಾಖಲೆಗಳು ಸೂಕ್ತವಾಗಿದ್ದು ಅವರಿಗೆ ಮನೆ ಹಂಚಿಕೆ ಮಾಡುತ್ತೇವೆ. ಸಿಎಂ ಈಗಾಗಲೇ ಸಭೆ ಮಾಡಿ ಮನೆ ನೀಡಲು ಸೂಚಿಸಿದ್ದಾರೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದರು. ಕ್ಯಾಬಿನೆಟ್‌ನಲ್ಲಿ ಯಾವುದೇ ಚರ್ಚೆ ಮಾಡಲ್ಲ, ಸಿಎಂ ಈಗಾಗಲೇ ಮೀಟಿಂಗ್ ಮಾಡಿ ಸೂಚನೆ ಕೊಟ್ಟಿದ್ದಾರೆ. 26 ಜನರ ದಾಖಲೆಗಳು ಕ್ಲಿಯರ್ ಆಗಿದೆ ಅವರಿಗೆ ಇವತ್ತು ಮನೆ ಕೊಡಬಹುದು ಎಂದು ತಿಳಿಸಿದರು.
ಮಾನದಂಡಗಳು
ಕರ್ನಾಟಕದ ಬೇರೆ ಭಾಗದಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿರಬೇಕು.
ಕೋಗಿಲು ಲೇಔಟ್‌ನಲ್ಲಿ ಐದು ವರ್ಷದಿಂದ ವಾಸ ಇರಬೇಕು.
ಮಾತೃ ಭಾಷೆ ಬೇರೆ ಆಗಿದ್ದರೂ ಕರ್ನಾಟಕದವರಾಗಿರಬೇಕು.
ಒಂದಕ್ಕಿಂತ ಹೆಚ್ಚಿನ ಅರ್ಜಿ ಸಲ್ಲಿಸಿದ್ದಲ್ಲಿ ರೇಷನ್ ಕಾರ್ಡ್ ಪರಿಗಣನೆ.
ವೋಟರ್ ಐಡಿ, ರೇಷನ್ ಕಾರ್ಡ್, ಮಕ್ಕಳ ಶಾಲಾ ದಾಖಲಾತಿ ಪತ್ರ ಪರಿಗಣನೆ
Advertisement