
ಸಿದ್ದರಾಮಯ್ಯ ಸರ್ಕಾರ ಬೆಂಗಳೂರಿನ ನಂತರ ಇದೀಗ ರಾಜ್ಯಾದ್ಯಂತ ಆಸ್ತಿ ಮಾಲೀಕರಿಗೆ ಸಿಹಿ ಸುದ್ದಿ ನೀಡಿದೆ. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲೂ ಬಿ ಖಾತಾಗೆ ಎ ಖಾತಾ ಮಾನ್ಯತೆ ನೀಡಲು ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಸಭೆಯ ನಂತರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಚಿವ ಎಚ್.ಕೆ. ಪಾಟೀಲ್, ರಾಜ್ಯದ ಮಹಾನಗರ ಪಾಲಿಕೆಗಳು, ನಗರಸಭೆ ವ್ಯಾಪ್ತಿಯ ಅಕ್ರಮ ಬಡಾವಣೆಗಳಲ್ಲಿರುವ ಬಿ-ಖಾತಾ ಆಸ್ತಿಗಳಿಗೆ ಎ-ಖಾತಾ ನೀಡಲು ಸಂಪುಟ ಸಭೆ ಅನುಮೋದನೆ ನೀಡಿದೆ. ಗ್ರೇಟರ್ ಬೆಂಗಳೂರು ಅಥಾರಿಟಿ ಮಾದರಿಯಲ್ಲೇ ನಿಯಮ ರೂಪಿಸಿ ರಾಜ್ಯದಾದ್ಯಂತ ಬಿ ಖಾತಾ ಆಸ್ತಿಗಳಿಗೆ ಎ ಖಾತಾ ನೀಡಲಾಗುತ್ತೆ. ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆಯದೆ ರಚಿಸಿರುವ ಬಡಾವಣೆಗಳಲ್ಲಿನ 'ಬಿ-ಖಾತಾ' ನಿವೇಶನ/ಕಟ್ಟಡ/ ಅಪಾರ್ಟ್ ಮೆಂಟ್/ ಫ್ಲಾಟ್ ಗಳಿಗೆ ಎ-ಖಾತಾ ನೀಡಲು ಸಂಪುಟ ಒಪ್ಪಿಗೆ ನೀಡಿದೆ ಎಂದರು. ಆದರೆ ದಂಡದ ಪ್ರಮಾಣವನ್ನು ಇನ್ನೂ ನಿಗದಿ ಮಾಡಿಲ್ಲ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಳಿಗಿಂತ ಕಾಂಗ್ರೆಸ್ ಪಕ್ಷದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಹೆಚ್ಚಿನ ಜಾಹೀರಾತು ಹಣವನ್ನು ಖರ್ಚು ಮಾಡಿದ್ದು, ಇದು ಸರ್ಕಾರದ ಖಜಾನೆಯ ದುರ್ಬಳಕೆ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸರ್ಕಾರಿ ದಾಖಲೆಗಳ ಮಾಹಿತಿಯ ಪ್ರಕಾರ, ಕಡಿಮೆ ಓದುಗರಿದ್ದರೂ, ಕರ್ನಾಟಕದಲ್ಲಿ ಪ್ರಸರಣ ಶೂನ್ಯವಾಗಿದ್ದರೂ, ನ್ಯಾಷನಲ್ ಹೆರಾಲ್ಡ್‌ಗೆ ರಾಜ್ಯ ಸರ್ಕಾರದ ಜಾಹೀರಾತು ಬಜೆಟ್‌ನಿಂದ 2 ಕೋಟಿ ರೂಪಾಯಿಗಳನ್ನು ನೀಡಲಾಗಿದೆ ಎಂದು ಆರೋಪಿಸಲಾಗಿದೆ. ಕರ್ನಾಟಕ ಸರ್ಕಾರದ ಜಾಹೀರಾತು ಬಜೆಟ್ ನಲ್ಲಿ ಸರಿಸುಮಾರು ಶೇಕಡ 69ರಷ್ಟು ನ್ಯಾಷನಲ್ ಹೆರಾಲ್ಡ್‌ಗೆ ಹೋಗಿದೆ ಎಂದು ವರದಿಯಾಗಿದೆ. ನ್ಯಾಷನಲ್ ಹೆರಾಲ್ಡ್ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರನ್ನು ಒಳಗೊಂಡ ಹೈ ಪ್ರೊಫೈಲ್ ವಿವಾದದ ಕೇಂದ್ರಬಿಂದುವಾಗಿದೆ.
ಬೆಂಗಳೂರಿನ ಕೋಗಿಲು ಕ್ರಾಸ್ ನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಕ್ರಮ ಮನೆಗಳನ್ನು ನೆಲಸಮಗೊಳಿಸಿದ್ದ ವಿಚಾರ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಮತ್ತೆ ಬೆಂಗಳೂರಿನಲ್ಲಿ ತೆರವು ಕಾರ್ಯಾಚರಣೆ ನಡೆದಿದೆ. ಬೆಳ್ಳಂ ಬೆಳಗ್ಗೆ 7 ಗಂಟೆಯಿಂದಲೇ ಬಿಡಿಎ ಅಧಿಕಾರಿಗಳು ಜೆಸಿಬಿ ಮೂಲಕ ನಾಗವಾರ ಬಳಿಯ ಥಣಿಸಂದ್ರದ ಅಶ್ವತ್ಥ್ ನಗರದಲ್ಲಿ ಸುಮಾರು 2 ಎಕರೆ ಬಿಡಿಎ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿಕೊಳ್ಳಲಾಗಿದ್ದ ಸುಮಾರು 60 ಮನೆಗಳನ್ನು ತೆರವು ಮಾಡಿದ್ದಾರೆ. ಈ ಮಧ್ಯೆ ಕೋಗಿಲು ಗ್ರಾಮದಲ್ಲಿ ಅಕ್ರಮವಾಗಿ ಮನೆ ಕಟ್ಟಿಕೊಳ್ಳಲು ಅವಕಾಶ ಮಾಡಿಕೊಟ್ಟು ಹಣ ವಸೂಲಿ ಮಾಡಿದ ಆರೋಪದ ಮೇಲೆ ಆರೋಪಿಗಳಾದ ಮುನಿ ಆಂಜಿನಪ್ಪ, ರಾಬಿನ್, ವಾಸೀಂ ಉಲ್ಲಾ ಬೇಗ್ ಮತ್ತು ವಿಜಯ್ ಎಂಬುವರನ್ನು ಬಂಧಿಸಲಾಗಿದೆ. ಮತ್ತೊಂದೆಡೆ ಕೋಗಿಲು ನಿರಾಶ್ರಿತರ ಪೈಕಿ 26 ಜನರಿಗೆ ಮಾತ್ರ ಮನೆ ಕೊಡಲು ಅವಕಾಶವಿದೆ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ. ಪರಿಶೀಲನೆ ವೇಳೆ 26 ನಿವಾಸಿಗಳ ದಾಖಲೆಗಳು ಮಾತ್ರ ಸರಿಯಾಗಿದೆ. ಇನ್ನೂ ಹಲವರ ದಾಖಲೆ ಪರಿಶೀಲನೆ ಕಾರ್ಯ ನಡೆಯುತ್ತಿದೆ ಎಂದರು.
ಬೆಳಗಾವಿಯಲ್ಲಿ ಸಕ್ಕರೆ ಕಾರ್ಖಾನೆಯಲ್ಲಿ ಬುಧವಾರ ಸಂಭವಿಸಿದ ಬಾಯ್ಲರ್ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ ಏಳಕ್ಕೆ ಏರಿದೆ. ಬೈಲಹೊಂಗಲದ ಮರಕುಂಬಿ ಗ್ರಾಮದಲ್ಲಿರುವ ಇನಾಮ್‌ದಾರ್ ಸಕ್ಕರೆ ಕಾರ್ಖಾನೆಯಲ್ಲಿ ಬುಧವಾರ ಮಧ್ಯಾಹ್ನ ಸ್ಫೋಟ ಸಂಭವಿಸಿದ್ದು, ಆರಂಭದಲ್ಲಿ ಮೂವರು ಮೃತಪಟ್ಟಿದ್ದು ಹಲವು ಗಂಭೀರವಾಗಿ ಗಾಯಗೊಂಡಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೇ ಮತ್ತೆ ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಕಬ್ಬಿನ ರಸವನ್ನು ಕುದಿಸಲು ಬಳಸುವ 40 ಅಡಿ ಎತ್ತರದ ಪಾತ್ರೆಯಾದ AVCP ನಂ. 1 ರ ದುರಸ್ತಿ ಕಾರ್ಯದ ಸಮಯದಲ್ಲಿ ಈ ಘಟನೆ ಸಂಭವಿಸಿತ್ತು. ಕಾರ್ಖಾನೆ ಅಧಿಕಾರಿಗಳ ಪ್ರಕಾರ, ದುರಸ್ತಿಗೆ ಮುಂಚಿತವಾಗಿ ಘಟಕವನ್ನು ಮುಚ್ಚಲಾಗಿತ್ತು. ಆದಾಗ್ಯೂ, ಕಾರ್ಮಿಕರು ನಿರ್ವಹಣೆಗಾಗಿ ಕರ್ಫ್ಯೂ ಗೋಡೆಯಿಂದ ನಟ್ ಮತ್ತು ಬೋಲ್ಟ್‌ಗಳನ್ನು ತೆಗೆಯುತ್ತಿದ್ದಾಗ, ಬಿಸಿನೀರು ಇದ್ದಕ್ಕಿದ್ದಂತೆ ವಾಲ್ವ್ ಮೂಲಕ ಚಿಮ್ಮಿ ಕೆಳಗೆ ಕೆಲಸ ಮಾಡುತ್ತಿದ್ದವರ ಮೇಲೆ ಬಿದ್ದಿತ್ತು.
ರಾಜ್ಯದ ಗೃಹಲಕ್ಷ್ಮಿ ಯೋಜನೆಯ ಬಾಕಿ ಹಣ ಬಿಡುಗಡೆ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ. ಹಣಕಾಸು ಇಲಾಖೆಯವರು ಅನುಮತಿ ನೀಡಿದ ತಕ್ಷಣವೇ 2025ರ ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ಬಾಕಿ ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುವುದು. ಅಲ್ಲದೆ, ಬಿಪಿಎಲ್ ಕಾರ್ಡ್ ರದ್ದಾಗಿರುವವರಿಗೆ ಹಣ ವರ್ಗಾವಣೆಯಾಗುವುದಿಲ್ಲ ಎಂದೂ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದ್ದಾರೆ.
Advertisement