

ಬೆಂಗಳೂರು: ರಾಜ್ಯ ಸರ್ಕಾರ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಅಂಗೀಕರಿಸಿ ಅನುಮೋದನೆಗಾಗಿ ಕಳುಹಿಸಿದ್ದ ಒಟ್ಟು 22 ಮಸೂದೆಗಳ ಪೈಕಿ 19ಕ್ಕೆ ವಿಧೇಯಕಗಳಿಗೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಅಂಕಿತ ಹಾಕಿದ್ದಾರೆ. ಆದರೆ ದ್ವೇಷ ಭಾಷಣ ಮಸೂದೆಗೆ ಸಹಿ ಹಾಕದ ಕಾರಣ ಇನ್ನೂ ರಾಜ್ಯಪಾಲರ ಪರಿಶೀಲನೆಯಲ್ಲಿದೆ.
ಎರಡು ಮಸೂದೆಗಳಾದ ಕರ್ನಾಟಕ ಪರಿಶಿಷ್ಟ ಜಾತಿ(SC ಒಳ ಮೀಸಲಾತಿ) ಮಸೂದೆ ಮತ್ತು ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವಿಧೇಯಕಗಳನ್ನು ಹೆಚ್ಚಿನ ಸ್ಪಷ್ಟೀಕರಣ ಕೋರಿ ರಾಜ್ಯಪಾಲರು ಸರ್ಕಾರಕ್ಕೆ ಹಿಂತಿರುಗಿಸಿದ್ದಾರೆ ಎಂದು ಲೋಕಭವನ ಶುಕ್ರವಾರ ತಿಳಿಸಿದೆ.
ಇವುಗಳ ಹೊರತಾಗಿ, ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ(ತಡೆಗಟ್ಟುವಿಕೆ) ಮಸೂದೆಯು ರಾಜ್ಯಪಾಲರ ಪರಿಗಣನೆಯಲ್ಲಿದೆ ಎಂದು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್ ಪ್ರಭು ಶಂಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
"22 ಮಸೂದೆಗಳಲ್ಲಿ 19 ಮಸೂದೆಗಳನ್ನು ರಾಜ್ಯಪಾಲರು ಅನುಮೋದಿಸಿದ್ದಾರೆ ಮತ್ತು ಅಧಿಕೃತ ಗೆಜೆಟ್‌ನಲ್ಲಿ ಪ್ರಕಟಿಸಲು ಕಳುಹಿಸಲಾಗಿದೆ" ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ(ತಡೆಗಟ್ಟುವಿಕೆ) ಮಸೂದೆಗೆ ತೀವ್ರ ವಿರೋಧ ವ್ಯಕ್ತಿಪಡಿಸಿದ್ದ ಪ್ರತಿಪಕ್ಷ ಬಿಜೆಪಿ, ದ್ವೇಷ ಭಾಷಣ ಮಸೂದೆಗೆ ಸಹಿ ಹಾಕದಂತೆ ರಾಜ್ಯಪಾಲರಿಗೆ ಮನವಿ ಮಾಡಿತ್ತು.
ದ್ವೇಷ ಭಾಷಣ ಮಸೂದೆ ಬಗ್ಗೆ ಕಾನೂನು ತಜ್ಞರ ಜೊತೆ ಚರ್ಚಿಸಲು ರಾಜ್ಯಪಾಲರು ಚಿಂತನೆ ಮಾಡಿದ್ದಾರೆ ಎನ್ನಲಾಗಿದೆ. ರಾಷ್ಟ್ರಪತಿಗಳಿಗೂ ದ್ವೇಷ ಭಾಷಣ ಮಸೂದೆ ಕಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಮಸೂದೆಯು 1 ಲಕ್ಷ ರೂಪಾಯಿಗಳವರೆಗೆ ದಂಡ ಮತ್ತು ಏಳು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಲು ಅವಕಾಶ ನೀಡುತ್ತದೆ.
Advertisement