

ಬೆಂಗಳೂರು: ಕನ್ನಡ ಪ್ರಸಿದ್ಧ ಲೇಖಕಿ, ಕಾದಂಬರಿಕಾರ್ತಿ, ಪ್ರಕಾಶಕಿ ಹಾಗೂ ಕಲಾವಿದೆ ಆಶಾ ರಘು (Asha Raghu) ನಿಧನರಾಗಿದ್ದಾರೆ. ಅವರಿಗೆ 47 ವರ್ಷ ವಯಸ್ಸಾಗಿತ್ತು, ಅವರು ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ತಮ್ಮ ನಿವಾಸದಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಇವರ ಪತಿ, ಖ್ಯಾತ ಆಹಾರ ತಜ್ಞ ಹಾಗೂ ಲೇಖಕ ಕೆಸಿ ರಘು ಎರಡು ವರ್ಷಗಳ ಹಿಂದೆ ನಿಧನರಾಗಿದ್ದರು. ಆಶಾ ಅವರಿಗೆ ಪುತ್ರಿ ಇದ್ದಾರೆ. ಪತಿ ನಿಧನ ನಂತರ ಮಾನಸಿಕವಾಗಿ ಬಹಳ ನೊಂದಿದ್ದರು. ನಿನ್ನೆ ರಾತ್ರಿ ಅವರು ಮನೆಯ ಕೊಠಡಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದರು. ಮನೆಯವರಿಗೆ ಗೊತ್ತಾಗಿ ಬಾಗಿಲು ಒಡೆದು ರಕ್ಷಿಸುವಷ್ಟರಲ್ಲಿ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು ಎಂದು ತಿಳಿದುಬಂದಿದೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿದೆ, ಇಂದು ಸಂಜೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
10 ದಿನಗಳ ಹಿಂದೆ ಅಗಲಿದ ಪತಿಯ ಬಗ್ಗೆ ಪೋಸ್ಟ್
ಆಶಾ ಅವರ ಪತಿ ರಘು ಅವರು ಎರಡು ವರ್ಷಗಳ ಹಿಂದೆ ನಿಧನರಾಗಿದ್ದರು. ರಘು ಅವರು ಕರ್ನಾಟಕದ ಖ್ಯಾತ ಆಹಾರ ತಜ್ಞರಾಗಿದ್ದರು. ಅವರಿಗೆ ಶ್ವಾಸಕೋಶದ ಕ್ಯಾನ್ಸರ್ ಉಂಟಾಗಿತ್ತು. ರಘು ಕನಸಿನಲ್ಲಿ ಬಂದರು ಎಂದು ಅವರು ಪೋಸ್ಟ್ ಹಾಕಿದ್ದರು,
ಕಳೆದ ಹತ್ತು ದಿನಗಳ ಹಿಂದೆ ಆಶಾ ಅವರು ಫೇಸ್‌ಬುಕ್‌ನಲ್ಲಿ, ಹೀಗೊಂದು ಕನಸಾಯಿತು… ಇಂದು ಬೆಳಗಿನ ಜಾವ ನನ್ನವರು ಕನಸಿನಲ್ಲಿ ಕಾಣಿಸಿಕೊಂಡರು. ಬಹಳ ಸಹಜವಾಗಿದ್ದರು. ನನಗೆ ಅವರು ತೀರಿಕೊಂಡ ಮೇಲೆ ನೋಡಲು ಬಂದಿದ್ದಾರೆಂಬ ಸಂಪೂರ್ಣ ಅರಿವಿತ್ತು. ಸಡಗರದಲ್ಲಿ ಮಾತನಾಡಿಸಿದೆ. ಉಳಿದವರನ್ನು ಕನಸಿನಲ್ಲೇ 'ಕಾಣ್ತಿದ್ದಾರಾ ನಿಮಗೆ?' ಅಂತೆಲ್ಲಾ ಕೇಳಿದೆ. ಅವರು ತಿಣುಕಾಡಿದರು. ಆದರೆ ಮಗಳು ನೇರವಾಗಿ ಬಂದು ತನ್ನಪ್ಪನನ್ನು ತಟ್ಟಿ, 'How are you?' ಅಂತ ಮಾತನಾಡಿಸಿದಳು. ಅವರೂ ಅವಳೊಂದಿಗೆ ಮಾತನಾಡಿಸಿದರು. ಕನಸಿನಲ್ಲಿ ನನ್ನ ತಲೆಗೂದಲು ತುಂಡಾಗಿತ್ತು. ನನ್ನ ಕೂದಲಲ್ಲಿ ಬೆರಳಾಡಿಸಿ ಯಾವುದೋ ಶ್ಯಾಂಪೂ ಹೆಸರು ಹೇಳಿದರು. ನಾನು ನಕ್ಕೆ. ನಂತರ 'ನಾನು ಈಗ ಫ್ರಾನ್ಸ್‌ಗೆ ಹೋಗ್ತಿದ್ದೀನಿ' ಅಂದರು. 'ಮಾರಿಷಸ್' ಅಂತಾ ಕೂಡಾ ಜೊತೆಗೆ ಸೇರಿಸಿದರೋ ಅಂತ ಅರೆಬರೆ ನೆನಪು. ಇಷ್ಟಾಗುವುದರಲ್ಲಿ ಸಂತೋಷಕ್ಕೆ ಫಳ್ಳನೆ ಕಣ್ಣು ಬಿಟ್ಟುಬಿಟ್ಟೆ! ಸಂತೋಷಕ್ಕೆ ಮೊದಲು, ಆ ನಂತರ ಅವರ ಫೋಟೋ ನೋಡಿಕೊಂಡು ಭಾವವುಕ್ಕಿ ಅತ್ತೂ ಅತ್ತೂ ಕೆಡವಿದೆ. ಫ್ರಾಂಸಿಗೆ ಹೋದರೆ ನಿಜಕ್ಕೂ ಸಿಕ್ಕರೂ ಸಿಗಬಹುದು ಅನ್ನುವ ಲಹರಿಯಲ್ಲಿಯೇ ಇನ್ನೂ ಇದ್ದೇನೆ! ಎಂದು ಬರೆದುಕೊಂಡಿದ್ದರು.
ಆಶಾ ರಘು ಅವರು ಕನ್ನಡದ ಪ್ರಮುಖ ಕಾದಂಬರಿಗಾರ್ತಿಯರಲ್ಲಿ ಒಬ್ಬರು. ಕೇಶವ ಅಯ್ಯಂಗಾರ್ ಹಾಗೂ ಸುಲೋಚನ ದಂಪತಿಗಳ ಹಿರಿಯ ಮಗಳಾಗಿ 1979ರ ಜೂನ್ 18ರಂದು ಬೆಂಗಳೂರಿನಲ್ಲಿ ಹುಟ್ಟಿದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ ಪದವಿ ಪಡೆದು, ಉಪನ್ಯಾಸಕರಾಗಿ ಕೆಲಕಾಲ ಕಾರ್ಯ ನಿರ್ವಹಿಸಿದರು. ರಂಗಭೂಮಿ, ಕಿರುತೆರೆ, ಬೆಳ್ಳಿತೆರೆಗಳಲ್ಲಿಯೂ ಕಲಾವಿದೆಯಾಗಿ, ಸಂಭಾಷಣೆಕಾರರಾಗಿ, ಸಹಾಯಕ ನಿರ್ದೇಶಕರಾಗಿ ಕೂಡ ಕಾರ್ಯ ನಿರ್ವಹಿಸಿದ್ದಾರೆ. ಇತ್ತೀಚೆಗೆ ಉಪಾಸನಾ ಎಂಬ ಪ್ರಕಾಶನವನ್ನೂ ಆರಂಭಿಸಿ ಯುವ ಲೇಖಕ/ಲೇಖಕಿಯರ ಪುಸ್ತಕಗಳನ್ನು ಪ್ರಕಟಿಸಿದ್ದರು.
ಕೃತಿಗಳು
ಆವರ್ತ, ಗತ, 'ಮಾಯೆ', 'ಚಿತ್ತರಂಗ', ಕೆಂಪು ದಾಸವಾಳ, ವಕ್ಷ ಸ್ಥಲ ಕಾದಂಬರಿಗಳನ್ನು, 'ಆರನೇ ಬೆರಳು', 'ಬೊಗಸೆಯಲ್ಲಿ ಕಥೆಗಳು', 'ಅಪರೂಪದ ಪುರಾಣ ಕಥೆಗಳು' ಮೊದಲಾದ ಕಥಾಸಂಕಲನಗಳನ್ನೂ, 'ಚೂಡಾಮಣಿ', 'ಕ್ಷಮಾದಾನ', 'ಬಂಗಾರದ ಪಂಜರ ಮತ್ತು ಇತರ ಮಕ್ಕಳ ನಾಟಕಗಳು' 'ಪೂತನಿ ಮತ್ತಿತರ ನಾಟಕಗಳು', ಮೊದಲಾದ ನಾಟಕ ಕೃತಿಗಳನ್ನು ರಚಿಸಿದ್ದಾರೆ. ಇವರ 'ಆವರ್ತ' ಕಾದಂಬರಿಯ ಕುರಿತ ಕೃತಿ 'ಆವರ್ತ-ಮಂಥನ' ಕೂಡಾ ಪ್ರಕಟಗೊಂಡಿದೆ.
ಪ್ರಶಸ್ತಿಗಳು
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (2014), ಸೂರ್ಯನಾರಾಯಣ ಚಡಗ ಪ್ರಶಸ್ತಿ (2014), ಕನ್ನಡ ಸಾಹಿತ್ಯ ಪರಿಷತ್ತಿನ ಪಳಕಳ ಸೀತಾರಾಮಭಟ್ಟ ಪ್ರಶಸ್ತಿ (2019), ರಾಯಚೂರು ಕನ್ನಡ ಸಾಹಿತ್ಯ ಪರಿಷತ್ತಿನ ರಾಜಲಕ್ಷ್ಮಿ ಬರಗೂರು ರಾಮಚಂದ್ರಪ್ಪ ಪ್ರಶಸ್ತಿ (2020), ಸೇಡಂನ ಅಮ್ಮ (2021), ಕರ್ನಾಟಕ ಲೇಖಕಿಯರ ಸಂಘದ ತ್ರಿವೇಣಿ ದತ್ತಿನಿಧಿ ಪ್ರಶಸ್ತಿ (2023)ಗಳನ್ನು ಪಡೆದಿದ್ದಾರೆ. ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು 2023 ರಲ್ಲಿ ಇವರಿಗೆ 'ಸಾಹಿತ್ಯಾಮೃತ ಸರಸ್ವತಿ' ಎಂಬ ಬಿರುದು ನೀಡಿ ಗೌರವಿಸಿದೆ.
Advertisement