

ಮದ್ದೂರು: ಮಂಡ್ಯ ಜಿಲ್ಲೆಯ ಗೆಜ್ಜಲಗೆರೆ ಗ್ರಾಮ ಪಂಚಾಯಿತಿಯನ್ನು ಮದ್ದೂರು ನಗರಸಭೆಗೆ ಸೇರ್ಪಡೆ ಮಾಡುವ ಆದೇಶವನ್ನು ರಾಜ್ಯ ಸರ್ಕಾರ ಕೂಡಲೇ ರದ್ದುಪಡಿಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಭಾನುವಾರ ಆಗ್ರಹಿಸಿದರು.
ಮದ್ದೂರು ತಾಲೂಕಿನ ಗೆಜ್ಜಲಗೆರೆ ಗ್ರಾಪಂ ಆವರಣದಲ್ಲಿ ಗ್ರಾಮಸ್ಥರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗ್ರಾಮಗಳು ಅಭಿವೃದ್ಧಿಯಾಗಬೇಕು, ಗ್ರಾಮಗಳಲ್ಲೇ ಎಲ್ಲ ಸವಲತ್ತು ಸಿಗಬೇಕು ಎಂಬುದು ಮಹಾತ್ಮ ಗಾಂಧೀಜಿಯವರ ಆಶಯ. ಗ್ರಾಮ ಸ್ವರಾಜ್ಯ ಎಂಬ ಗಾಂಧೀಜಿ ರವರ ಕನಸಿಗೆ ಇಲ್ಲಿನ ಶಾಸಕರು ಏನು ಬೆಲೆ ಕೊಟ್ಟಿದ್ದಾರೆ. ಸೇರ್ಪಡೆಗೂ ಮೊದಲೇ ಗ್ರಾಮಸ್ಥರು ಹಾಗೂ ಗ್ರಾಮದ ಮುಖಂಡರ ಒಪ್ಪಿಗೆ, ಅಭಿಪ್ರಾಯವನ್ನು ಪಡೆಯದೇ ದ್ರೋಹ ಮಾಡಿದ್ದಾರೆ ಎಂದು ಆರೋಪಿಸಿದರು.
ನಗರಸಭೆಗೆ ಗೆಜ್ಜಲಗೆರೆ ಗ್ರಾಮ ಸೇರ್ಪಡೆಯಾದರೆ ಕಂದಾಯ ೧೦ ಪಟ್ಟು ಹೆಚ್ಚಾಗುವುದರ ಜತೆಗೆ ಕಸ ವಿಲೇವಾರಿ, ಕುಡಿಯುವ ನೀರು ಸೇರಿದಂತೆ ಎಲ್ಲದಕ್ಕೂ ತೆರಿಗೆ ಹೆಚ್ಚಾಗುತ್ತದೆ. ಎಲ್ಲವನ್ನೂ ನಗರ ಮಾಡಿದರೆ ಅನ್ನ ಬೆಳೆಯುವುದು ಎಲ್ಲಿಂದ ಎಂದ ಅವರು,ಇದು ನಗರಸಭೆಗೆ ಸೇರಿದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಬರುವ ಯೋಜನೆಗಳು ಸ್ಥಗಿತಗೊಳ್ಳುತ್ತವೆ ಎಂದರು.
ಇದು ಗ್ರಾಮವಾಗಿಯೇ ಉಳಿಯಬೇಕೆಂಬ ಜನರ ಭಾವನೆಗೆ ದ್ರೋಹ ಬಗೆಯಬಾರದು. ಈ ಹಿಂದೆ ಆರ್.ಗುಂಡೂರಾವ್ ಮುಖ್ಯಮಂತ್ರಿಯಾಗಿದ್ದಾಗ, ಹಳ್ಳಿಯ ಮೇಲೆ ದೌರ್ಜನ್ಯ ನಡೆದಾಗ ಗೋಲಿಬಾರ್ ಆಗಿ ಇಬ್ಬರು ರೈತರು ಸತ್ತಿದ್ದರು. ಆಗ ಸರ್ಕಾರವೇ ಬಿದ್ದುಹೋಯಿತು. ಈಗ ಜನರ ಪ್ರತಿಭಟನೆಗೆ ಮನ್ನಣೆ ನೀಡಿ, ಗ್ರಾಮವನ್ನು ಉಳಿಸಬೇಕು ಎಂದರು.
ಇಲ್ಲಿನ ಶಾಸಕರು ಗ್ರಾಮ ಪಂಚಾಯಿತಿಯನ್ನು ನಗರಸಭೆಗೆ ಸೇರ್ಪಡೆ ಮಾಡುವ ಅಧಿಸೂಚನೆಯನ್ನು ರದ್ದುಪಡಿಸಲು ಪ್ರಯತ್ನಿಸದೆ ಮೊಂಡಾಟ ಮಾಡಿದರೆ, ನಮ್ಮ ಸರ್ಕಾರ ಬಂದ ಮೇಲೆ ಮತ್ತೆ ಗ್ರಾಮ ಪಂಚಾಯತಿ ಮಾಡುತ್ತೇವೆ ಎಂದು ಗುಡುಗಿದರು.
ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಚುನಾವಣೆಯ ವೇಳೆ ಮತ ಕೇಳಲು ಬಂದ ವೇಳೆ ಇದ್ದ ವಿನಯತೆ ಇಲ್ಲಿಯಾ ಶಾಸಕರಿಗೆ ಈಗ ಏಕೆ ಇಲ್ಲ ಎಂದು ಪ್ರಶ್ನಿಸಿದರು., ಶಾಸಕರು ಗೆಜ್ಜಲಗೆರೆಯಲ್ಲಿ ನಡೆಯುತ್ತಿರುವ ಹೋರಾಟದ ಬಗ್ಗೆ ಯಾರಿಗೂ ಜಗ್ಗಲ್ಲ ಬಗ್ಗಲ್ಲ ಎಂದು ಹೇಳಿಕೆ ನೀಡುವುದು ಸರಿಯಲ್ಲ. ಗೆಜ್ಜಲಗೆರೆಯ ಗ್ರಾಮದವರ ಒಪ್ಪಿಗೆಯಿಲ್ಲದೇ ಏಕೆ ಬಲವಂತದಿಂದ ನಗರಸಭೆಗೆ ಸೇರಿಸುತ್ತೀರಿ ಎಂದು ಪ್ರಶ್ನಿಸಿದರು.
Advertisement