

ನವದೆಹಲಿ: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಚುನಾವಣೆಯನ್ನು ಜೂನ್ ಅಂತ್ಯದ ಒಳಗೆ ನಡೆಸುವಂತೆ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ನೂತನವಾಗಿ ರಚನೆಯಾಗಿರುವ 'ಗ್ರೇಟರ್ ಬೆಂಗಳೂರು ಪ್ರಾಧಿಕಾರ'ದ ಅಡಿಯಲ್ಲಿ ಬರುವ ಐದು ನಗರ ಪಾಲಿಕೆಗಳ ಚುನಾವಣಾ ಪ್ರಕ್ರಿಯೆಯನ್ನು ಜೂನ್ 30ರೊಳಗೆ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್‌ನ ಸಿಜೆಐ ಪೀಠವು ರಾಜ್ಯ ಸರ್ಕಾರಕ್ಕೆ ಮತ್ತು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ.
ಸರ್ಕಾರದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಮತ್ತು ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು, ವಾರ್ಡ್‌ಗಳ ಮೀಸಲಾತಿ ಪ್ರಕ್ರಿಯೆಯು ಪ್ರಸ್ತುತ ಅಂತಿಮ ಹಂತದಲ್ಲಿದೆ ಎಂದು ಕೋರ್ಟ್‌ಗೆ ತಿಳಿಸಿದರು. ಫೆಬ್ರವರಿ 28ರೊಳಗೆ ಮೀಸಲಾತಿ ಪಟ್ಟಿಯು ಅಧಿಕೃತವಾಗಿ ಹೊರಬೀಳಲಿದ್ದು, ತದನಂತರ ಚುನಾವಣೆ ನಡೆಸುವ ಜವಾಬ್ದಾರಿ ಆಯೋಗಕ್ಕೆ ಇರಲಿದೆ ಎಂದು ಸ್ಪಷ್ಟಪಡಿಸಿದರು.
ಮಾರ್ಚ್ 16ರವರೆಗೆ ಮತದಾರರ ಪಟ್ಟಿಯ ಪರಿಶೀಲನೆ ನಡೆಯಲಿದೆ. ಇದಾದ ಬಳಿಕ ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆಯಲಿರುವುದರಿಂದ ಸಿಬ್ಬಂದಿ ಕೊರತೆ ಎದುರಾಗಬಹುದು. ಈ ಹಿನ್ನೆಲೆಯಲ್ಲಿ ಚುನಾವಣೆ ನಡೆಸಲು ಮೇ ಕೊನೆಯ ವಾರದವರೆಗೂ ಸಮಯಾವಕಾಶ ಬೇಕು ಎಂದು ರಾಜ್ಯ ಚುನಾವಣಾ ಆಯೋಗವು ತನ್ನ ವಾದ ಮಂಡಿಸುತ್ತಾ ಮನವಿ ಮಾಡಿತು. ಸಂಪೂರ್ಣ ಪ್ರಕ್ರಿಯೆ ಮುಗಿಸಲು ಜೂನ್ ವರೆಗೂ ಸಮಯ ಬೇಕಾಗಬಹುದು ಎಂದು ಆಯೋಗವು ಸುಪ್ರೀಂ ಕೋರ್ಟ್‌ಗೆ ವಿವರಿಸಿತು.
ಎಲ್ಲಾ ವಾದಗಳನ್ನು ಆಲಿಸಿದ ಸುಪ್ರೀಂ ಕೋರ್ಟ್, ಜೂನ್ 30ರ ಒಳಗೆ ಯಾವುದೇ ಕಾರಣಕ್ಕೂ ವಿಳಂಬ ಮಾಡದೆ ಚುನಾವಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಗಡುವು ನೀಡಿದೆ. ಅಲ್ಲದೆ, 'ಮತ್ತೆ ಸಮಯ ಕೇಳಿಕೊಂಡು ಬರಬೇಡಿ' ಎಂದು ರಾಜ್ಯ ಸರ್ಕಾರಕ್ಕೆ ಕಟ್ಟುನಿಟ್ಟಾದ ಎಚ್ಚರಿಕೆಯನ್ನು ನೀಡಿದೆ. ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗಲೂ ಸುಪ್ರೀಂ ಕೋರ್ಟ್‌ನಲ್ಲಿ ಬಿಬಿಎಂಪಿ ಚುನಾವಣೆ ನಡೆಸುವಂತೆ ಕೆಲವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
Advertisement