

ಬೆಂಗಳೂರು: ಐದಾರು ದಶಕಗಳಿಂದ ಅಧಿಕಾರ ಅನುಭವಿಸಿ, ಒಂಬತ್ತು ಬಾರಿ ಶಾಸಕ, ಸಂಸದ, ಕೇಂದ್ರ ಸಚಿವರು, ರಾಜ್ಯಸಭೆ ವಿಪಕ್ಷ ನಾಯಕರು, ಎಐಸಿಸಿ ಅಧ್ಯಕ್ಷರಾಗಿರುವ ನಂತರವೂ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಈಗ ಅಸಹಾಯಕರಂತೆ ಬೇಡುತ್ತಿರುವ ನಾಟಕ, ನಿಮ್ಮ ವೈಫಲ್ಯಗಳ ಪ್ರದರ್ಶನವಷ್ಟೇ ಎಂದು ಖರ್ಗೆ ವಿರುದ್ಧ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿರುವ ವಿಜಯೇಂದ್ರ, ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದದ್ದು, ಈಗ ರಾಜ್ಯದಲ್ಲೂ ಕಾಂಗ್ರೆಸ್ ಸರ್ಕಾರವೇ ಇರುವುದನ್ನು ಉಲ್ಲೇಖಿಸಿ, ಅಧಿಕಾರದಲ್ಲಿದ್ದಾಗ ಅಭಿವೃದ್ಧಿ ಮಾಡದೆ, ಈಗ ವೇದಿಕೆ ಮೇಲೆ ದಯನೀಯ ನಾಟಕವಾಡಿ ಜನರನ್ನು ಮರುಳು ಮಾಡುವುದು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ವಿಶೇಷವಾಗಿ ಕಲ್ಯಾಣ ಕರ್ನಾಟಕದ ಜನರು ಕಾಂಗ್ರೆಸ್ ಮೇಲೆ ಇಟ್ಟ ಭರವಸೆಯನ್ನು ಸ್ವಾರ್ಥ ರಾಜಕೀಯಕ್ಕಾಗಿ ಬಳಸಿಕೊಂಡಿರುವುದು ಈಗ ಸ್ಪಷ್ಟವಾಗಿದೆ ಎಂದು ಆರೋಪಿಸಿದ್ದಾರ. ಬೇಡುವ ನಾಟಕ ಆಡಬೇಡಿ ಅಧಿಕಾರವಿದ್ದಾಗ ಅಭಿವೃದ್ಧಿ ಮಾಡದೆ, ಈಗ ವೇದಿಕೆ ಮೇಲೆ ದಯನೀಯವಾಗಿ ಬೇಡುವ ನಾಟಕವಾಡಿ ಜನರನ್ನು ಮರುಳು ಮಾಡುವುದು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಪ್ರಸಿದ್ಧ ಸೋಮನಾಥ ಕ್ಷೇತ್ರದಲ್ಲಿ ದೇವರ ದರ್ಶನ ಪಡೆದ ಪ್ರಧಾನಿಯವರನ್ನು ಟೀಕಿಸುವ ಮಾನ್ಯ ಖರ್ಗೆಯವರೇ, ಇನ್ನು ಎಷ್ಟು ದಿನ ನಿಮ್ಮೊಳಗಿರುವ ನಂಜನ್ನು ಬಯಲು ಮಾಡಿಕೊಳ್ಳುತ್ತೀರಿ? ನಾಡಿನ ಇತಿಹಾಸ ಮತ್ತು ಅಸ್ಮಿತೆಯ ಮೇಲೆ ನಿಮಗೇಕೆ ಇಷ್ಟು ಅಸಹನೆ? ಸೋಮನಾಥ ಭಾರತದ ಪುನರುತ್ಥಾನದ ಸಂಕೇತ. ಅದನ್ನು ಚುನಾವಣೆಗೆ ತಳುಕು ಹಾಕುವುದು ನಿಮ್ಮ ವೈಚಾರಿಕ ದಿವಾಳಿತನವನ್ನು ತೋರಿಸುತ್ತದೆ ಎಂದಿದ್ದಾರೆ.
ನಿಮ್ಮ ಪಕ್ಷದ ನಾಯಕರು ದೇಗುಲದ ಪುನರುತ್ಥಾನಕ್ಕೂ ಅಡ್ಡಿ ಪಡಿಸಿದ್ದ ಮಹಾನುಭಾವರು. ದೇಶದ ಕೋಟ್ಯಂತರ ಹಿಂದೂಗಳ ಧಾರ್ಮಿಕ ಶ್ರದ್ಧೆಗಳ ಬಗ್ಗೆ ಮಾತನಾಡುವ ನೈತಿಕತೆ ನಿಮ್ಮ ಪಕ್ಷ ಎಂದೋ ಕಳೆದುಕೊಂಡಿದೆ. ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇತಿಹಾಸದ ಪುನರುತ್ಥಾನದ ಜೊತೆಗೆ ದೇಶದ ಭವಿಷ್ಯವನ್ನೂ ಕಟ್ಟುತ್ತಿದ್ದಾರೆ. ಮೋದಿ ಅವರ ನೇತೃತ್ವದಲ್ಲಿ, ಈ 11 ವರ್ಷಗಳಲ್ಲಿ, 25 ಕೋಟಿ ಜನರನ್ನು ಬಡತನದಿಂದ ಮೇಲೆತ್ತಲಾಗಿದೆ ಎಂದು ವಿಜಯೇಂದ್ರ ಖರ್ಗೆ ಅವರಿಗೆ ತಿರುಗೇಟು ನೀಡಿದ್ದಾರೆ.
ಒಂದು ದಿನವೂ ವಿರಮಿಸದೆ, ದೇಶದ ಅಭಿವೃದ್ಧಿಗಾಗಿ ನಿರಂತರ ಕೆಲಸ ಮಾಡುತ್ತಿರುವ ಹೆಮ್ಮೆಯ ಪ್ರಧಾನಿಗಳ ಬಗ್ಗೆ, ಸತತವಾಗಿ ಅಧಿಕಾರದ ಸ್ಥಾನದಲ್ಲಿದ್ದೂ, ಅಭಿವೃದ್ಧಿ ಕೆಲಸ ಮಾಡದೆ, ನಿಮ್ಮ ಪಕ್ಷದ ವೇದಿಕೆಯಲ್ಲಿ, ನೀವು ಏನೇ ಮಾತನಾಡಿದರೂ, ಜನರು ಖಂಡಿತ ಮರುಳಾಗುವುದಿಲ್ಲ ಎಂದಿದ್ದಾರೆ.
Advertisement