

ಬೆಂಗಳೂರು: ಧರ್ಮಸ್ಥಳದಲ್ಲಿ1990ರಿಂದ 2021ರ ನಡುವೆ ಸಂಭವಿಸಿದೆ ಎನ್ನಲಾದ 74 ಅಸಹಜ ಸಾವು ಪ್ರಕರಣಗಳ ಸಂಬಂಧ ಪ್ರತ್ಯೇಕ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲು ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ನಿರ್ದೇಶಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ಕುರಿತು ತನ್ನ ನಿಲುವು ತಿಳಿಸುವಂತೆ ಹೈಕೋರ್ಟ್, ರಾಜ್ಯ ಸರಕಾರಕ್ಕೆ ಸೂಚನೆ ನೀಡಿದೆ.
ಧರ್ಮಸ್ಥಳದಲ್ಲಿಸಾಮೂಹಿಕ ಅತ್ಯಾಚಾರಕ್ಕೀಡಾಗಿ ಕೊಲೆಯಾದ ವಿದ್ಯಾರ್ಥಿನಿ ಸೌಜನ್ಯ ತಾಯಿ ಕುಸುಮಾವತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ.ಪೂಣಚ್ಚ ಅವರಿದ್ದ ವಿಭಾಗೀಯಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿತು.
ಸೌಜನ್ಯ ತಾಯಿ ಕುಸುಮಾವತಿ ಅವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಧರ್ಮಸ್ಥಳದಲ್ಲಿ ಘಟಿಸಿರುವ 74 ಅಸಹಜ ಸಾವು ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಎಫ್‌ಐಆರ್ ದಾಖಲಿಸಬೇಕು ಮತ್ತು ಎಸ್‌ಐಟಿ ತನಿಖೆಗೆ ಸೂಚಿಸಬೇಕು ಎಂದು ಮನವಿ ಮಾಡಿದ್ದರು.
ಧರ್ಮಸ್ಥಳ ಎಂಬ ಗ್ರಾಮದ ಸಣ್ಣ ಹೊರಠಾಣೆ ಪೋಲೀಸ್ ಠಾಣಾ ವ್ಯಾಪ್ತಿಯೊಂದರಲ್ಲೇ 74 ಅಸಹಜ ಸಾವು ಪ್ರಕರಣಗಳು ವರದಿಯಾಗಿದೆ. ಈ ಪ್ರಕರಣಗಳ ತನಿಖೆ ಮಾಡಲೆಂದೇ ರಾಜ್ಯ ಸರ್ಕಾರ ಎಸ್ಐಟಿ ರಚಿಸಿದೆ. ಆದರೆ, ಎಸ್ಐಟಿಯು ಕೇವಲ ಒಂದು ಎಫ್ಐಆರ್ ದಾಖಲಿಸಿದೆ. ಉಳಿದ 74 ಕೊಲೆ, ನಾಪತ್ತೆ, ಸಾವು ಪ್ರಕರಣಗಳಿಗೆ ಪ್ರತ್ಯೇಕ ಎಫ್ಐಆರ್ ದಾಖಲಿಸಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.
ಅವರ ಅರ್ಜಿಯನ್ನು ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ವಲ್ಲೂರಿ ಕಾಮೇಶ್ವರ್ ರಾವ್ ಅವರ ಪೀಠವು ಆಲಿಸಿದೆ. ನ್ಯಾಯಾಲಯದಲ್ಲಿ ಕುಸುಮಾವತಿ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಎಸ್ ಬಾಲನ್, “ಧರ್ಮಸ್ಥಳದ ಪೋಲೀಸ್ ಠಾಣಾ ವ್ಯಾಪ್ತಿಯೊಂದರಲ್ಲೇ 74 ಅಸಹಜ ಸಾವುಗಳು ನಡೆದಿರುವುದಾಗಿ ವರದಿಯಾಗಿದೆ.
ಈ ಪ್ರಕರಣಗಳ ತನಿಖೆ ಮಾಡಲೆಂದೇ ರಾಜ್ಯ ಸರ್ಕಾರ ಎಸ್ಐಟಿ ರಚಿಸಿದೆ. ಆದರೆ, ಎಸ್ಐಟಿ ಕೇವಲ ಒಂದು ಎಫ್ಐಆರ್ ದಾಖಲಿಸಿದೆ. ಉಳಿದ 74 ಕೊಲೆ, ನಾಪತ್ತೆ, ಸಾವು ಪ್ರಕರಣಗಳಿಗೆ ಪ್ರತ್ಯೇಕ ಎಫ್ಐಆರ್ ದಾಖಲಿಸಿಲ್ಲ. ಇದು ಸರಿಯಾದ ಕ್ರಮವಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.
ಅವರ ವಾದಕ್ಕೆ ಪ್ರತಿವಾದ ಮಂಡಿಸಿದ ಸರ್ಕಾರದ ಪರ ವಕೀಲರು, ಸರ್ಕಾರಕ್ಕೆ ಇನ್ನೂ ಪ್ರಕರಣದ ದಾಖಲೆಗಳನ್ನು ಸಲ್ಲಿಸಿಲ್ಲ. ದಾಖಲೆ ಇಲ್ಲದೇ ಸರ್ಕಾರ ಅಭಿಪ್ರಾಯ ಹೇಳಲು ಹೇಗೆ ಸಾಧ್ಯ? ಎಂದಿದ್ದಾರೆ. ವಾದ-ಪ್ರತಿವಾದ ಆಲಿಸಿದ ಪೀಠವು, ಪ್ರಕರಣ ಇರುವುದು 74 ಅಸಹಜ ಸಾವುಗಳಿಗೆ ಪ್ರತ್ಯೇಕ ಎಫ್ಐಆರ್ ದಾಖಲಿಸಿಲ್ಲ ಎಂಬುದರ ಕುರಿತು. ಸರ್ಕಾರವು ನ್ಯಾಯಾಲಯದಲ್ಲಿ ಲಭ್ಯವಿರುವ ದಾಖಲೆಯನ್ನೇ ಪಡೆದುಕೊಂಡು ಅಭಿಪ್ರಾಯ ಸಲ್ಲಿಸಬೇಕು ಎಂದು ಸೂಚಿಸಿದ್ದಾರೆ. ಅರ್ಜಿ ವಿಚಾರಣೆಯನ್ನು ಫೆಬ್ರವರಿ 3ಕ್ಕೆ ಮಂದೂಡಿದ್ದಾರೆ.
Advertisement