

ಬೆಂಗಳೂರು: ವೇತನ ಹಿಂಬಾಕಿ ಮತ್ತು ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಎಸ್ಆರ್ ಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳ ನೌಕರರು ಮತ್ತೆ ಮುಷ್ಕರ ಘೋಷಿಸಿದ್ದಾರೆ.
ನಾಲ್ಕು ಸರ್ಕಾರಿ ಸಾರಿಗೆ ನಿಗಮಗಳ ನೌಕರರು ಜನವರಿ 29 ರಂದು 'ಬೆಂಗಳೂರು ಚಲೋ' ಪ್ರತಿಭಟನೆ ನಡೆಸುವುದಾಗಿ ಶನಿವಾರ ಘೋಷಿಸಿದ್ದಾರೆ.
ಸರ್ಕಾರದೊಂದಿಗೆ ಪದೇ ಪದೇ ಮಾತುಕತೆ ನಡೆಸಿದರೂ ಯಾವುದೇ ಫಲಿತಾಂಶ ಸಿಗದ ಹಿನ್ನೆಲೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಗಳ ಜಂಟಿ ಕ್ರಿಯಾ ಸಮಿತಿಯು ಈ ನಿರ್ಧಾರವನ್ನು ಪ್ರಕಟಿಸಿದೆ.
ಈಗಾಗಲೇ ಬೆಂಗಳೂರು ಚಲೋ ಚಳವಳಿ ಕುರಿತಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಜಂಟಿ ಕ್ರಿಯಾ ಸಮಿತಿ ಪತ್ರ ಬರೆದಿದೆ. ಕಳೆದ 38 ತಿಂಗಳಿನಿಂದ ವೇತನ ಹಿಂಬಾಕಿ ಬಂದಿಲ್ಲ. ಈ ಬಗ್ಗೆ ಹಲವು ಬಾರಿ ನಾವು ಮನವಿ ಮಾಡಿದರೂ ಅದಕ್ಕೆ ಸ್ಪಂದಿಸುತ್ತಿಲ್ಲ. ಹೀಗಾಗಿ ನಾವು ಹೋರಾಟದ ಹಾದಿ ಹಿಡಿಯಬೇಕಿದೆ ಎಂದು ಕ್ರಿಯಾಸಮಿತಿ ಅಧ್ಯಕ್ಷ ಅನಂತಸುಬ್ಬರಾವ್ ತಿಳಿಸಿದ್ದಾರೆ.
ಕಾರ್ಮಿಕ ಸಂಘಟನೆಗಳ ಪ್ರಕಾರ, ಸಾರಿಗೆ ನೌಕರರಿಗೆ ಕಳೆದ 38 ತಿಂಗಳಿನಿಂದ ಬಾಕಿ ವೇತನ ಬಂದಿಲ್ಲ. ಇದಲ್ಲದೆ, ಜನವರಿ 1, 2024 ರಿಂದ ಬರಬೇಕಿದ್ದ ವೇತನ ಪರಿಷ್ಕರಣೆ ಇನ್ನೂ ಜಾರಿಗೆ ಬಂದಿಲ್ಲ. ರಾಜ್ಯಾದ್ಯಂತ ದೈನಂದಿನ ಸಾರ್ವಜನಿಕ ಸಾರಿಗೆ ಸೇವೆಗಳನ್ನು ಖಚಿತಪಡಿಸಿಕೊಳ್ಳುವ ನೌಕರರಲ್ಲಿ ಈ ವಿಳಂಬವು ಆರ್ಥಿಕ ಒತ್ತಡವನ್ನು ಹೆಚ್ಚಿಸಿದೆ ಎಂದು ಯೂನಿಯನ್ ನಾಯಕರು ಹೇಳಿದ್ದಾರೆ.
ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ
ಜನವರಿ 29 ರಂದು ಬೆಳಗ್ಗೆ 10 ರಿಂದ ಸಂಜೆ 4 ರವರೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸಾರಿಗೆ ನೌಕರರು ಪ್ರತಿಭಟನೆ ನಡೆಸಲಿದ್ದು, ಸಾರಿಗೆ ಸೇವೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.
ಈ ಪ್ರತಿಭಟನೆ ಶಾಂತಿಯುತವಾಗಿರುತ್ತದೆ ಎಂದು ಒಕ್ಕೂಟಗಳು ತಿಳಿಸಿದೆ. ಸಮಿತಿ ಸದಸ್ಯರಾದ ಎಚ್ ವಿ ಅನಂತಸುಬ್ಬ ರಾವ್, ಬಿ ಜಯದೇವ ಅರಸು, ಎಚ್ ಡಿ ರೇವಪ್ಪ, ಜಗದೀಶ್ ಎಚ್ ಆರ್ ಮತ್ತು ರಾಜೇಂದ್ರ ಗೌಡ ಜಿ ಕೆ ಅವರು, ಸಾರಿಗೆ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದ್ದಾರೆ.
Advertisement