
ಕರ್ನಾಟಕದಲ್ಲಿ ಮತ್ತೊಂದು ರಾಸಲೀಲೆ ಪ್ರಕರಣ ಭಾರಿ ಸುದ್ದಿಗೆ ಗ್ರಾಸವಾಗಿದ್ದು, ಡಿಜಿಪಿ ರಾಮಚಂದ್ರರಾವ್ ಅವರು ತಮ್ಮ ಕಚೇರಿಯಲ್ಲೇ ಮಹಿಳೆಯರ ಜೊತೆ ರೊಮ್ಯಾನ್ಸ್ ನಲ್ಲಿ ತೊಡಗಿದ್ದ ವಿಡಿಯೋ ವೈರಲ್ ಆಗತೊಡಗಿದೆ. ಖಾಕಿ ಸಮವಸ್ತ್ರದಲ್ಲೇ ಕಚೇರಿಯ ಕುರ್ಚಿ ಮೇಲೆ ಕುಳಿತು ಯುವತಿಯನ್ನು ಚುಂಬಿಸುವ ದೃಶ್ಯಗಳಿದ್ದು, ಈ ಬಗ್ಗೆ ವರದಿ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಗೃಹ ಇಲಾಖೆಗೆ ಸೂಚನೆ ನೀಡಿದ್ದಾರೆ. ಎಷ್ಟೇ ದೊಡ್ಡವರಾದ್ರು ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು. ಈ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿ ವರದಿ ನೀಡುವಂತೆ ಗೃಹ ಇಲಾಖೆಗೆ ಸೂಚಿಸಿದ್ದೇನೆ ಎಂದು ಸಿಎಂ ತಿಳಿಸಿದ್ದಾರೆ. ಈ ಆರೋಪವನ್ನು ಡಿಜಿಪಿ ರಾಮಚಂದ್ರರಾವ್ ಅವರು ಅಲ್ಲಗಳೆದಿದ್ದು, ಅದು ಎಐ ವಿಡಿಯೋ, ನನ್ನ ವಿರುದ್ಧ ದೊಡ್ಡ ಷಡ್ಯಂತ್ರ ನಡೆದಿದೆ ಎಂದು ಆರೋಪಿಸಿದ್ದಾರೆ.'ಇದು ನನ್ನ ತೇಜೋವಧೆ ಮಾಡಲು ನಡೆಸಿರುವ ವ್ಯವಸ್ಥಿತ ಷಡ್ಯಂತ್ರವಾಗಿದೆ. ನಾನು ಕೂಡ ಇಂದು ಆ ವಿಡಿಯೋವನ್ನು ನೋಡಿದ್ದೇನೆ. ಅದು ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆ (AI) ಬಳಸಿ ಸೃಷ್ಟಿಸಿದ ಅಥವಾ ಎಡಿಟ್ ಮಾಡಿದ ವಿಡಿಯೋ ಆಗಿದೆ ಎಂದು ಹೇಳಿದ್ದಾರೆ.
ದೇಶಾದ್ಯಂತ ವೋಟ್ ಚೋರಿ ಕುರಿತಂತೆ ಕಾಂಗ್ರೆಸ್ ನಿರಂತರ ಆರೋಪಗಳನ್ನು ಮಾಡುತ್ತಿದ್ದು ಇದರ ಮಧ್ಯೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆಗಳನ್ನು ಇವಿಎಂ ಬದಲಿಗೆ ಬ್ಯಾಲೆಟ್ ಪೇಪರ್‌ಗಳ ಮೂಲಕ ನಡೆಸಲು ರಾಜ್ಯ ಚುನಾವಣಾ ಆಯೋಗ ನಿರ್ಧರಿಸಿದೆ. ಮೇ 25ರ ನಂತರ ನಡೆಯಲಿರುವ ಈ ಚುನಾವಣೆಗಳಲ್ಲಿ ಮತಪತ್ರಗಳ ಬಳಕೆಗೆ ಚುನಾವಣಾ ಆಯೋಗವು ತನ್ನದೇ ಆದ ಕಾರಣಗಳನ್ನು ನೀಡಿದ್ದು, ಬ್ಯಾಲೆಟ್ ಪೇಪರ್‌ಗಳನ್ನು ಬಳಸಬಾರದು ಎಂದು ಸುಪ್ರೀಂ ಕೋರ್ಟ್ ಎಲ್ಲಿಯೂ ಹೇಳಿಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ. ಅಲ್ಲದೆ, ಚುನಾವಣಾ ಆಯೋಗವು ಒಂದು ಸ್ವತಂತ್ರ ಸಂಸ್ಥೆಯಾಗಿದ್ದು, ಮತಪತ್ರಗಳ ಬಳಕೆ ತಮ್ಮ ನಿರ್ಧಾರ ಎಂದು ತಿಳಿಸಿದೆ. ಆದಾಗ್ಯೂ ಈ ನಿರ್ಧಾರ ಹೊಸ ಚರ್ಚೆಗೆ ಕಾರಣವಾಗಿದೆ.
ಅಬಕಾರಿ ಇಲಾಖೆಯಲ್ಲಿ ಬಯಲಾಗಿರುವ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ದೂರುದಾರ ಲಕ್ಷ್ಮೀನಾರಾಯಣ್ ಅವರು ಸಚಿವ ಆರ್.ಬಿ. ತಿಮ್ಮಾಪುರ ಅವರ ವಿರುದ್ಧ ಲೋಕಾಯುಕ್ತಕ್ಕೆ ಮತ್ತೊಂದು ದೂರು ಸಲ್ಲಿಸಿದ್ದಾರೆ. ಲಂಚಕ್ಕೆ ಬೇಡಿಕೆಯಿಟ್ಟ ಪ್ರಕರಣದಲ್ಲಿ ಸಚಿವರ ಪಾತ್ರದ ಕುರಿತು, ಅಬಕಾರಿ ಉಪ ಆಯುಕ್ತ (ಡಿಸಿ) ಜಗದೀಶ್ ನಾಯ್ಕ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಸಹಿತ ದಾಖಲೆಗಳನ್ನು ದೂರುದಾರ ಲಕ್ಷ್ಮೀನಾರಾಯಣ್ ಲೋಕಾಯುಕ್ತಕ್ಕೆ ಸಲ್ಲಿಕೆ ಮಾಡಿದ್ದಾರೆ. ದೂರು ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಲಕ್ಷ್ಮೀನಾರಾಯಣ್, "ಟ್ರ್ಯಾಪ್ ಆದಾಗ ಮೂವರ ಬಂಧನವಾಗಿದೆ. ಮಂತ್ರಿಯವರಿಗೆ ಎಷ್ಟು ಹಣ ಕೊಡಬೇಕಿದೆ ಎಂದು ಅಬಕಾರಿ ಡಿಸಿಯವರು ಬಹಿರಂಗವಾಗಿ ಪ್ರಸ್ತಾಪಿಸಿದ್ದರು. ಆದ್ದರಿಂದ ಮಂತ್ರಿಯವರ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳುವಂತೆ ದೂರು ನೀಡಿದ್ದೇವೆ ಎಂದರು.
ಪೋಕ್ಸೊ ಸಂತ್ರಸ್ತೆ ಹೆಸರು ಮತ್ತು ವಿಳಾಸ ಬಹಿರಂಗಪಡಿಸಿದ್ದ ಮಾಜಿ ಸಚಿವ ಬಿ. ಶ್ರೀರಾಮುಲು ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಬಳ್ಳಾರಿ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಮತ್ತು ಬಾಲ ನ್ಯಾಯ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಭಾಷಣದ ವೇಳೆ ಸಂವೇದನಾಶೀಲ ವಿವರ ಉಲ್ಲೇಖಿಸಿ, ಪೋಕ್ಸೋ ಕಾಯ್ದೆಯನ್ನು ಸ್ಪಷ್ಟವಾಗಿ ಉಲ್ಲಂಘಿಸಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ. ಜ.17ರಂದು ನಡೆದ ಬಿಜೆಪಿಯ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡುವಾಗ ಶ್ರೀರಾಮುಲು ಬಳ್ಳಾರಿ ಗಾಂಜಾ, ಡ್ರಗ್ಸ್ ಹಬ್ ಆಗಿದೆ. ಡ್ರಗ್ ಸೇವಿಸಿಯೇ ಶಾಲಾ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಹೇಳುತ್ತಾ, ಪೋಕ್ಸೋ ಕೇಸ್‌ನ ಸಂತ್ರಸ್ತೆಯ ಹೆಸರು, ವಿಳಾಸ, ತರಗತಿ ಹಾಗೂ ಓದುವ ಶಾಲೆಯ ಹೆಸರನ್ನೂ ಬಗಿರಂಗಪಡಿಸಿದ್ದರು.
ಮೈಸೂರು ಕೇಂದ್ರ ಬಸ್ ನಿಲ್ದಾಣದ ಬಳಿಯಿರುವ ಖಾಸಗಿ ಹೋಟೆಲ್ವೊಂದರಲ್ಲಿ ಆರ್ಎಫ್ಒ ಮೃತದೇಹ ಪತ್ತೆಯಾಗಿದೆ. ಮೃತನನ್ನು ಟಿ ನರಸೀಪುರ ಆರ್ಎಫ್ಒ ಕಾಂತರಾಜ್ ಚೌಹಾಣ್ ಎಂದು ತಿಳಿದುಬಂದಿದೆ. ಸದ್ಯ ಅವರ ಸಾವಿನ ಬಗ್ಗೆ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿದೆ. 15 ದಿನದ ಹಿಂದೆಯಷ್ಟೇ ಕಾಂತರಾಜ್ ಚೌಹಾಣ್ ನರಸೀಪುರಕ್ಕೆ ವರ್ಗವಾಗಿದ್ದರು. ಇದೀಗ ಅನುಮಾನಾಸ್ಪದ ರೀತಿಯಲ್ಲಿ ಅವರ ಶವಪತ್ತೆಯಾಗಿದ್ದು ಘಟನಾ ಸ್ಥಳಕ್ಕೆ ಲಷ್ಕರ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Advertisement