

ಬೆಂಗಳೂರು: ಉನ್ನತ ಪೊಲೀಸ್ ಅಧಿಕಾರಿ ಡಿಜಿಪಿ ರಾಮಚಂದ್ರ ರಾವ್ ತಮ್ಮ ಕಚೇರಿಯಲ್ಲಿ ಸಮವಸ್ತ್ರದಲ್ಲಿರುವಾಗ ಮಹಿಳೆಯೊಂದಿಗೆ ಅಶ್ಲೀಲ ಭಂಗಿಯಲ್ಲಿ ಅಸಭ್ಯವಾಗಿ ವರ್ತಿಸುತ್ತಿರುವ ವಿಡಿಯೋ ವೈರಲ್ ಆಗಿದ್ದು, ಕರ್ನಾಟಕ ಪೊಲೀಸ್ ಇಲಾಖೆಗೆ ತೀವ್ರ ಮುಜುಗರ ಉಂಟುಮಾಡಿದೆ.
ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ (DCER) ಮುಖ್ಯಸ್ಥರಾಗಿರುವ ಪೊಲೀಸ್ ಮಹಾನಿರ್ದೇಶಕ (DGP) ಆರ್. ರಾಮಚಂದ್ರ ರಾವ್ ಅವರು ಸಮವಸ್ತ್ರದಲ್ಲಿದ್ದಾಗ ಮಹಿಳೆಗೆ ಮುತ್ತಿಕ್ಕಿ ಮುದ್ದಾಡುತ್ತಿರುವುದನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ, ರಾಮಚಂದ್ರ ರಾವ್ ಅವರು ನಿನ್ನೆ ಸಾಯಂಕಾಲ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರ ನಿವಾಸಕ್ಕೆ ದೌಡಾಯಿಸಿದ್ದರು. ಆದರೆ ಗೃಹ ಸಚಿವರು ಭೇಟಿಗೆ ಸಿಕ್ಕಿರಲಿಲ್ಲ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅಧಿಕಾರಿ, ಈ ವಿಡಿಯೊ ಎಐ ತಂತ್ರಜ್ಞಾನ ಬಳಸಿ ಮಾಡಿರುವ ಕೃತಕ ಸೃಷ್ಟಿ. ಈ ವಿಷಯದ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದರು.
ನನಗೆ ಆಘಾತವಾಗಿದೆ, ವಿಡಿಯೊ ಎಐ ಸೃಷ್ಟಿ. ನಾನು ವಕೀಲರನ್ನು ಭೇಟಿಯಾಗಿ ಸುಳ್ಳು ಸುದ್ದಿ ಹರಡುವವರ ವಿರುದ್ಧ ಪ್ರಕರಣ ದಾಖಲಿಸುತ್ತೇನೆ ಎಂದರು.
ಈ ವಿಡಿಯೋವನ್ನು ತಮ್ಮ ಕಚೇರಿಯಲ್ಲಿ ಚಿತ್ರೀಕರಿಸಲಾಗಿದೆಯೇ ಎಂದು ಕೇಳಿದಾಗ, ನಾನು ಎಂಟು ವರ್ಷಗಳ ಹಿಂದೆ ಬೆಳಗಾವಿಯಲ್ಲಿ ಸೇವೆ ಸಲ್ಲಿಸುತ್ತಿದ್ದೆ ಎಂದರು.
ಆದರೆ, ಅವರು ಬೆಳಗಾವಿಯಲ್ಲಿ ತಮ್ಮ ಸೇವಾವಧಿ ಮತ್ತು ಗೃಹ ಇಲಾಖೆಯನ್ನು ಮುಜುಗರಕ್ಕೀಡು ಮಾಡಿದ ವಿಡಿಯೊ ನಡುವಿನ ಸಂಬಂಧವನ್ನು ವಿವರಿಸಲಿಲ್ಲ ಅಥವಾ ಸ್ಪಷ್ಟಪಡಿಸಲಿಲ್ಲ.
ಆಡಿಯೊ, ವಿಡಿಯೊ ವೈರಲ್
ಈ ವಿಡಿಯೋ ವೈರಲ್ ಆದ ನಂತರ, ರಾಮಚಂದ್ರ ರಾವ್ ಕಚೇರಿಯಲ್ಲಿ ಸಲುಗೆಯಿಂದ ವರ್ತಿಸಿದ ಮಹಿಳೆ ಜೊತೆ ಫೋನ್ ನಲ್ಲಿ ಮಾತನಾಡಿದ್ದು ಎನ್ನಲಾದ ಆಡಿಯೋ ಕ್ಲಿಪ್ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಮೊದಲು ವಿಡಿಯೋ, ಈಗ ಈ ಆಡಿಯೋ ಗಂಭೀರ ಕಳವಳವನ್ನು ಹುಟ್ಟುಹಾಕಿ ಸರ್ಕಾರಕ್ಕೆ ತೀವ್ರ ಮುಜುಗರ ಉಂಟುಮಾಡಿ ಕಠಿಣ, ಪಾರದರ್ಶಕ ಮತ್ತು ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಲಾಗಿದೆ. ಇಂತಹ ಘಟನೆಗಳನ್ನು ಹಗುರವಾಗಿ ಪರಿಗಣಿಸಲಾಗುವುದಿಲ್ಲ ಮತ್ತು ಸರಿಯಾದ ತನಿಖೆಯ ಮೂಲಕ ಸತ್ಯ ತಿಳಿಯಬೇಕೆಂದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ ಪರಮೇಶ್ವರ್ ಹೇಳಿದ್ದಾರೆ.
47 ಸೆಕೆಂಡುಗಳ ದಿನಾಂಕವಿಲ್ಲದ ವಿಡಿಯೊವನ್ನು ಅವರ ಕೊಠಡಿಯೊಳಗೆ ಮೊಬೈಲ್ ಫೋನ್ ಬಳಸಿ ಚಿತ್ರೀಕರಿಸಲಾಗಿದೆ ಎಂದು ತೋರುತ್ತದೆ, ಇದು ಬಹು ವಿಡಿಯೊ ತುಣುಕುಗಳ ಸಂಕಲನವಾಗಿದೆ ಎಂದು ಹೇಳಲಾಗುತ್ತದೆ.
ಕರ್ತವ್ಯದ ಸಮಯದಲ್ಲಿ ಸರ್ಕಾರಿ ಕಚೇರಿಯೊಳಗೆ ಈ ಕೃತ್ಯಗಳು ನಡೆದಿವೆ ಎಂದು ಹೇಳಲಾಗುತ್ತಿರುವುದರಿಂದ ಈ ಘಟನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
1993 ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಆರ್. ರಾಮಚಂದ್ರ ರಾವ್, 2025 ರ ಆರಂಭದಲ್ಲಿ, ಅವರ ಮಲಮಗಳು, ನಟಿ ರನ್ಯಾ ರಾವ್ ಅವರನ್ನು ಅಕ್ರಮ ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ ಬಂಧಿಸಿದ ನಂತರ ಸುದ್ದಿಯಲ್ಲಿದ್ದರು. ರನ್ಯಾ ರಾವ್ ಪ್ರಸ್ತುತ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಸೆರೆವಾಸ ಅನುಭವಿಸುತ್ತಿದ್ದಾರೆ.
ರನ್ಯಾ ರಾವ್ ಮಲತಂದೆ ರಾಮಚಂದ್ರ ರಾವ್
ಕನ್ನಡ ಚಿತ್ರ ನಟಿ ಹರ್ಷವರ್ಧಿನಿ ರನ್ಯಾ ಅಲಿಯಾಸ್ ರನ್ಯಾ ರಾವ್ ಅವರ ಮಲತಂದೆ. ದುಬೈನಿಂದ ಭಾರತಕ್ಕೆ 12.56 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಚಿನ್ನವನ್ನು ಅಕ್ರಮವಾಗಿ ಆಮದು ಮಾಡಿಕೊಂಡು ತಂದಿರುವ ಆರೋಪವಿದೆ. ಹರ್ಷವರ್ಧಿನಿ ರನ್ಯಾ ರಾವ್ ಮತ್ತು ಇತರ ಇಬ್ಬರು ಉದ್ಯಮಿಗಳಾದ ತರುಣ್ ರಾಜು ಮತ್ತು ಆಭರಣ ವ್ಯಾಪಾರಿ ಸಾಹಿಲ್ ಜೈನ್ ಹೆಸರು ಕೇಳಿಬರುತ್ತಿದೆ.
ಮಾರ್ಚ್ 3, 2025 ರಂದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದುಬೈನಿಂದ ಕಳ್ಳಸಾಗಣೆ ಮಾಡಲಾಗಿತ್ತು ಎನ್ನಲಾದ 14.8 ಕಿಲೋಗ್ರಾಂಗಳಷ್ಟು ಚಿನ್ನದೊಂದಿಗೆ ರನ್ಯಾ ಅವರನ್ನು ಬಂಧಿಸಲಾಯಿತು.
ನಂತರದ ತನಿಖೆಗಳಲ್ಲಿ ರನ್ಯಾ 2023 ಮತ್ತು 2025 ರ ನಡುವೆ ದುಬೈಗೆ 45 ಬಾರಿ ಏಕಾಂಗಿಯಾಗಿ ಪ್ರವಾಸ ಮಾಡಿರುವುದು ಬಹಿರಂಗವಾಗಿದ್ದು, ವ್ಯಾಪಕ ಕಳ್ಳಸಾಗಣೆ ಜಾಲದಲ್ಲಿ ಭಾಗಿಯಾಗಿದ್ದ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ.
ರನ್ಯಾ ಪ್ರಸ್ತುತ ಬೆಂಗಳೂರು ಕೇಂದ್ರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.
Advertisement