

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಐದು ನಿಗಮಗಳಿಗೆ ಬ್ಯಾಲೆಟ್ ಪೇಪರ್ ಬಳಸಿ ಚುನಾವಣೆ ನಡೆಸುವ ರಾಜ್ಯ ಸರ್ಕಾರದ ಕ್ರಮಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತ ಪಡಿಸಿದೆ. ಆದರೆ ಕಾಂಗ್ರೆಸ್ ನಾಯಕರು ತಮಗೆ ಯಾವುದೇ ಸಮಸ್ಯೆ ಕಾಣುತ್ತಿಲ್ಲ, ಬ್ಯಾಲೆಟ್ ಪೇಪರ್ ಬಳಸಿ ಚುನಾವಣೆ ಎದುರಿಸಲು ತಯಾರಾಗಿರುವುದಾಗಿ ತಿಳಿಸಿದ್ದಾರೆ.
ಬ್ಯಾಲೆಟ್ ಪೇಪರ್ ವ್ಯವಸ್ಥೆಗೆ ಸಾಕಷ್ಟು ಮಾನವಶಕ್ತಿ ಬೇಕಾಗುತ್ತದೆ ಹಾಗೂ ಎಣಿಕೆಗೆ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ ಎಂದು ಎರಡು ಪಕ್ಷದ ನಾಯಕರು ಅಭಿಪ್ರಾಯ ಪಟ್ಟಿದ್ದಾರೆ.
ಬಿಬಿಎಂಪಿಯ ಮಾಜಿ ವಿರೋಧ ಪಕ್ಷದ ನಾಯಕ ಮತ್ತು ಬಿಜೆಪಿ ನಾಯಕ ಎನ್.ಆರ್. ರಮೇಶ್ ಮಾತನಾಡಿ ಬ್ಯಾಲೆಟ್ ಪೇಪರ್ ವ್ಯವಸ್ಥೆಯು ಮತದಾನದ ಅವ್ಯವಸ್ಥೆಗೆ ಅನುಕೂಲಕರವಾಗಿದೆ ಎಂದು ಆರೋಪಿಸಿದರು. 2001 ರವರೆಗೆ, ಕಾಂಗ್ರೆಸ್ ಪಕ್ಷವು ಬೆಂಗಳೂರು ನಗರದ ಮೇಲೆ ಹಿಡಿತ ಸಾಧಿಸಿತ್ತು. ಬ್ಯಾಲೆಟ್ ಪೇಪರ್ ಬಳಸಿ ಚುನಾವಣೆಗಳು ನಡೆದಿದ್ದರಿಂದ ಇದು ಸಾಧ್ಯವಾಯಿತು.
ಇದರ ನಂತರ, ಎಲೆಕ್ಟ್ರಾನಿಕ್ ಮತಯಂತ್ರಗಳನ್ನು (ಇವಿಎಂ) ಬಳಸಲಾಯಿತು, 2010 ಮತ್ತು 2015 ರ ಚುನಾವಣೆಗಳಲ್ಲಿ, 198 ವಾರ್ಡ್‌ಗಳಲ್ಲಿ, ಬಿಜೆಪಿ ಕ್ರಮವಾಗಿ 112 ಮತ್ತು 100 ವಾರ್ಡ್‌ಗಳನ್ನು ಗೆದ್ದಿತು ಎಂದು ರಮೇಶ್ ಹೇಳಿದರು. ಬೆಂಗಳೂರು ಸೆಂಟ್ರಲ್ ಸಿಟಿ ಕಾರ್ಪೊರೇಷನ್ ಹೊರತುಪಡಿಸಿ, ಬಿಜೆಪಿ ಚುನಾವಣೆಗಳನ್ನು ಗೆಲ್ಲುವ ವಿಶ್ವಾಸ ಹೊಂದಿದೆ ಮತ್ತು ಇದನ್ನು ತಡೆಯಲು ಮತಪತ್ರಗಳನ್ನು ಬಳಸಲಾಗುತ್ತಿದೆ ಎಂದು ಆರೋಪಿಸಿದರು.
ಮಾಜಿ ಮೇಯರ್ ಮತ್ತು ಕಾಂಗ್ರೆಸ್ ನಾಯಕಿ ಗಂಗಾಂಬಿಕೆ ಮಲ್ಲಿಕಾರ್ಜುನ್ ಮಾತನಾಡಿ, ಬ್ಯಾಲೆಟ್ ವ್ಯವಸ್ಥೆಗೆ ಹಿಂತಿರುಗುವುದರಿಂದ ಅನುಕೂಲಗಳು ಮತ್ತು ಅನಾನುಕೂಲಗಳು ಎರಡೂ ಇವೆ. ಇವಿಎಂಗಳ ಬಗ್ಗೆ ಜನರು ಮತ್ತು ಸಾರ್ವಜನಿಕ ಪ್ರತಿನಿಧಿಗಳಲ್ಲಿ ಸಾಕಷ್ಟು ಗೊಂದಲಗಳಿವೆ. ಇವಿಎಂಗಳನ್ನು ತಿರುಚಬಹುದು ಎಂದು ಅವರು ಭಾವಿಸುತ್ತಾರೆ.
ಅವರು ಚಲಾಯಿಸಿದ ಮತಗಳು ತಮ್ಮ ಆಯ್ಕೆ ಮಾಡಿದ ಅಭ್ಯರ್ಥಿಗಳಿಗೆ ಹೋಗುತ್ತಿವೆಯೇ ಎಂಬ ಅನುಮಾನವಿದೆ. ಆದ್ದರಿಂದ ಬ್ಯಾಲೆಟ್ ವ್ಯವಸ್ಥೆಗೆ ಮರಳುವುದರಿಂದ ಅವರ ಅನುಮಾನಗಳು ದೂರವಾಗುತ್ತವೆ ಮತ್ತು ಅವರು ಆತ್ಮವಿಶ್ವಾಸದಿಂದಿರಬಹುದು ಎಂದು ಗಂಗಾಂಬಿಕೆ ಹೇಳಿದರು.
ಬ್ಯಾಲೆಟ್ ವ್ಯವಸ್ಥೆಗೆ ಹೆಚ್ಚಿನ ಮಾನವಶಕ್ತಿ ಬೇಕಾಗುತ್ತದೆ ಎಂದು ಅವರು ಹೇಳಿದರು. ತ್ವರಿತವಾಗಿ ಫಲಿತಾಂಶಗಳನ್ನು ನೀಡುವ ಇವಿಎಂಗಳಿಗಿಂತ ಭಿನ್ನವಾಗಿ, ಬ್ಯಾಲೆಟ್ ವ್ಯವಸ್ಥೆಯು ಫಲಿತಾಂಶಗಳನ್ನು ಘೋಷಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು ಬ್ಯಾಲಟ್ ಪೇಪರ್ ದೋಷಗಳ ಬಗ್ಗೆ ವಿವರಿಸಿದ್ದಾರೆ.
2001 ರಲ್ಲಿ ಬೆಂಗಳೂರು ಮಹಾನಗರ ಪಾಲಿಕೆಗೆ ಮೊದಲ ಚುನಾವಣೆಯನ್ನು ಬ್ಯಾಲೆಟ್ ವ್ಯವಸ್ಥೆಯೊಂದಿಗೆ ಎದುರಿಸಿದ ಮಾಜಿ ಕಾರ್ಪೊರೇಟರ್ ಎಂ ಶಿವರಾಜ್ ಮಾತನಾಡಿ, ಬ್ಯಾಲೆಟ್‌ಗಳನ್ನು ಬಳಸುವುದರಲ್ಲಿ ಯಾವುದೇ ಸಮಸ್ಯೆ ಕಾಣುತ್ತಿಲ್ಲ ಎಂದು ಹೇಳಿದರು. "ರಾಜ್ಯ ಚುನಾವಣಾ ಆಯೋಗವು ಸರ್ಕಾರದ ಜೊತೆ ಚರ್ಚಿಸಿದ ನಂತರ, ಬ್ಯಾಲೆಟ್ ವ್ಯವಸ್ಥೆಯನ್ನು ಬಳಸಿಕೊಂಡು ಚುನಾವಣೆಗಳನ್ನು ನಡೆಸಲು ನಿರ್ಧರಿಸಿದೆ ಎಂದರು.
ನಾವು ಯಾವುದನ್ನೂ ವಿರೋಧಿಸುವ ಮೊದಲು, ನಾವು ಮೊದಲ ಜಿಬಿಎ ಚುನಾವಣೆಯನ್ನು ಎದುರಿಸಬೇಕು ಮತ್ತು ಮುಂದಿನ ಚುನಾವಣೆಯಲ್ಲಿ, ನಮಗೆ ಬ್ಯಾಲೆಟ್‌ಗಳು ಅಥವಾ ಇವಿಎಂಗಳು ಬೇಕಾದರೆ ನಾವು ದೃಢ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಶಿವರಾಜ್ ಹೇಳಿದರು. ಬ್ಯಾಲೆಟ್ ಅಥವಾ ಇವಿಎಂ ಯಾವುದಾದರೂ ಸರಿ, ಯಾರು ಗೆಲ್ಲುತ್ತಾರೆ ಎಂಬುದನ್ನು ಜನರು ನಿರ್ಧರಿಸುತ್ತಾರೆ ಮತ್ತು ನಾವು ಮತದಾರರನ್ನು ಗೌರವಿಸಬೇಕು ಎಂದು ಅವರು ಹೇಳಿದರು.
Advertisement