

ಬೆಂಗಳೂರು: 1984 ರಲ್ಲಿ ಅಮೃತಸರದ ಸುವರ್ಣ ಮಂದಿರದಲ್ಲಿ ನಡೆದ ಆಪರೇಷನ್ ಬ್ಲೂ ಸ್ಟಾರ್ ಕಾರ್ಯಾಚರಣೆಯಲ್ಲಿ ಗಾಯಗೊಂಡಿದ್ದ ಮಾಜಿ ಸೈನಿಕ ಇಳಾಳ ಹುಲ್ಲಪ್ಪ (65) ಸುದೀರ್ಘ ಹೋರಾಟದಲ್ಲಿ ಜಯಗಳಿಸಿದ್ದಾರೆ.
41 ವರ್ಷಗಳ ನಂತರ, ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ ವೀರಪ್ಪ ಅವರ ಮಧ್ಯಸ್ಥಿಕೆಯಿಂದ ಕೊಪ್ಪಳದಲ್ಲಿ ಎರಡು ಎಕರೆ ಭೂಮಿ ಪಡೆದಿದ್ದಾರೆ. ಕುಷ್ಟಗಿ ತಾಲ್ಲೂಕಿನ ಗುಡ್ಡದ ದೇವಲಾಪುರದ ಮೂಲದ ಹುಲ್ಲಪ್ಪ ಆಪರೇಷನ್ ಬ್ಲೂ ಸ್ಟಾರ್ ಕಾರ್ಯಾಚರಣೆಯಲ್ಲಿ ಗಾಯಗೊಂಡಿದ್ದರು. ಬುಲೆಟ್ ಹೊಕ್ಕು ಉಂಟಾದ ಗಾಯಗಳಿಂದಾಗಿ ಅವರಿಗೆ ಕೆಲಸ ಮಾಡಲು ಸಾಧ್ಯವಾಗದ ಕಾರಣ ನಿವೃತ್ತಿ ತೆಗೆದುಕೊಂಡಿದ್ದರು.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಕಾಟಪೂರ ಗ್ರಾಮದಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆ, 1964 ರ ಅಡಿಯಲ್ಲಿ ಕೃಷಿ ಉದ್ದೇಶಗಳಿಗಾಗಿ ಕೊಪ್ಪಳದ ಉಪ ಆಯುಕ್ತರು ಅವರಿಗೆ ಎರಡು ಎಕರೆ ಭೂಮಿಯನ್ನು ಮಂಜೂರು ಮಾಡಿದ್ದರು. ಹುಲ್ಲಪ್ಪ1985 ರಲ್ಲಿ ಇದಕ್ಕಾಗಿ ಅರ್ಜಿ ಸಲ್ಲಿಸಿದ್ದರು, ಅಂತಿಮವಾಗಿ ಜನವರಿ 11, 2026 ರಂದು ಭೂಮಿಯನ್ನು ಪಡೆದಿದ್ದಾರೆ.
ರಕ್ತಸಿಕ್ತ ಕಾರ್ಯಾಚರಣೆಯ ಸಮಯದಲ್ಲಿ, ಗುಂಡು ಅವರ ಎದೆ, ಕಾಲು ಮತ್ತು ಎಡಗೈಗೆ ಚುಚ್ಚಿತು ಎಂದು ಹುಲ್ಲಪ್ಪ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ. ಅದೃಷ್ಟವಶಾತ್ ನಾನು ಬದುಕುಳಿದೆ, ನನ್ನ ಎದೆ ಮತ್ತು ಕಾಲಿಗೆ ಹೊಕ್ಕಿದ್ಗ ಗುಂಡುಗಳನ್ನು ಯಶಸ್ವಿಯಾಗಿ ತೆಗೆದುಹಾಕಲಾಯಿತು. ಆದರೆ ಎಡಗೈಯಲ್ಲಿರುವ ಒಂದು ಗುಂಡನ್ನು ತೆಗೆದುಹಾಕಲು ಸಾಧ್ಯವಾಗಲಿಲ್ಲ. ಗುಂಡು ಹೊರತೆಗೆಯಬೇಕಾದರೆ ನನ್ನ ಕೈಯನ್ನು ಕತ್ತರಿಸಬೇಕಾಗಿತ್ತು. ವೈದ್ಯರು ಕೈಯನ್ನು ಉಳಿಸುವಲ್ಲಿ ಯಶಸ್ವಿಯಾದರು. ಕೆಲಸ ಮುಂದುವರಿಸಲು ಸಾಧ್ಯವಾಗದ ಕಾರಣ, ಶಸ್ತ್ರಚಿಕಿತ್ಸೆಯ ನಂತರ ನಾನು ಸೇವೆಯಿಂದ ಹೊರಗುಳಿದಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.
ನಾನು ಗಾಯಗೊಂಡಾಗ ಆಗಿನ ಪ್ರಧಾನಿ ಇಂದಿರಾ ಗಾಂಧಿ ಮತ್ತು ಅಂದಿನ ಕರ್ನಾಟಕದ ಮುಖ್ಯಮಂತ್ರಿ 1984 ರಲ್ಲಿ ಮೆಚ್ಚುಗೆ ಪತ್ರದೊಂದಿಗೆ ನನ್ನನ್ನು ಹೊಗಳಿದರು. ಈ ಪತ್ರವನ್ನು ಲಗತ್ತಿಸಿ, ರಾಷ್ಟ್ರಕ್ಕೆ ನನ್ನ ಸೇವೆಯನ್ನು ಪರಿಗಣಿಸಲಾಗುವುದು ಎಂಬ ಭರವಸೆಯಿಂದ ನಾನು 1985 ರಲ್ಲಿ ಕುಷ್ಟಗಿ ತಹಶೀಲ್ದಾರ್‌ಗೆ ಭೂಮಿ ಮಂಜೂರಾತಿಗಾಗಿ ಅರ್ಜಿಯನ್ನು ಸಲ್ಲಿಸಿದೆ.
ಆದರೆ ಪದೇ ಪದೇ ವಿನಂತಿಸಿದರೂ, ಸರ್ಕಾರಗಳು ಭೂಮಿಯನ್ನು ಮಂಜೂರು ಮಾಡಲಿಲ್ಲ. ಈಗ ಉಪ ಲೋಕಾಯುಕ್ತ ನ್ಯಾಯಮೂರ್ತಿ ವೀರಪ್ಪ ಅವರ ಮಧ್ಯಸ್ಥಿಕೆ ವಹಿಸಿದರು, ಆಗಸ್ಟ್ 2025 ರಲ್ಲಿ ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿದ ಐದು ತಿಂಗಳೊಳಗೆ ಎರಡು ಎಕರೆ ಮಂಜೂರು ಮಾಡಲಾಯಿತು ಎಂದು ಹುಲ್ಲಪ್ಪ ಹೇಳಿದರು.
40 ವರ್ಷಗಳ ನಂತರ ಭೂಮಿ ಪಡೆದಿದ್ದಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ, ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ ವೀರಪ್ಪ ಅವರಿಗೆ ಆಭಾರಿಯಾಗಿದ್ದೇನೆ, ದೇಶಕ್ಕಾಗಿ ಹೋರಾಡಿದ ಸೈನಿಕರ ಪರವಾಗಿ ಅವರು ಅನ್ಯಾಯದ ವಿರುದ್ಧ ಹೋರಾಡುತ್ತಿದ್ದಾರೆ ಎಂದು ಹುಲ್ಲಪ್ಪ ಹೇಳಿದರು.
ದೇಶಕ್ಕಾಗಿ ಜೀವ ಮತ್ತು ಅಂಗಗಳನ್ನು ತ್ಯಾಗ ಮಾಡುವ ಸೈನಿಕರ ಕುಟುಂಬ ಸದಸ್ಯರ ನೋವನ್ನು ವಿವರಿಸಿದ ಹುಲ್ಲಪ್ಪ, ಯುದ್ಧದ ಸಮಯದಲ್ಲಿ ಸೈನಿಕ ಕೊಲ್ಲಲ್ಪಟ್ಟಾಗ ಅಥವಾ ಗಾಯಗೊಂಡಾಗ ಭೂಮಿ ಅಥವಾ ನಿವೇಶನಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡುವುದು ಪುರುಷರಿಗಷ್ಟೇ ಸಾಧ್ಯ. ಅಂತಹ ಪರಿಹಾರವನ್ನು ಪಡೆಯಲು ಕುಟುಂಬದ ಮಹಿಳಾ ಸದಸ್ಯರು ಕಚೇರಿಯಿಂದ ಕಚೇರಿಗೆ ಅಲೆದಾಡಲು ಸಾಧ್ಯವಿಲ್ಲ ಎಂದು ಅವರು ಪರಿಸ್ಥಿತಿ ವಿವರಿಸಿದ್ದಾರೆ. ನನ್ನ ದೇಶಕ್ಕಾಗಿ ಮಾಡಿದ ತ್ಯಾಗಕ್ಕಾಗಿ ನಾನು ಭೂಮಿಯನ್ನು ಪಡೆದುಕೊಂಡಿದ್ದೇನೆ, ಮುಂದಿನ ಜೀವನ ನಡೆಸಬಲ್ಲೆ ಎಂದು ಹುಲ್ಲಪ್ಪ ತಿಳಿಸಿದ್ದಾರೆ.
Advertisement