

ಬೆಂಗಳೂರು: ತಮಿಳುನಾಡಿನಲ್ಲಿ ರಾಜ್ಯಪಾಲರು ಭಾಷಣ ಮಾಡಲು ನಿರಾಕರಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಇದೀಗ ಕರ್ನಾಟಕ ವಿಧಾನಸಭೆ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ನಿರಾಕರಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ರಾಜ್ಯಪಾಲರು ಭಾಷಣ ಮಾಡಲು ನಿರಾಕರಿಸಿದ ಹಿನ್ನೆಲೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ನೇತೃತ್ವದ ಉನ್ನತ ಮಟ್ಟದ ನಿಯೋಗವು ಇಂದು ಸಂಜೆ 5 :45ಕ್ಕೆ ಲೋಕಭವನಕ್ಕೆ ಭೇಟಿ ನೀಡಿ, ರಾಜ್ಯಪಾಲರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚೆ ನಡೆಸಲಿದೆ. ನಾಳೆಯಿಂದ ಜ.31ರವರೆಗೆ ವಿಧಾನಸಭೆ ಜಂಟಿ ಅಧಿವೇಶನ ನಡೆಯಲಿದ್ದು ರಾಜ್ಯಪಾಲರ ನಡೆ ಬಹಳ ಕುತೂಹಲ ಮೂಡಿಸಿದೆ. ಕೇಂದ್ರವು MahatmaGandhi NREGA ಹೆಸರನ್ನು 'ರದ್ದುಗೊಳಿಸುವುದು' ಸೇರಿದಂತೆ ಹಲವಾರು ವಿಷಯಗಳ ಕುರಿತು ಆಡಳಿತಾರೂಢ ಕಾಂಗ್ರೆಸ್ ಮತ್ತು ವಿರೋಧ ಪಕ್ಷ ಬಿಜೆಪಿ-ಜೆಡಿ (ಎಸ್) ಒಕ್ಕೂಟದ ನಡುವೆ ಘರ್ಷಣೆ ನಿರೀಕ್ಷಿಸಲಾಗಿದೆ.
ಯುಪಿಎ ಸರ್ಕಾರದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಜಿಎನ್‌ಆರ್‌ಇಜಿಎ)ಯನ್ನು ರದ್ದುಗೊಳಿಸಿದ್ದ ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) (ವಿಬಿ-ಜಿ ರಾಮ್ ಜಿ) ಕಾಯ್ದೆಯಾಗಿ ಬದಲಾಯಿಸಿದ ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ನಿರ್ಣಯ ಅಂಗೀಕರಿಸಿತ್ತು. ಎಂಜಿಎನ್‌ಆರ್‌ಇಜಿಎ ಬದಲಿಗೆ ಇತ್ತೀಚೆಗೆ ಜಾರಿಗೆ ತಂದ ವಿಬಿ-ಜಿ ರಾಮ್ ಜಿ ಕಾಯ್ದೆಯನ್ನು ಅಂಗೀಕರಿಸದಿರಲು ಮತ್ತು ಅದರ ವಿರುದ್ಧ ಕಾನೂನು ಹೋರಾಟವನ್ನು ಕೈಗೊಳ್ಳಲು ಕರ್ನಾಟಕ ಸಚಿವ ಸಂಪುಟ ನಿರ್ಧರಿಸಿದೆ. ಹೀಗಾಗಿ ಕೇಂದ್ರಕ್ಕೆ ಮುಜುಗರ ತರುವ ಅಂಶಗಳು ರಾಜ್ಯಪಾಲರ ಭಾಷಣದಲ್ಲಿರುವುದರಿಂದ ರಾಜ್ಯಪಾಲರು ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡದಿರಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಒಂದು ವೇಳೆ ಜಂಟಿ ಅಧಿವೇಶನಕ್ಕೆ ರಾಜ್ಯಪಾಲರು ಬರದಿದ್ದರೆ ಸಾಂವಿಧಾನಿಕ ಬಿಕ್ಕಟ್ಟು ಎದುರಾಗುವ ಸಾಧ್ಯತೆಯಿದೆ. ವರ್ಷದ ಮೊದಲ ಅಧಿವೇಶನವನ್ನು ರಾಜ್ಯಪಾಲರ ಭಾಷಣದೊಂದಿಗೆ ಆರಂಭಿಸಬೇಕು ಎಂಬ ನಿಯಮವಿದೆ. ಆದ್ದರಿಂದ ಒಂದು ವೇಳೆ ಬರದಿದ್ದರೆ ದೊಡ್ಡ ಬಿಕ್ಕಟ್ಟು ಎದುರಾಗುವ ಸಾಧ್ಯತೆಯಿದೆ. ಜನವರಿ 22ರಂದು ಬೆಳಿಗ್ಗೆ 11 ಗಂಟೆಗೆ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಬೇಕಿತ್ತು.
Advertisement