

ಕಾರವಾರ: ಉತ್ತರ ಕನ್ನಡದಲ್ಲಿ ಎಂಡೋಸಲ್ಫಾನ್ ಭೂತ ಮತ್ತೆ ಕಾಣಿಸಿಕೊಂಡಿದೆ. ಜಿಲ್ಲಾ ಆರೋಗ್ಯ ಇಲಾಖೆಯ ಸಮೀಕ್ಷೆಯ ಪ್ರಕಾರ, ಉತ್ತರ ಕನ್ನಡದಲ್ಲಿ ಎಂಡೋಸಲ್ಫಾನ್ ಪೀಡಿತರ ಸಂಖ್ಯೆ ಕಳೆದ ಕೆಲವು ವರ್ಷಗಳಿಂದ ಹೆಚ್ಚಾಗಿದೆ.
1990 ರ ದಶಕದ ಉತ್ತರಾರ್ಧ ಮತ್ತು 2000 ರ ದಶಕದ ಆರಂಭದಲ್ಲಿ ಗೋಡಂಬಿ ತೋಟಗಳ ಮೇಲೆ ಎಂಡೋಸಲ್ಫಾನ್ ಸಿಂಪಡಿಸಿದ್ದರಿಂದ ಜನರಲ್ಲಿ ಕಂಡುಬಂದ ಆಘಾತಕಾರಿ ಲಕ್ಷಣಗಳು ರಾಜ್ಯವನ್ನು ಬೆಚ್ಚಿಬೀಳಿಸಿದ್ದವು.
ಹೈಕೋರ್ಟ್ ಆದೇಶ ಹೊರಡಿಸಿದ ನಂತರ, ರಾಜ್ಯ ಸರ್ಕಾರ ಪರಿಹಾರ ಪ್ಯಾಕೇಜ್ ಅನ್ನು ಹೊರತಂದಿತು. ಸಂತ್ರಸ್ತರನ್ನು ಗುರುತಿಸಲು, ಅವರಿಗೆ ಪರಿಹಾರ ನೀಡಲು ಮತ್ತು ಆರೋಗ್ಯ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಒಂದು ಸಮಿತಿಯನ್ನು ರಚಿಸಲಾಯಿತು. ಇದಾದ ನಂತರ ರೋಗದಪ್ರಮಾಣ ಕಡಿಮೆಯಾಗಿತ್ತು ಎಂದು ನಂಬಲಾಗಿತ್ತು, ಆದರೆ ಜನರ ಜೀವವನ್ನೇ ಹಿಂಡುತಿದ್ದ ರೋಗ ಈಗ 3ನೇ ತಲೆಮಾರಿಗೂ ಹಬ್ಬಿದೆ. ಹೊಸದಾಗಿ 543 ಜನರಿಗೆ ಎಂಡೋಸಲ್ಫಾನ್ ಇರುವುದು ಪತ್ತೆಯಾಗಿದೆ.
ಅಂಕೋಲಾ, ಭಟ್ಕಳ, ಹೊನ್ನಾವರ, ಕುಮಟಾ, ಶಿರಸಿ ಮತ್ತು ಸಿದ್ದಾಪುರದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಕಳೆದ ಆರು ತಿಂಗಳಲ್ಲಿ 543 ಹೊಸ ಪ್ರಕರಣಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ. "ನಾವು ಆರು ತಿಂಗಳಿನಿಂದ ಸಮೀಕ್ಷೆಗಳನ್ನು ನಡೆಸುತ್ತಿದ್ದೇವೆ ಮತ್ತು ಉತ್ತರ ಕನ್ನಡದಲ್ಲಿ ಐದು ಎಂಡೋಸಲ್ಫಾನ್ ಪೀಡಿತ ತಾಲ್ಲೂಕುಗಳಲ್ಲಿ 543 ಸಂಪೂರ್ಣವಾಗಿ ಹೊಸ ಪ್ರಕರಣಗಳನ್ನು ಗುರುತಿಸಿದ್ದೇವೆ. ಪೀಡಿತರಲ್ಲಿ 25 ವರ್ಷಕ್ಕಿಂತ ಕಡಿಮೆ ವಯಸ್ಸಿನ 10 ಜನರು, 25 ರಿಂದ 60 ವರ್ಷ ವಯಸ್ಸಿನ 118 ಜನರು ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟ 418 ಜನರು ಸೇರಿದ್ದಾರೆ ಎಂದು ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಆರೋಗ್ಯ ಅಧಿಕಾರಿ ಶಂಕರ್ ರಾವ್ ಹೇಳಿದರು.
ಈ ಸಂಶೋಧನೆಗಳ ಬಗ್ಗೆ ಆಘಾತ ವ್ಯಕ್ತಪಡಿಸಿದ ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿಗಾಗಿ ಕೆಲಸ ಮಾಡುತ್ತಿರುವ ಸ್ಕೋಡ್‌ವೇಸ್‌ನ ನಿರ್ದೇಶಕ ವೆಂಕಟೇಶ್ ನಾಯಕ್, "ನಿಷೇಧದ ಹೊರತಾಗಿಯೂ, ಎಂಡೋಸಲ್ಫಾನ್ ಇನ್ನೂ ಬಳಕೆಯಲ್ಲಿದೆ ಎಂದು ತಿಳಿದು ಆಘಾತಕಾರಿಯಾಗಿದೆ. ಈ ಹೊಸ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ನಾವು ಸರ್ಕಾರವನ್ನು ಒತ್ತಾಯಿಸುತ್ತೇವೆ" ಎಂದು ಅವರು ಹೇಳಿದರು.
ಎಂಡೋಸಲ್ಫಾನ್ ಸಂತ್ರಸ್ತರನ್ನು ಗುರುತಿಸಲು ಹೊಸ ಸಮೀಕ್ಷೆಯನ್ನು ನಡೆಸಲು ಶ್ರಮಿಸಿದ್ದಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಲ್ ವೈದ್ಯ ಅವರಿಗೆ ನಾಯಕ್ ಧನ್ಯವಾದ ಅರ್ಪಿಸಿದರು. 2000ದ ದಶಕದ ಆರಂಭದಲ್ಲಿ ಜಿಲ್ಲೆಯಲ್ಲಿ 1,848 ಎಂಡೋಸಲ್ಫಾನ್ ಪೀಡಿತ ಪ್ರಕರಣಗಳು ಪತ್ತೆಯಾಗಿದ್ದವು, ಅದರಲ್ಲಿ 249 ಮಂದಿ ಸಾವನ್ನಪ್ಪಿದರು ಮತ್ತು 1554 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
Advertisement