

ಧಾರವಾಡ: ಮೊನ್ನೆ ಬುಧವಾರ ಧಾರವಾಡ ನಗರದ ಹೊರವಲಯದಲ್ಲಿ ಪತ್ತೆಯಾಗಿದ್ದ 21 ವರ್ಷದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಝಕಿಯಾಮುಲ್ಲಾ ಮೃತದೇಹ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೊಬೈಲ್ ಫೋನ್ ಟ್ರ್ಯಾಕಿಂಗ್ ಮತ್ತು ತಾಂತ್ರಿಕ ಕಣ್ಗಾವಲಿನ ಸಹಾಯದಿಂದ ತೀವ್ರ ತನಿಖೆ ನಡೆಸಿದ ನಂತರ ಹತ್ಯೆಗೀಡಾದ ವಿದ್ಯಾರ್ಥಿನಿಯ ದೀರ್ಘಕಾಲದ ಸ್ನೇಹಿತ ಸಬೀರ್ ಮುಲ್ಲಾನನ್ನು ಬುಧವಾರ ತಡರಾತ್ರಿ ವಶಕ್ಕೆ ಪಡೆಯಲಾಯಿತು.
ಗಾಂಧಿ ಚೌಕ್ ನಿವಾಸಿ ಜಕಿಯಾ ಇತ್ತೀಚೆಗೆ ತನ್ನ ಪ್ಯಾರಾಮೆಡಿಕಲ್ ಕೋರ್ಸ್ ನ್ನು ಪೂರ್ಣಗೊಳಿಸಿದ್ದಳು. ಮಂಗಳವಾರ ಸಂಜೆ, ತಮ್ಮ ಉದ್ಯೋಗಕ್ಕೆ ಸಂಬಂಧಿಸಿದ ಕೆಲಸಕ್ಕೆ ಹೊರ ಹೋಗುತ್ತಿರುವುದಾಗಿ ಹೇಳಿ ಹೋದವಳು ಮನೆಗೆ ಬಂದಿರಲಿಲ್ಲ.
ಮರುದಿನ ಬೆಳಗ್ಗೆ ಮನ್ಸೂರ್ ರಸ್ತೆಯ ಬಳಿಯ ಕೃಷಿ ಹೊಲದಲ್ಲಿ ಆಕೆಯ ಶವ ಪತ್ತೆಯಾಗಿದೆ ಎಂದು ಧಾರವಾಡ ಎಸ್ಪಿ ಗುಂಜನ್ ಆರ್ಯ ಹೇಳಿದ್ದಾರೆ. ಜಕಿಯಾ ಮತ್ತು ಸಬೀರ್ ಸುಮಾರು ನಾಲ್ಕು ವರ್ಷಗಳಿಂದ ಸ್ನೇಹಿತರಾಗಿದ್ದರು. ಇತ್ತೀಚೆಗೆ ಇಬ್ಬರ ಮಧ್ಯೆ ವೈಮನಸ್ಸು ಉಂಟಾಗಿತ್ತು.
ಜನವರಿ 20 ರ ಸಂಜೆ ಇಬ್ಬರೂ ಭವಿಷ್ಯ ಕುರಿತು ಮಾತನಾಡುವಾಗ ಜಗಳ ತಾರಕಕ್ಕೇರಿ ಘರ್ಷಣೆ ಉಂಟಾಗಿರಬಹುದು ಎನ್ನಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯಲಾಗುತ್ತಿದೆ, ಆದರೆ ಪ್ರಾಥಮಿಕ ಸಾಕ್ಷ್ಯವು ವಿದ್ಯಾರ್ಥಿನಿಯನ್ನು ಕತ್ತು ಹಿಸುಕಿ ಕೊಲ್ಲಲಾಗಿದೆ ಎಂದು ಹೇಳಲಾಗುತ್ತಿದೆ.
ಪೊಲೀಸರಿಗೇ ಮಾಹಿತಿ ನೀಡಿದ್ದ ಆರೋಪಿ!
ಈ ಪ್ರಕರಣದಲ್ಲಿ ಆರೋಪಿ ಸಾಬೀರ್, ಕೊಲೆ ಮಾಡಿದ ಬಳಿಕ ಝಕಿಯಾ ನಾಪತ್ತೆಯಾಗಿದ್ದಾಳೆ, ಆಕೆಯನ್ನು ಹುಡುಕಿಕೊಡಿ ಎಂದು ಧಾರವಾಡ ಶಹರ ಠಾಣೆಗೆ ಹೋಗಿ ಹುಡುಕಿಕೊಡುವಂತೆ ಮನವಿ ಮಾಡಿದ್ದ. ಅಲ್ಲದೆ, ತಾನೇ ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಕರೆ ಮಾಡಿ ಕೊಲೆಯ ಬಗ್ಗೆ ಮಾಹಿತಿ ನೀಡಿದ್ದನು. ಆ ನಂತರ ಘಟನಾ ಸ್ಥಳಕ್ಕೆ ಪೊಲೀಸರು ಬಂದಾಗಲೂ ಅಲ್ಲೇ ಇದ್ದು ಏನೂ ಅರಿಯದವನಂತೆ ನಟಿಸಿದ್ದನು. ಆದರೆ, ಆತನ ನಡವಳಿಕೆಯ ಮೇಲೆ ಅನುಮಾನಗೊಂಡ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತನೇ ಕೊಲೆ ಮಾಡಿರುವ ಸತ್ಯ ಹೊರ ಬಂದಿದೆ.
Advertisement