

ಬೆಂಗಳೂರು: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಅವಮಾನಿಸಿರುವ ಕಾಂಗ್ರೆಸ್ ಸದಸ್ಯ ಬಿ ಕೆ ಹರಿಪ್ರಸಾದ್ ಅವರನ್ನು ಸದನದಿಂದ ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿ ಪ್ರತಿಪಕ್ಷ ಬಿಜೆಪಿ ಸದಸ್ಯರು ಶುಕ್ರವಾರ ವಿಧಾನ ಪರಿಷತ್ ನಲ್ಲಿ ಗದ್ದಲ ಉಂಟುಮಾಡಿದ್ದರಿಂದ ಕಲಾಪವನ್ನು ಕೆಲಕಾಲ ಮುಂದೂಡಲಾಯಿತು. ಗುರುವಾರ ಸರ್ಕಾರ ನೀಡಿದ ಪೂರ್ಣ ಭಾಷಣವನ್ನು ಓದದೆ ಹೋಗುತ್ತಿದ್ದ ರಾಜ್ಯಪಾಲರನ್ನು ತಡೆಯಲು ಬಿಕೆ ಹರಿಪ್ರಸಾದ್ ಪ್ರಯತ್ನಿಸಿದ್ದರು.
ಅಧಿವೇಶನ ಆರಂಭವಾದ ಕೂಡಲೇ ರಾಜ್ಯಪಾಲರೊಂದಿಗೆ ಅಶಿಸ್ತಿನ ವರ್ತನೆ ತೋರಿದ ಹರಿಪ್ರಸಾದ್ ಅವರನ್ನು ಸದನದಿಂದ ವಜಾಗೊಳಿಸುವಂತೆ ಬಿಜೆಪಿ ಶಾಸಕರು ಒತ್ತಾಯಿಸಿದರು. ನಾವು ಗೂಂಡಾಗಿರಿಯನ್ನು ಸಹಿಸುವುದಿಲ್ಲ. ರಾಜ್ಯಪಾಲರನ್ನು ಅವಮಾನಿಸಿರುವ ಹರಿಪ್ರಸಾದ್ ಅವರನ್ನು ಅಮಾನತು ಮಾಡಿ ಎಂದು ಬಿಜೆಪಿ ಎಂಎಲ್ಸಿಗಳು ಒಕ್ಕೂರಲಿನಿಂದ ಘೋಷಣೆ ಕೂಗಿದರು.
ಇಂದು ಕಲಾಪ ಆರಂಭವಾಗುತ್ತಿದ್ದಂತೆಯೇ ಈ ವಿಷಯ ಪ್ರಸ್ತಾಪಿಸಿದ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿಕೆ ಹರಿಪ್ರಸಾದ್ ಅವರ ದುಂಡಾವರ್ತನೆಯನ್ನು ಸಹಿಸುವುದಿಲ್ಲ. ಕೂಡಲೇ ಅವರನ್ನು ಸದನದಿಂದ ಅಮಾನತುಗೊಳಿಸಬೇಕು ಎಂದು ಸಭಾಪತಿಗಳನ್ನು ಒತ್ತಾಯಿಸಿದರು.
ರಾಜ್ಯಪಾಲರು ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆ ಎಂಬ ಕಾಂಗ್ರೆಸ್ ಆರೋಪವನ್ನು ತಳ್ಳಿಹಾಕಿದ ಅವರು, ಗೆಹ್ಲೋಟ್ ಹೊರನಡೆಯುತ್ತಿದ್ದಂತೆ ರಾಷ್ಟ್ರಗೀತೆಯನ್ನು ನುಡಿಸುತ್ತಿರಲಿಲ್ಲ. ಈ ಗೂಂಡಾಗಿರಿಯನ್ನು ನಾವು ಸಹಿಸುವುದಿಲ್ಲ. ರಾಜ್ಯಪಾಲರಿಗೆ ಮಾಡಿದ ಅವಮಾನ ಸಂವಿಧಾನಕ್ಕೆ ಮಾಡಿದ ಅವಮಾನ ಎಂದರು.
ಬಿಜೆಪಿ ಆರೋಪಕ್ಕೆ ಉತ್ತರಿಸಿದ ಹರಿಪ್ರಸಾದ್, ರಾಜ್ಯಪಾಲರ ಭಾಷಣದ ಪ್ರಕ್ರಿಯೆ ಬಗ್ಗೆ ನಿಯಮಾವಳಿ ಓದುತ್ತಿದ್ದಂತೆ ಬಿಜೆಪಿ ಸದಸ್ಯರು ಆಕ್ಷೇಪಿಸಿದರು. ಪೋಕ್ಸೋ ಪ್ರಕರಣದ ನಾಯಕರಿಗೆ ಹಾರ ಹಾಕುವ ಪಕ್ಷದವರು ಇವರು, ಇವರಿಂದ ಪಾಠ ಕಲಿಯಬೇಕಾ? ಎಂದು ಪ್ರಶ್ನಿಸಿದರು.
ಆಡಳಿತ ವಿಪಕ್ಷಗಳ ನಡುವೆ ಭಾರಿ ಗದ್ದಲ, ಕೋಲಾಹಲ ಸೃಷ್ಟಿಯಾಯಿತು. ಹರಿಪ್ರಸಾದ್ ಎತ್ತಿದ್ದ ಪಾಯಿಂಟ್ ಆಫ್ ಆರ್ಡರ್ ಅನ್ನು ಸಭಾಪತಿ ಹೊರಟ್ಟಿ ಅವರು ತಿರಸ್ಕರಿಸಿ, ಸದನವನ್ನು 10 ನಿಮಿಷಗಳ ಕಾಲ ಮುಂದೂಡಿದರು.
Advertisement