News headlines 23-01-2026 | ಕರ್ನಾಟಕ ಸಿವಿಲ್ ಸೇವಾ ಹುದ್ದೆಗಳಿಗೆ ನೇಮಕಾತಿ ವಯೋಮಿತಿ 5 ವರ್ಷ ಸಡಿಲಿಕೆ; ಬೈಕ್ ಟ್ಯಾಕ್ಸಿಗೆ ಗ್ರೀನ್ ಸಿಗ್ನಲ್; ಕಾಂಗ್ರೆಸ್ ನಿಂದ ರಾಜೀವ್ ಗೌಡ ಅಮಾನತು

News headlines file photo
ಸುದ್ದಿ ಮುಖ್ಯಾಂಶಗಳುonline desk

1. ಬೈಕ್ ಟ್ಯಾಕ್ಸಿಗೆ ಗ್ರೀನ್ ಸಿಗ್ನಲ್

ರಾಜ್ಯದಲ್ಲಿ ಬೈಕ್‌ಗಳನ್ನು ಟ್ಯಾಕ್ಸಿಗಳನ್ನಾಗಿ ಬಳಸಲು ಹೈಕೋರ್ಟ್ ಅನುಮತಿ ನೀಡಿದೆ. ರಾಜ್ಯ ಸರ್ಕಾರ ಬೈಕ್ ಟ್ಯಾಕ್ಸಿ ನಿಷೇಧಿಸಿದ್ದನ್ನು ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ಎತ್ತಿಹಿಡಿದಿತ್ತು. ಆದರೆ ಇದೀಗ ವಿಭಾಗೀಯ ವೀಠ ಆದೇಶ ರದ್ದುಗೊಳಿಸಿ, ಬೈಕ್ ಟ್ಯಾಕ್ಸಿಗೆ ಅನುಮತಿ ನೀಡಿದೆ. ಒಲಾ, ಊಬರ್ ಮತ್ತಿತರ ಅಗ್ರಿಗೇಟರ್ ಗಳು ಸಲ್ಲಿಸಿದ ಮೇಲ್ಮನವಿಗಳನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಪೀಠ ಮಾನ್ಯ ಮಾಡಿದೆ. ಇದೇ ವೇಳೆ ಸಾರಿಗೆ ವಾಹನಗಳಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಬೈಕ್ ಟ್ಯಾಕ್ಸಿಗಳಿಗೆ ಅನುಮತಿಯನ್ನು ನಿರಾಕರಿಸಲಾಗುವುದಿಲ್ಲ ಎಂದು ಹೇಳಿದೆ. ಬೈಕ್ ಮಾಲೀಕರು ಅಥವಾ ಅಗ್ರಿಗೇಟರ್ ಗಳು ಸಾರಿಗೆ ವಾಹನಗಳನ್ನಾಗಿ ಬಳಸಲು ಅನುಮತಿ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಬೇಕು. ಅರ್ಹ ಮನವಿಗಳನ್ನು ಸರ್ಕಾರ ಪುರಸ್ಕರಿಸಿ ಅನುಮತಿ ನೀಡಬೇಕು. ಮೋಟಾರ್ ವಾಹನ ಕಾಯ್ದೆಯ ಸೆಕ್ಷನ್ 74(2) ರ ಪ್ರಕಾರ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಅಗತ್ಯ ಷರತ್ತುಗಳನ್ನು ವಿಧಿಸಬಹುದು ಎಂದು ಪೀಠ ಆದೇಶ ನೀಡಿದೆ.

2. ವಿಧಾನ ಪರಿಷತ್ತಿನಲ್ಲಿ ಪದೇ ಪದೇ ಗದ್ದಲ; ಹರಿಪ್ರಸಾದ್ ಬೇಡಿಕೆ ತಿರಸ್ಕರಿಸಿದ ಹೊರಟ್ಟಿ

ಶುಕ್ರವಾರ ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ಪದೇ ಪದೇ ಗದ್ದಲ ನಡೆದಿದ್ದು, ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ಅವರು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಅವಮಾನಿಸಿದ್ದಾರೆ ಎಂಬ ಆರೋಪದ ಮೇಲೆ ಮೂರು ಬಾರಿ ಕಲಾಪ ಮುಂದೂಡಲಾಯಿತು. ವಿರೋಧ ಪಕ್ಷ ಬಿಜೆಪಿ ವಿಧಾನ ಪರಿಷತ್ ಸದಸ್ಯರು ದೂರು ಸಲ್ಲಿಸಿದ ನಂತರ, ಪರಿಷತ್ ಅಧ್ಯಕ್ಷ ಬಸವರಾಜ್ ಹೊರಟ್ಟಿ ಅವರು ಹರಿಪ್ರಸಾದ್ ಅವರ ನಡವಳಿಕೆಯನ್ನು ನೀತಿ ಸಮಿತಿಗೆ ಕಳುಹಿಸುವಂತೆ ಆದೇಶಿಸಿದರು. ರಾಷ್ಟ್ರಗೀತೆ ನುಡಿಸುವವರೆಗೂ ಕಾಯದೆ ಸದನದಿಂದ ಹೊರನಡೆಯುವ ಮೂಲಕ ರಾಜ್ಯಪಾಲರು ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆ ಎಂಬ ಆರೋಪದ ಕುರಿತು ಚರ್ಚೆ ನಡೆಸಬೇಕೆಂಬ ಹರಿಪ್ರಸಾದ್ ಅವರ ಬೇಡಿಕೆಯನ್ನು ಹೊರಟ್ಟಿ ತಿರಸ್ಕರಿಸಿದರು.

3. ಪೌರಾಯುಕ್ತೆಗೆ ಧಮ್ಕಿ; ಕಾಂಗ್ರೆಸ್ ನಿಂದ ರಾಜೀವ್ ಗೌಡ ಅಮಾನತು

ಸಚಿವ ಜಮೀರ್ ಅಹ್ಮದ್ ಖಾನ್ ಅವರ ಪುತ್ರ ಝೈದ್ ಖಾನ್ ಅಭಿನಯದ ಕಲ್ಟ್ ಚಿತ್ರದ ಬ್ಯಾನರ್ ತೆರವು ಮಾಡಿದ್ದಕ್ಕೆ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಗೌಡ ಅವರಿಗೆ ಕರೆ ಮಾಡಿ ಅಶ್ಲೀಲವಾಗಿ ನಿಂದಿಸಿ ಧಮ್ಕಿ ಹಾಕಿದ್ದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ. ಇಂದು ನಡೆದ ಕೆಪಿಸಿಸಿ ಶಿಸ್ತು ಪಾಲನಾ ಸಮಿತಿಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಪ್ರಕರಣವನ್ನು ಕೂಲಂಕುಷವಾಗಿ ಪರಿಶೀಲಿಸಲಾಗಿದೆ. ಪ್ರಕರಣದ ಗಂಭೀರತೆ ಮನವರಿಕೆಯಾದ ಹಿನ್ನಲೆಯಲ್ಲಿ ಕೆಪಿಸಿಸಿ ಶಿಸ್ತುಪಾಲನಾ ಸಮಿತಿಯ ಶಿಫಾರಸ್ಸಿನ ಮೇರೆಗೆ ರಾಜೀವ್ ಗೌಡ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ನಮ್ಮ ಪಕ್ಷ ರಾಜೀವ್ ಗೌಡಗೆ ಕಾರಣ ಕೇಳಿ ನೋಟಿಸ್ ನೀಡಿತ್ತು. ಆದ್ರೆ ಅವರು ಉತ್ತರ ಕೊಡದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ ಎಂದು ಚಿಕ್ಕಬಳ್ಳಾಪುರ ಉಸ್ತುವಾರಿ ಸಚಿವ ಎಂಸಿ ಸುಧಾಕರ್ ಅವರು ತಿಳಿಸಿದ್ದಾರೆ.

4. ರ‍್ಯಾಗಿಂಗ್: 22 ಕಾಲೇಜು ವಿದ್ಯಾರ್ಥಿಗಳ ವಿರುದ್ಧ FIR

ಜೂನಿಯರ್ ವಿದ್ಯಾರ್ಥಿಗಳನ್ನು ರ್ಯಾ್ಗ್ ಮಾಡಿದ ಮತ್ತು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ 22 ಕಾಲೇಜು ವಿದ್ಯಾರ್ಥಿಗಳು ಮತ್ತು ಹೊರಗಿನ ವ್ಯಕ್ತಿಯೊಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಉಳಿದವರನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ. ದೇವನಹಳ್ಳಿಯ ಆಕಾಶ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ ನ ಪ್ರವೇಶ ವಿಭಾಗದ ಮುಖ್ಯಸ್ಥ ಮಿಧುನ್ ಮಾಧವನ್ ಅವರು ನೀಡಿದ ದೂರಿನ ಆಧಾರದ ಮೇಲೆ ಜನವರಿ 16 ರಂದು ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೂರಿನ ಪ್ರಕಾರ, ಆರೋಪಿಗಳು ಜನವರಿ 14 ರಂದು ಕ್ಯಾಂಪಸ್‌ನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ರ್ಯಾಜಗ್ ಮಾಡಿ, ಸಿಗರೇಟ್ ಮತ್ತು ಪಾನೀಯಗಳನ್ನು ತರುವುದು ಮತ್ತು ಅವರ ಪುಸ್ತಕಗಳನ್ನು ಕೊಂಡೊಯ್ಯುವುದು ಸೇರಿದಂತೆ ಇತರ ಆದೇಶಗಳನ್ನು ಪಾಲಿಸುವಂತೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.

5. ಕರ್ನಾಟಕ ಸಿವಿಲ್ ಸೇವಾ ಹುದ್ದೆಗಳಿಗೆ ನೇಮಕಾತಿ ವಯೋಮಿತಿ 5 ವರ್ಷ ಸಡಿಲಿಕೆ

ಕರ್ನಾಟಕ ಸಿವಿಲ್ ಸೇವಾ ಹುದ್ದೆಗಳ ನೇಮಕಾತಿಯಲ್ಲಿ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಹೆಚ್ಚಳಕ್ಕೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಸರ್ಕಾರಿ ಉದ್ಯೋಗಾಂಕ್ಷಿಗಳಿಗೆ ಮತ್ತು ಅಲೆಮಾರಿ ಸಮುದಾಯಕ್ಕೆ ಸಿಹಿ ಸುದ್ದಿ ನೀಡಲಾಗಿದೆ. ಅಲೆಮಾರಿ ಮತ್ತು ಅರೆ ಅಲೆಮಾರಿ ಸಮಾಜದ ಜನರಿಗೆ ಮನೆ ನಿರ್ಮಾಣಕ್ಕೆ ಸಹಾಯ ಹಸ್ತ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇಲ್ಲಿಯವರೆಗೂ ಸಾಮಾನ್ಯ ವರ್ಗಕ್ಕೆ 35 ವರ್ಷ ವಯೋಮಿತಿ ಇದ್ದರೆ, SC, ST ಅಭ್ಯರ್ಥಿಗಳಿಗೆ 38 ವರ್ಷ ನಿಗದಿಪಡಿಸಲಾಗಿತ್ತು. ಆದರೀಗ ಎಲ್ಲ ವರ್ಗದ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಆಗಲಿದ್ದು, 2027ರ ಡಿಸೆಂಬರ್ 31ರವರೆಗೆ ಹೊರಡಿಸುವ ಅಧಿಸೂಚನೆಗಳಿಗೆ ಈ ನಿಯಮ ಅನ್ವಯವಾಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com