

ಕನಕಪುರ: ಮನ್ರೇಗಾ ಹೆಸರು ಬದಲಾವಣೆ ವಿರೋಧಿಸಿ ನಾಳೆ ಕಾಂಗ್ರೆಸ್ನಿಂದ ರಾಜಭವನ ಚಲೋ ನಡೆಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೋಮವಾರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮನ್ರೇಗಾ ಕುರಿತು ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದು, ಮಂಗಳವಾರ ಫ್ರೀಡಂಪಾರ್ಕ್ನಿಂದ ರಾಜಭವನದತ್ತ ನಡೆಯುವ ಈ ಪ್ರತಿಭಟನೆಯಲ್ಲಿ ರಾಜ್ಯಾದ್ಯಂತ ಎಲ್ಲ ಶಾಸಕರು, ಎಂಎಲ್ಸಿಗಳು ಹಾಗೂ ನರೇಗಾ ಕಾರ್ಯಕರ್ತರು ಭಾಗವಹಿಸುತ್ತಿದ್ದಾರೆ ಎಂದರು. ಈ ಕಾರ್ಯಕ್ರಮದ ಜತೆಗೆ ಪ್ರತಿ ಕ್ಷೇತ್ರದಲ್ಲೂ ಪ್ರತಿಭಟನೆ ನಡೆಸಲಾಗುತ್ತಿದ್ದು, ರನ್ ಫರ್ ಮನ್ರೇಗಾ ಅಂತ ಕನಿಷ್ಠ 5 ಕಿಲೋಮೀಟರ್ ಪಾದಯಾತ್ರೆ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದರು.
ಇದೇ ವೇಳೆ ದೆಹಲಿ ಗಣರಾಜ್ಯೋತ್ಸ ಕಾರ್ಯಕ್ರಮದಲ್ಲಿ ರಾಜ್ಯದ ಸ್ತಬ್ಧಚಿತ್ರಕ್ಕೆ ಕೋಕ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಕರ್ನಾಟಕದ ಸ್ತಬ್ಧಚಿತ್ರಕ್ಕೆ ಅವಕಾಶ ಕೊಡಲಿಲ್ಲ ಅಂದ್ರೆ ಸೆಂಟ್ರಲ್ ಮಿನಿಸ್ಟರ್ ಗಳು ಅದಕ್ಕೆ ಉತ್ತರ ಕೊಡಬೇಕು. ಹಾಗಾದ್ರೆ ಅವರು ಎಷ್ಟು ಶಕ್ತಿಶಾಲಿಗಳಿದ್ದಾರೆ ಅಂತ ತಿಳಿಸಕೊಳ್ಳಬೇಕು. ಅವರೇ ಇದಕ್ಕೆ ಉತ್ತರ ಕೊಡಬೇಕು, ನಾನೇನು ಟೀಕೆ ಮಾಡಲ್ಲ. ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ಶೋಭಾಕರಂದ್ಲಾಜೆ, ನಿರ್ಮಲಾ ಸೀತಾರಾಮನ್ ಇದಕ್ಕೆ ಉತ್ತರ ಕೊಡಲಿ ಎಂದರು.
ಕನಕಪುರದ ಕನಕೋತ್ಸವದ ಅಂಗವಾಗಿ ಅನೇಕ ಕಾರ್ಯಕ್ರಮ ಆಯೋಜಿಸಿದ್ದೇವೆ. ಇದು ನಮ್ಮ ದೇಶದ ಶಕ್ತಿ, ಸಂಸ್ಕೃತಿ, ಗ್ರಾಮೀಣ ಪ್ರದೇಶದ ಪ್ರತೀಕವಾಗಿದೆ. ಎಲ್ಲರನ್ನು ಗುರುತಿಸಿ ಪ್ರತಿಭೆಗೆ ಅವಕಾಶ ಕೊಡುವ ಕಾರ್ಯಕ್ರಮವಾಗಿದೆ.
ಹಬ್ಬಗಳ ಇದ್ದೆಡೆ ಸಂಸ್ಕೃತಿ, ಸಂಸ್ಕೃತಿ ಇದ್ದ ಕಡೆ ಕಲೆ ಇರುತ್ತೆ. ಮನೆಗೊಂದು ರಂಗೋಲಿ ಕಾರ್ಯಕ್ರಮದಲ್ಲಿ ಸಾವಿರಾರು ಮಹಿಳೆಯರು ಭಾಗಿಯಾಗಿದ್ರು. ಅದರಲ್ಲಿ ಅತ್ಯುತ್ತಮ ರಂಗೋಲಿ ಬಿಟ್ಟವರಿಗೆ ಬಹುಮಾನ ಕೊಡ್ತಿದ್ದೇವೆ. ಜ.28 ರಿಂದ ಫೆ.1ರ ವರೆಗೆ 5 ದಿನಗಳ ಕಾಲ ಅದ್ದೂರಿ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ ಎಂದು ತಿಳಿಸಿದರು.
ತಾಲೂಕಿನಲ್ಲಿ ಗ್ರಾಮದೇವತೆಗಳ ಮೆರವಣಿಗೆ ಆಯೋಜನೆ ಮಾಡಿದ್ದೇವೆ. 250 ದೇವತೆಗಳು, ಕಲಾತಂಡಗಳ ಮೆರವಣಿಗೆ ಮಾಡಲಾಗುತ್ತದೆ. ಜ. 29ರಂದು ಮ್ಯಾರಥಾನ್ ಆಯೋಜಿಸಲಾಗಿದೆ. ಸ್ಥಳದಲ್ಲೇ ಚಿತ್ರಬಿಡಿಸುವ ಸ್ಪರ್ಧೆ, ವಾಯ್ಸ್ ಆಫ್ ಕನಕೋತ್ಸವ, ಕೇಶವಿನ್ಯಾಸ ಸ್ಪರ್ಧೆ, ಸಾಂಪ್ರದಾಯಿಕ ಉಡುಗೆತೊಡುಗೆ ಸ್ಪರ್ಧೆ, ರಸಮಂಜರಿ ಕಾರ್ಯಕ್ರಮ ಇರಲಿದೆ. ಶಾಲಾ-ಕಾಲೇಜು ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಮೆಹೆಂದಿ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಗಾಯಕರಾದ ಸಂಚಿತ್ ಹೆಗ್ಡೆ, ನವೀನ್ ಸಜ್ಜು, ಮಂಗ್ಲಿ, ಆಲ್ ಓಕೆ ತಂಡ, ಚಂದನ್ ಶೆಟ್ಟಿರಿಂದ ಸಂಗೀತ ರಸಸಂಜೆ ಕಾರ್ಯಕ್ರಮ. ಕುಸ್ತಿ ಹಾಗೂ ವಿವಿಧ ಕ್ರೀಡಾ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ ಎಂದು ಅವರು ತಿಳಿಸಿದರು.
ಇನ್ನು ಮಾಜಿ ಸಂಸದ ಡಿ.ಕೆ.ಸುರೇಶ್ ಮಾತನಾಡಿ, 16 ವರ್ಷಗಳಿಂದ ಕನಕೋತ್ಸವ ಮಾಡಿಕೊಂಡು ಬರ್ತಿದ್ದೇವೆ. ಇದು 7 ನೇ ಕನಕೋತ್ಸವ ಕಾರ್ಯಕ್ರಮ. ಐದು ವಿಧಾನಸಭಾ ಕ್ಷೇತ್ರದಲ್ಲಿ ಕನಕೋತ್ಸವದ ಅಂಗವಾಗಿ ಹಲವು ಕಾರ್ಯಕ್ರಮ ಮಾಡಿದ್ದೇವೆ. ರಾಮನಗರದಲ್ಲಿ ರಾಮೋತ್ಸವ, ಚನ್ನಪಟ್ಟಣದಲ್ಲಿ ಬೊಂಬೆನಾಡು ಉತ್ಸವ, ಮಾಗಡಿಯಲ್ಲಿ ಕೆಂಪೇಗೌಡ ಉತ್ಸವ, ಕುಣಿಗಲ್ ನಲ್ಲಿ ಕುಣಿಗಲ್ ಉತ್ಸವ ಮಾಡಿದ್ದೇವೆ. ಕಲೆ, ಸಾಂಸ್ಕೃತಿಕ ಹಾಗೂ ಕ್ರೀಡೆಯನ್ನ ಉತ್ತೇಜಿಸುವ ಸಲುವಾಗಿ ಕಾರ್ಯಕ್ರಮ ಮಾಡಿದ್ದೇವೆ. ಅಂತಿಮವಾಗಿ ಕನಕಪುರದಲ್ಲಿ ಜಿಲ್ಲಾಮಟ್ಟದ ಕಾರ್ಯಕ್ರಮ ಮಾಡ್ತಿದ್ದೇವೆ ಎಂದು ತಿಳಿಸಿದರು.
Advertisement