'ನಾಚಿಕೆಗೇಡಿನ ಸಂಗತಿ'; ಎಲ್ಲಾ ಪಕ್ಷಗಳ ದೊಡ್ಡ ಕುಳಗಳು 'ಅಕ್ರಮ ಮರಳು ಗಣಿಗಾರಿಕೆಯಲ್ಲಿ ಭಾಗಿ': ಪರಮೇಶ್ವರ್
ಬೆಂಗಳೂರು: 'ಎಲ್ಲಾ ಪಕ್ಷಗಳ ದೊಡ್ಡ ಕುಳಗಳು' ಅಕ್ರಮ ಮರಳು ಗಣಿಗಾರಿಕೆಯಲ್ಲಿ ಭಾಗಿಯಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ಗೃಹ ಸಚಿವ ಜಿ ಪರಮೇಶ್ವರ ಹೇಳಿದ್ದಾರೆ. ರಾಯಚೂರಿನಲ್ಲಿ ಮರಳು ಮಾಫಿಯಾ ಚಟುವಟಿಕೆಗಳನ್ನು ನಿಲ್ಲಿಸಲು ಪ್ರಯತ್ನಿಸಿದ್ದರಿಂದ ಮರಳು ಮಾಫಿಯಾದಿಂದ ತನಗೆ ಬೆದರಿಕೆ ಬರುತ್ತಿದೆ ಎಂದು ಜೆಡಿಎಸ್ ಶಾಸಕಿ ವಿಧಾನಸಭೆಯಲ್ಲಿ ಹೇಳಿದ್ದು ಇದಕ್ಕೆ ಉತ್ತರಿಸಿದ ಪರಮೇಶ್ವರ್ ಅವರು ಇದು 'ಮುಜುಗರದ ಪರಿಸ್ಥಿತಿ' ಎಂದು ಪರಮೇಶ್ವರ್ ಹೇಳಿದರು.
ದೇವದುರ್ಗದ ಜೆಡಿಎಸ್ ಶಾಸಕಿ ಕರೆಮ್ಮ ನಾಯಕ್ ಅವರು ವಿಧಾನಸಭೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, ಇದು ಒಂದು ದೊಡ್ಡ ದಂಧೆ. ದೊಡ್ಡ ಕುಳಗಳೇ ಇದರಲ್ಲಿ ಭಾಗಿಯಾಗಿದ್ದಾರೆ. ಇದು ಸ್ವಲ್ಪ ಮುಜುಗರದ ಪರಿಸ್ಥಿತಿ. ಇದನ್ನು ಹೇಗೆ ನಿಭಾಯಿಸಬೇಕು ಎಂಬುದರ ಕುರಿತು ಶೀಘ್ರದಲ್ಲೇ ಪೊಲೀಸರ ಸಭೆ ಕರೆಯುವುದಾಗಿ ಹೇಳಿದರು. ಇದರ ಬಗ್ಗೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುತ್ತೇವೆ. ನಾನು ಜಿಲ್ಲೆಯ ಶಾಸಕರ ಸಭೆ ಕರೆದು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಅವರ ಸಲಹೆಗಳನ್ನು ತೆಗೆದುಕೊಳ್ಳುತ್ತೇನೆ ಎಂದು ಪರಮೇಶ್ವರ್ ಹೇಳಿದರು.
ತಮ್ಮ ಕ್ಷೇತ್ರದಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಕರೆಮ್ಮ ನಾಯಕ್ ಆತಂಕ ವ್ಯಕ್ತಪಡಿಸಿದ್ದರು. ಶಾಸಕಿಯಾದ ನಂತರ ನಾನು ಪ್ರಾಮಾಣಿಕವಾಗಿ ಮರಳು ಗಣಿಗಾರಿಕೆಯನ್ನು ನಿಲ್ಲಿಸಲು ಪ್ರಯತ್ನಿಸುತ್ತಿದ್ದೇನೆ. ಆದರೆ ಇದುವರೆಗೂ ಅದು ಸಾಧ್ಯವಾಗಿಲ್ಲ. ಎಲ್ಲಾ ಪಕ್ಷದ ದೊಡ್ಡ ಕುಳಗಳು ಕೃಷ್ಣಾ ನದಿಯಿಂದ ಟಿಪ್ಪರ್‌ಗಳನ್ನು ಬಳಸಿ ಅಕ್ರಮವಾಗಿ ಮರಳನ್ನು ಗಣಿಗಾರಿಕೆ ಮಾಡುತ್ತಿದ್ದಾರೆ. ಈ ಚಟುವಟಿಕೆಯು ಮೆಣಸಿನಕಾಯಿ ಮತ್ತು ಹತ್ತಿಯಂತಹ ಬೆಳೆಗಳ ಮೇಲೆ ಪರಿಣಾಮ ಬೀರುತ್ತಿದೆ. ಬೆಳೆಗಳ ಮೇಲೆ ಧೂಳು ಬೀಳುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ. ಈ ಬಗ್ಗೆ ನನಗೆ ರೈತರು ಮಾಹಿತಿ ನೀಡಿದರು. ನಾನು ಅಧಿಕಾರಿಗಳಿಗೆ ದೂರು ನೀಡಿದ್ದರೂ ಸರಿಯಾದ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಅಕ್ರಮ ಮರಳು ಗಣಿಗಾರಿಕೆಯ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ತಮ್ಮ ಮನೆಗೆ ಬಂದು ಧಮ್ಕಿ ಹಾಕುತ್ತಿದ್ದಾರೆ. ನಾನು ಒಬ್ಬ ಮಹಿಳಾ ಶಾಸಕಿ. ಅಂತಹ ವಿಷಯಗಳು ನಡೆಯುತ್ತಿದ್ದರೆ ಸರ್ಕಾರ ಏನು ಕ್ರಮ ತೆಗೆದುಕೊಳ್ಳುತ್ತಿದೆ. ಅಂತಹ ವಿಷಯಗಳು ನಿಲ್ಲಬೇಕು.. ನನಗೆ ಬೆದರಿಕೆ ಹಾಕಲು ಬಂದವರು ಪತ್ರಿಕಾಗೋಷ್ಠಿ ನಡೆಸಿದರು. ಅಲ್ಲಿ ಅವರಿಗಾಗಿ ಇಬ್ಬರು ಪೊಲೀಸರನ್ನು ನಿಯೋಜಿಸಲಾಗಿತ್ತು. ಸ್ಥಳೀಯವಾಗಿ ಮರಳಿಗೆ ಬೇಡಿಕೆ ಇದೆ. ಮರಳು ಹೊರತೆಗೆಯುವಿಕೆ ಮತ್ತು ಪೂರೈಕೆಗಾಗಿ ಸರ್ಕಾರ ಟೆಂಡರ್‌ಗಳನ್ನು ಕರೆದಿದೆ. ಆದರೆ ಬಿಡ್‌ಗಳನ್ನು ತೆರೆಯಲಾಗಿಲ್ಲ. ಅಕ್ರಮ ಗಣಿಗಾರಿಕೆಗೆ ಹಣ ಹೋಗುತ್ತಿರುವುದರಿಂದ ಸರ್ಕಾರಕ್ಕೆ ರಾಯಧನ ನಷ್ಟವಾಗುತ್ತದೆ ಎಂದು ಕರೆಮ್ಮ ಹೇಳಿದರು.
ಅಕ್ರಮ ಮರಳು ಗಣಿಗಾರಿಕೆ ದೇವದುರ್ಗಕ್ಕೆ ಮಾತ್ರ ಸೀಮಿತವಾಗಿಲ್ಲ. ಇದು ರಾಜ್ಯಾದ್ಯಂತ ನಡೆಯುತ್ತದೆ. ಕಾಲಕಾಲಕ್ಕೆ ಅದನ್ನು ನಿಯಂತ್ರಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಅಂತಹ ಚಟುವಟಿಕೆಗಳನ್ನು ನಿಯಂತ್ರಿಸುವಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಪ್ರಮುಖ ಪಾತ್ರವಹಿಸಬೇಕು. ಗಣಿ ಮತ್ತು ಖನಿಜಗಳು (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ ಇದೆ ಮತ್ತು ಉಪ ಆಯುಕ್ತರು ಮತ್ತು ಪೊಲೀಸರು ಸೇರಿದಂತೆ ಅಧಿಕಾರಿಗಳನ್ನೊಳಗೊಂಡ ಸಮಿತಿ ಇದೆ. ದೂರು ದಾಖಲಾಗದರೇ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಪ್ರತ್ಯೇಕ ಮರಳು ಕಾರ್ಯಪಡೆ ಕೂಡ ಇದೆ. 'ಕೆಲವೊಮ್ಮೆ ಲೋಪಗಳಿರುತ್ತವೆ. ಅವರು ಸರಿಯಾಗಿ ಕೆಲಸ ಮಾಡುವಂತೆ ನಾನು ನೋಡಿಕೊಳ್ಳುತ್ತೇನೆ. ಈ ವಿಷಯದಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಆದರೆ ನಾವು ಇದನ್ನು ಒಂದೇ ದಿನದಲ್ಲಿ ತಡೆಯಲು ಸಾಧ್ಯವಿಲ್ಲ ಎಂದರು. ಕರೆಮ್ಮ ಮತ್ತು ಇತರ ಶಾಸಕರಿಗೆ ರಕ್ಷಣೆ ಮತ್ತು ಸುರಕ್ಷತೆಯ ಭರವಸೆಯನ್ನು ಸಚಿವರು ನೀಡಿದರು.

