

ಬೆಳಗಾವಿ: ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ವಿವಾಹಿತ ಯುವಕ ಮತ್ತು ಆತನ ಪ್ರೇಯಸಿ ಇಬ್ಬರೂ ಒಟ್ಟಿಗೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬುಧವಾರ ನಡೆದಿದೆ.
ಮಲಪ್ರಭಾ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಪ್ರೇಮಿಗಳನ್ನು ಮಲ್ಲಾಪುರ ಗ್ರಾಮದ ಜಗದೀಶ ಯಲ್ಲಪ್ಪ ಕವಳೇಕರ(27) ಹಾಗೂ ಗಂಗಮ್ಮಾ ತ್ಯಾಪಿ(25) ಎಂದು ಗುರುತಿಸಲಾಗಿದೆ.
ನದಿ ದಂಡೆಯ ಮೇಲೆ ಶವಗಳನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ರಾಮದುರ್ಗ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿ ಶವಗಳನ್ನು ಹೊರ ತೆಗೆದಿದ್ದಾರೆ.
ಎರಡನೇ ಮದುವೆಗೆ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಜಗದೀಶ ಪ್ರಿಯತಮೆಯೊಂದಿಗೆ ಮಲಪ್ರಭಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ವಿವಾಹಿತ ಯುವಕ ಜಗದೀಶ ಅವರ ಹೆಂಡತಿ ಪ್ರಥಮ ಹೆರಿಗೆಗಾಗಿ ತವರುಮನೆ ಬೋಚಬಾಳ ಗ್ರಾಮಕ್ಕೆ ತೆರಳಿದ್ದು, ಆಕೆ ಬಂದ ನಂತರ ಎರಡನೇಯ ಮದುವೆಯ ಬಗ್ಗೆ ಇತ್ಯರ್ಥ ಮಾಡೋಣ ಎಂದು ಆತನ ಮನೆಯವರು ಆಕ್ಷೇಪ ವ್ಯಕ್ತಪಡಿಸಿದಾಗ ಮಾತಿಗೆ ಮಾತು ಬೆಳೆದು ಜಗಳವಾಗಿತ್ತು ಎಂದು ಹೇಳಲಾಗಿದೆ. ಇದರಿಂದ ಆಕ್ರೋಶಗೊಂಡ ಜಗದೀಶ ಸೋಮವಾರವೇ ಮನೆ ತೊರೆದಿದ್ದು, ಬುಧವಾರ ಬೆಳಗ್ಗೆ ಪ್ರೇಯಸಿ ಜತೆ ಮಲಪ್ರಭಾ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಜನವರಿ 26ರಂದು ರಾತ್ರಿ ಮಲ್ಲಾಪುರ ಗ್ರಾಮದ ಹೊರ ವಲಯದಲ್ಲಿರುವ ಬ್ರಿಡ್ಜ್ ಕಮ್ ಬ್ಯಾರೇಜ್ ಮೇಲೆ ಇಬ್ಬರು ವೇಲ್ ಕಟ್ಟಿಕೊಂಡು ಮಲಪ್ರಭಾ ನದಿಯಲ್ಲಿ ಜಿಗಿದಿದ್ದಾರೆ. ಇಂದು ಬೆಳಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿ ಇಬ್ಬರ ಮೃತದೇಹಗಳನ್ನು ನದಿಯಿಂದ ಹೊರಗೆ ತೆಗೆದಿದ್ದೇವೆ. ಇಬ್ಬರೂ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಮನೆಯಲ್ಲಿ ಮದುವೆಗೆ ಕುಟುಂಬಸ್ಥರು ಒಪ್ಪಿರಲಿಲ್ಲ. ಹಾಗಾಗಿ, ಒಂದು ವರ್ಷದ ಹಿಂದಷ್ಟೇ ಬೇರೆ ಯುವತಿ ಜತೆಗೆ ಜಗದೀಶನ ಮದುವೆ ಆಗಿತ್ತು. ಈಗ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತನಿಖೆ ಕೈಗೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement