

ಬೆಂಗಳೂರು: ರಾಜ್ಯದಲ್ಲಿ ತುಳು ಭಾಷೆಯನ್ನು ರಾಜ್ಯದ ೨ನೇ ಹೆಚ್ಚುವರಿ ಅಧಿಕೃತ ಭಾಷೆಯನ್ನಾಗಿ ಆದಷ್ಟು ಶೀಘ್ರ ಘೋಷಣೆ ಮಾಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಹೇಳಿದರು.
ವಿಧಾನಸಭೆಯಲ್ಲಿ ಕಾಂಗ್ರೆಸ್‌ನ ಅಶೋಕ್ ರೈ ಪ್ರಶ್ನೆಗೆ ಉತ್ತರಿಸಿದ ಸಚಿವರು, ತುಳು ಭಾಷೆಯನ್ನು ರಾಜ್ಯದ 2ನೇ ಹೆಚ್ಚುವರಿ ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡುವ ನಿಟ್ಟಿನಲ್ಲಿ ಪ್ರಸ್ತಾವನೆಯನ್ನು ಚರ್ಚಿಸಲು ಶೀಘ್ರದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ ಎಂದು ಅವರು ಹೇಳಿದರು.
ತುಳು ಭಾಷೆಯ ಸ್ವರೂಪ ಮತ್ತು ಇತಿಹಾಸ, ತುಳು ಸಾಹಿತ್ಯ ಪರಂಪರೆ, ತುಳು ಲಿಪಿ, ಪ್ರಾಚೀನ ತುಳು ಸಾಹಿತ್ಯ, ಆಧುನಿಕ ತುಳು ಸಾಹಿತ್ಯ, ಸಂಸ್ಕೃತಿ, ತುಳು ಶಾಸನಗಳ ಕುರಿತು ಅಧ್ಯಯನ ನಡೆಸಲು ಡಾ. ಮೋಹನ್ ಆಳ್ವಾರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ಈ ಸಮಿತಿ 2023ರ ಫೆಬ್ರವರಿಯಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ ಎಂದರು.
ಈ ತರ ಭಾಷೆಗಳನ್ನು ಹೆಚ್ಚುವರಿ ಅಧಿಕೃತ ರಾಜ್ಯ ಭಾಷೆಯನ್ನಾಗಿ ಮಾಡಲು ಕೆಲವು ನಿಬಂಧನೆಗಳನ್ನು ಮಾಡಿರುವ ಪಶ್ಚಿಮ ಬಂಗಾಳಕ್ಕೆ ನಾವು ಪತ್ರ ಬರೆದಿದ್ದೇವೆ. ಉರ್ದುವನ್ನು ಎರಡನೇ ರಾಜ್ಯ ಭಾಷೆಯನ್ನಾಗಿ ಮಾಡಿರುವ ಆಂಧ್ರಪ್ರದೇಶಕ್ಕೆ ಕರ್ನಾಟಕದ ತಂಡವೊಂದು ಭೇಟಿ ನೀಡಿದೆ. ನಾವು ಸಭೆಗೆ ಕರೆ ನೀಡುತ್ತೇವೆ ಮತ್ತು ತುಳು ಮಾತನಾಡುವ ಪ್ರದೇಶದ ಎಲ್ಲಾ ಶಾಸಕರನ್ನು ಆಹ್ವಾನಿಸುತ್ತೇವೆ,'' ಎಂದು ಅವರು ಹೇಳಿದರು.
ತುಳು 3,000 ವರ್ಷಗಳ ಇತಿಹಾಸವನ್ನು ಹೊಂದಿದೆ, ಅನುವಾದಕ್ಕಾಗಿ ಗೂಗಲ್‌ನಿಂದ ಗುರುತಿಸಲ್ಪಟ್ಟಿದೆ ಎಂದು ಈ ಹಿಂದೆ ಹೇಳಿದ್ದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಸಚಿವರು ಉತ್ತರಿಸುತ್ತಿದ್ದರು.
ಜರ್ಮನಿ ಮತ್ತು ಫ್ರಾನ್ಸ್‌ನಲ್ಲಿ, ತುಳುವನ್ನು ಅಧ್ಯಯನ ಮಾಡಲು ಅವಕಾಶವಿದೆ. ವಿಶ್ವವಿದ್ಯಾಲಯಗಳು ತುಳು ಮಾಧ್ಯಮದಲ್ಲಿ ಪರೀಕ್ಷೆಗಳನ್ನು ಬರೆಯಲು ಅವಕಾಶ ನೀಡುತ್ತವೆ. “ಕೆಲವು ರಾಜ್ಯಗಳಲ್ಲಿ, ಮೂರರಿಂದ ನಾಲ್ಕು ಅಧಿಕೃತ ಭಾಷೆಗಳಿವೆ. ಪ್ರತಿ ಶಾಸಕಾಂಗ ಅಧಿವೇಶನದಲ್ಲಿ, ತುಳುವನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಮಾಡುವ ಬಗ್ಗೆ ನಾನು ಅದೇ ಪ್ರಶ್ನೆಯನ್ನು ಕೇಳುತ್ತೇನೆ. ಯಾವುದೇ ಹಣಕಾಸಿನ ಪರಿಣಾಮಗಳಿಲ್ಲ, ಹಾಗಾದರೆ ಇದನ್ನು ಯಾವಾಗ ಜಾರಿಗೆ ತರಲಾಗುತ್ತದೆ? ಎಂದು ಅವರು ಪ್ರಶ್ನಿಸಿದರು.
Advertisement