
ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಇಂಧನ ಇಲಾಖೆಯಲ್ಲಿ ತೀವ್ರ ಹಸ್ತಕ್ಷೇಪ ಮಾಡುತ್ತಿದ್ದಾರೆ. ಇಂಧನ ಇಲಾಖೆಯ ಕೆಲವು ಅಧಿಕಾರಿಗಳನ್ನು ವರ್ಗಾವಣೆ ಮಾಡಲು ಸಿಎಂ ಕಚೇರಿ ಮುಂದಾಗಿದೆ ಎಂದು ಅಸಮಾಧಾನಗೊಂಡು ಇಂಧನ ಸಚಿವ ಕೆಜೆ ಜಾರ್ಜ್, ಸಿಎಂ ಸಿದ್ದರಾಮಯ್ಯಗೆ ರಾಜೀನಾಮೆ ನೀಡಲು ಮುಂದಾಗಿದ್ದರು. ಆದರೆ ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ಮಧ್ಯೆ ಪ್ರವೇಶಿಸಿ ಜಾರ್ಜ್ ಮನವೊಲಿಸಿದರು ಎಂಬ ವಿಚಾರ ಮಾಧ್ಯಮಗಳಲ್ಲಿ ವರದಿಯಾಗಿದೆ. ಗುರುವಾರ ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯ ಬಳಿಕ ಈ ವಿಚಾರವನ್ನು ಬಿಜೆಪಿ ಸದಸ್ಯ ಸುನೀಲ್ ಕುಮಾರ್ ಪ್ರಸ್ತಾಪ ಮಾಡಿದರು. ಈ ಬಗ್ಗೆ ಸ್ಪಷ್ಟನೆ ಕೊಡಿ ಎಂದು ಆಗ್ರಹಿಸಿದರು. ಇದಕ್ಕೆ ಸ್ವತಃ ಕೆಜೆ ಜಾರ್ಜ್ ಸ್ಪಷ್ಟನೆ ನೀಡಿದ್ದು, ಇದೆಲ್ಲಾ ಮಾಧ್ಯಮಗಳ ಸೃಷ್ಟಿ. ನನಗೆ ಸಿಎಂ ಸಿದ್ದರಾಮಯ್ಯ ಮೇಲೆ ಸಂಪೂರ್ಣ ನಂಬಿಕೆ ಇದೆ. ಈ ಮಾಹಿತಿ ಸತ್ಯಕ್ಕೆ ದೂರವಾಗಿದೆ ಎಂದು ತಿಳಿಸಿದರು. ಮತ್ತೊಂದೆಡೆ ಸಿಎಂ ಸಿದ್ದರಾಮಯ್ಯ ಸಹ ಈ ಬಗ್ಗೆ ಪ್ರತಿಕ್ರಿಯಿಸಿದ್ದು ಕೆಜೆ ಜಾರ್ಜ್ ರಾಜೀನಾಮೆ ನೀಡಿಲ್ಲ ಎಂದು ಹೇಳಿದರು.
ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ. ಮಾಜಿ ಸಚಿವ ಅಂಬರೀಶ್ ಸೇರಿದಂತೆ ಹಲವು ನಾಯಕರ ವಿರುದ್ಧ ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡ ಏಚವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ ಎಂಬ ಆಡಿಯೋವೊಂದು ವೈರಲ್ ಆಗಿದೆ. ಅಂಬರೀಶ್ ಅವರನ್ನು ಕಾಂಗ್ರೆಸ್‌ಗೆ ಕರೆದುಕೊಂಡು ಬಂದೆ ಆದರೆ ಆತ ತೊಳೆದುಬಿಟ್ಟು ಹೋದ. ಇನ್ನು ಕುಮಾರಸ್ವಾಮಿ ಲೋಕಸಭೆ ಉಪಚುನಾವಣೆಗೆ ಟಿಕೆಟ್ ನೀಡಿ ನನ್ನಿಂದ ಸುಮಾರು 36 ಕೋಟಿ ರೂಪಾಯಿ ಖರ್ಚು ಮಾಡಿಸಿ ಮತ್ತೆ ಟಿಕೆಟ್ ನೀಡದೆ ನನ್ನನ್ನು ಮೋಸಗೊಳಿಸಿದ ಎಂದು ಅವಾಚ್ಯವಾಗಿ ನಿಂದಿಸಿದ್ದರು. ಶಿವರಾಮೇಗೌಡ ಅವರ ಆಕ್ಷೇಪಾರ್ಹ ಹೇಳಿಕೆಗಳು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಶಿವರಾಮೇಗೌಡ, ನಾಗಮಂಗಲದ ಜೆಡಿಎಸ್ ಕಾರ್ಯಕರ್ತನ ಜೊತೆ ನಾನು ಮಾತನಾಡಿದ್ದೇ ಎನ್ನಲಾದ ಆಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆ ಆಡಿಯೋದಲ್ಲಿ ಇರೋ ಮಾತುಗಳು ಸತ್ಯಾಸತ್ಯತೆಗೆ ದೂರವಾಗಿದ್ದು ಅದರಲ್ಲಿ ಬಹುತೇಕ ಮಾತುಗಳನ್ನ ನಾನು ಮಾತನಾಡಿಲ್ಲ, AI ಬಳಸಿ ನನ್ನ ತೇಜೋವಧೆ ಮಾಡುವ ಹುನ್ನಾರ ನಡೆದಿದೆ ಎಂದು ಸ್ಪಷ್ಟಪಡಿಸಿದರು.
ಹಬ್ಬ-ಹರಿದಿನಗಳನ್ನೂ ಲೆಕ್ಕಿಸದೆ ಜನರಿಗಾಗಿ ದುಡಿಯುವ ನಮ್ಮ ಪೊಲೀಸರಿಗೆ ಕರ್ನಾಟಕ ಪೊಲೀಸ್ ಇಲಾಖೆ ಸಿಹಿಸುದ್ದಿ ನೀಡಿದೆ. ಕರ್ನಾಟಕ ಪೊಲೀಸ್ ಸಿಬ್ಬಂದಿಯ ಹುಟ್ಟುಹಬ್ಬ ಹಾಗೂ ವಿವಾಹ ವಾರ್ಷಿಕೋತ್ಸವಕ್ಕೆ ಸಾಂದರ್ಭಿಕ ರಜೆ ನೀಡುವಂತೆ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ. ಸಲೀಂ ಆದೇಶ ಹೊರಡಿಸಿದ್ದಾರೆ. ಇಲಾಖೆಯಲ್ಲಿ ಕೆಲಸ ಮಾಡುವ ಸಿಬ್ಬಂದಿ ತಮ್ಮ ಹುಟ್ಟುಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವದ ದಿನದಂದು ಕುಟುಂಬದವರ ಜೊತೆ ಕಾಲ ಕಳೆಯಲು ಅನುಕೂಲವಾಗುವಂತೆ ಆ ದಿನ ಕಡ್ಡಾಯ ರಜೆ ನೀಡಿ. ಇದರಿಂದ ಒತ್ತಡದ ಕೆಲಸ ಹಾಗೂ ವ್ಯಯಕ್ತಿಕ ಜೀವನ ಸಮತೋಲನಗೆ ರಜೆ ಸಹಾಯಕವಾಗಲಿದೆ ಎಂದು ಎಂ.ಎ. ಸಲೀಂ ತಿಳಿಸಿದ್ದಾರೆ.
ಮೈಸೂರಿನಲ್ಲಿ ಅಕ್ರಮ ಮಾದಕ ದ್ರವ್ಯ ಜಾಲ ಕಾರ್ಯನಿರ್ವಹಿಸುತ್ತಿರುವ ಶಂಕೆ ಹಿನ್ನೆಲೆ ದೆಹಲಿ ಪೊಲೀಸರು ಹಾಗೂ ರಾಷ್ಟ್ರೀಯ ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ ಅಧಿಕಾರಿಗಳು ಮೈಸೂರಿನ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಕೆಮಿಕಲ್ ಉತ್ಪಾದನಾ ಘಟಕದ ಮೇಲೆ ದಾಳಿ ನಡೆಸಿದ್ದರು. ಗುಜರಾತ್ ಮೂಲದ ಉದ್ಯಮಿಯೊಬ್ಬ ಟುಕ್ ಟುಕ್ ಹೌಸ್‌ಹೋಲ್ಡ್ ಕೆಮಿಕಲ್ಸ್ ಪ್ರೊಡಕ್ಷನ್ ಸೊಲ್ಯೂಷನ್ ಮ್ಯಾನುಫ್ಯಾಕ್ಚರಿಂಗ್ ಎಂಬ ಹೆಸರಿನ ಘಟಕದಲ್ಲಿ ಡ್ರಗ್ಸ್ ತಯಾರಿಕೆ ನಡೆಯುತ್ತಿರುವ ಶಂಕೆಯ ಮೇರೆಗೆ ಅಧಿಕಾರಿಗಳು ಲ್ಯಾಬ್ ಅನ್ನು ವಶಕ್ಕೆ ಪಡೆದಿದ್ದರು. NCB ದಾಳಿ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಯುತ್ತಿರುವ ಸ್ಥಳಕ್ಕೆ ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಹಾಗೂ ಡಿಸಿಪಿ ಸುಂದರ್ ರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಲ್ಯಾಬ್‌ನಲ್ಲಿರುವ ರಾಸಾಯನಿಕ ವಸ್ತುಗಳ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುತ್ತಿದೆ.
ಬೆಂಗಳೂರಿನ ಕೇಂದ್ರ ಪರಪ್ಪನ ಅಗ್ರಹಾರ ಜೈಲಿನ ನಿಯಮ ಉಲ್ಲಂಘಿಸಿ ತಮ್ಮ ಸ್ನೇಹಿತನಾದ ಪೊಲೀಸ್ ಪೇದೆಗೆ ನಟ ದರ್ಶನ್ ಅವರನ್ನು ಭೇಟಿ ಮಾಡಿಸಿದ ಹಿನ್ನೆಲೆಯಲ್ಲಿ ಕಾರಾಗೃಹದ ವಾರ್ಡನ್ ರನ್ನು ವರ್ಗಾವಣೆ ಮಾಡಲಾಗಿದೆ. ಕಾರಾಗೃಹಗಳ ಮಹಾನಿರ್ದೇಶಕ (ಡಿಜಿಪಿ) ಅಲೋಕ್ ಕುಮಾರ್ ಅವರು, ಘಟನೆಯ ಕುರಿತು ಇಲಾಖಾ ತನಿಖೆಗೆ ಆದೇಶಿಸಿ, ವಾರ್ಡನ್ ಪ್ರಭುಶಂಕರ್ ಚೌವ್ಹಾಣ್ ರನ್ನು ಚಾಮರಾಜನಗರ ಜೈಲಿಗೆ ವರ್ಗಾವಣೆ ಮಾಡಿದ್ದಾರೆ ಮತ್ತು ಕಾನ್‌ಸ್ಟೆಬಲ್ ವಿರುದ್ಧ ಕ್ರಮಕ್ಕೆ ಸೂಚಿಸಿದ್ದಾರೆ. ಮತ್ತೊಂದೆಡೆ ನಟ ಮಯೂರ್ ಪಟೇಲ್ ಪಾನಮತ್ತರಾಗಿ ಕಾರು ಚಲಾಯಿಸಿ ನಿನ್ನೆ ರಾತ್ರಿ ಸರಣಿ ಅಪಘಾತ ಮಾಡಿದ್ದಾರೆ. ಟೊಯೊಟಾ ಫಾರ್ಚೂನರ್ ಕಾರನ್ನು ವೇಗವಾಗಿ ಓಡಿಸಿದ ಮಯೂರ್ ಪಟೇಲ್ ರಸ್ತೆಯಲ್ಲಿದ್ದ ಹಲವು ಕಾರುಗಳಿಗೆ ಡಿಕ್ಕಿ ಹೊಡೆದ್ದಾರೆ. ಈ ಸಂಬಂಧ ಮಯೂರ್ ಪಟೇಲ್ ಮೇಲೆ ಪ್ರಕರಣ ದಾಖಲಾಗಿದೆ.
Advertisement