

ಬೆಂಗಳೂರು: ಬೆಂಗಳೂರಿನಲ್ಲಿ ಸಾವಿರಾರು ಕೋಟಿ ರೂ. ಸಾಮ್ರಾಜ್ಯ ಕಟ್ಟಿದ ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಮತ್ತು ಸಂಸ್ಥಾಪಕ ಸಿಜೆ ರಾಯ್ ಅವರು ಶುಕ್ರವಾರ ತಮ್ಮ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಉದ್ಯಮ ವಲಯಕ್ಕೆ ತೀವ್ರ ಆಘಾತ ಉಂಟು ಮಾಡಿದೆ.
ದೇಶದ ಅತ್ಯಂತ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿದ್ದ ಸಿಜೆ ರಾಯ್ ಅವರ ಮನೆ, ಕಚೇರಿಗಳ ಮೇಲೆ ಈ ಹಿಂದೆ ಹಲವು ಬಾರಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಅದರಂತೆ ಇಂದು ಸಹ ಅವರ ಕಂಪನಿಯ ಮೇಲೆ ಐಟಿ ದಾಳಿ ನಡೆದಿದ್ದು, ಇದರಿಂದ ಮನನೊಂದು ತಮ್ಮ ಪಿಸ್ತೂಲ್ನಿಂದಲೇ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿದ್ದಾರೆ.
ಐಟಿ ಇಲಾಖೆ ಅಧಿಕಾರಿಗಳು ಇಂದು ಬೆಳಗ್ಗೆ ಹೊಸೂರು ರಸ್ತೆಯ ಲ್ಯಾಂಗ್ ಫರ್ಡ್ ಟೌನ್ ನಲ್ಲಿರುವ ಕಾನ್ಫಿಡೆಂಟ್ ಗ್ರೂಪ್ ಕಂಪನಿಯ ಕಚೇರಿ ಮೇಲೆ ದಾಳಿ ಮಾಡಿದ್ದರು. ಎರಡು ಇನ್ನೋವಾ ಕಾರುಗಳಲ್ಲಿ 8 ಅಧಿಕಾರಿಗಳ ತಂಡ ಬಂದಿತ್ತು.
ಇಂದು ಮಧ್ಯಾಹ್ನ ಕಚೇರಿಗೆ ಬಂದಿದ್ದ ಉದ್ಯಮಿ ಸಿ.ಜೆ.ರಾಯ್, 1 ಗಂಟೆ ಐಟಿ ವಿಚಾರಣೆ ಎದುರಿಸಿದ್ದಾರೆ. ಅಧಿಕಾರಿಗಳಿಗೆ ಕೆಲ ದಾಖಲೆ ಸಹ ಕೊಟ್ಟಿದ್ದಾರೆ. ಮತ್ತಷ್ಟು ದಾಖಲೆ ತರಲು ರೂಮ್‌ಗೆ ಹೋಗಿದ್ದಾರೆ. ಈ ವೇಳೆ ಪಿಸ್ತೂಲ್ನಿಂದ ಎದೆಗೆ ಗುಂಡು ಹಾರಿಸಿಕೊಂಡಿದ್ದಾರೆ. ಒಂದು ಸುತ್ತು ಗುಂಡು ಹಾರಿಸಿಕೊಳ್ಳುತ್ತಿದ್ದಂತೆ ಗನ್ ಕಿತ್ತುಕೊಂಡಿರುವ ಐಟಿ ಅಧಿಕಾರಿಗಳು, ರಕ್ಷಣೆಗೆ ಪ್ರಯತ್ನಿಸಿದ್ದಾರೆ. ಅಷ್ಟರಲ್ಲಿ ರಾಯ್ ಸಾವನ್ನಪ್ಪಿದ್ದಾರೆ ನಂತರ ಎಚ್‌ಎಸ್‌ಆರ್ ಲೇಔಟ್ ನ ನಾರಾಯಣ ಆಸ್ಪತ್ರೆಗೆ ಮೃತದೇಹ ಶಿಫ್ಟ್ ಮಾಡಲಾಗಿದೆ.
ಪೊಲೀಸರು ತಕ್ಷಣ ಆತ್ಮಹತ್ಯೆಗೆ ಯಾವುದೇ ಕಾರಣವನ್ನು ಬಹಿರಂಗಪಡಿಸಿಲ್ಲ ಮತ್ತು ಆತ್ಮಹತ್ಯೆ ಪತ್ರ ಪತ್ತೆಯಾಗಿದೆಯೇ ಎಂಬುದು ಸ್ಪಷ್ಟವಾಗಿ ಹೇಳಿಲ್ಲ. ರಾಯ್ ಅವರ ವೈಯಕ್ತಿಕ ಮತ್ತು ವೃತ್ತಿಪರ ಸಂದರ್ಭಗಳನ್ನು ಪರಿಶೀಲಿಸುತ್ತಿದ್ದೇವೆ ಮತ್ತು ತನಿಖೆಯ ಭಾಗವಾಗಿ ಕುಟುಂಬ ಸದಸ್ಯರು, ಸಹೋದ್ಯೋಗಿಗಳು ಹಾಗೂ ನಿಕಟವರ್ತಿಗಳೊಂದಿಗೆ ಮಾತನಾಡುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
12 ರೋಲ್ಸ್ ರಾಯ್ಸ್ ಸೇರಿ ಹಲವು ಐಷಾರಾಮಿ ಕಾರುಗಳ ಒಡೆಯ
ಐಷಾರಾಮಿ ಕಾರುಗಳ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಸಿಜೆ ರಾಯ್ ಅವರು, ದುಬೈ ಮತ್ತು ಭಾರತದಲ್ಲಿ ಹಲವಾರು ದುಬಾರಿ ಐಷಾರಾಮಿ ಮತ್ತು ಸ್ಫೋರ್ಟ್ ಕಾರುಗಳನ್ನು ಹೊಂದಿದ್ದಾರೆ.
ರೋಲ್ಸ್ ರಾಯ್ಸ್ ಮತ್ತು ಲಂಬೋರ್ಘಿನಿಗಳಿಂದ ಬುಗಾಟಿ ವೇರಾನ್ ವರೆಗೆ, ಅವರ ಗ್ಯಾರೇಜಿನಲ್ಲಿ ಹತ್ತಾರು ಮಿಲಿಯನ್ ಮೌಲ್ಯದ ಕಾರುಗಳಿವೆ.
ಇತ್ತೀಚಿಗಷ್ಟೇ 10 ಕೋಟಿ ರೂಪಾಯಿ ಬೆಲೆಬಾಳುವ 12ನೇ ರೋಲ್ಸ್ ರಾಯ್ಸ್, ಫ್ಯಾಂಟಮ್ VIII ಕಾರನ್ನು ರಾಯ್ ಖರೀದಿಸಿದ್ದರು. ಇದರೊಂದಿಗೆ ಬರೋಬ್ಬರಿ 12 ರೋಲ್ಸ್ ರಾಯ್ಸ್ ಕಾರ್ ಗಳನ್ನು ರಾಯ್ ಹೊಂದಿದ್ದರು.
ಉದ್ಯಮಿ ರಾಯ್ ಮೊದಲ 2008 ರಲ್ಲಿ ತಮ್ಮ ಮೊದಲ ರೋಲ್ಸ್ ರಾಯ್ಸ್ ಅನ್ನು ಖರೀದಿಸಿದ್ದರು.
Advertisement