News headlines 30-01-2026 | ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಡಾ. ಸಿ.ಜೆ ರಾಯ್ ಆತ್ಮಹತ್ಯೆ; ದಾಳಿ: 4 ಲಕ್ಷ ಲಂಚ ಪಡೆಯುತ್ತಿದ್ದ ಇನ್ಸ್ ಪೆಕ್ಟರ್ ಲೋಕಾಯುಕ್ತ ಬಲೆಗೆ; ಬಂಧನದ ಬಳಿಕ ಹೈಡ್ರಾಮ; ರಾಜ್ಯ ಸರ್ಕಾರಿ ನೌಕರರಿಗೆ ಖಾದಿ ಬಟ್ಟೆ ಬಳಕೆ ಕಡ್ಡಾಯ

News headlines 30-01-2026 | ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಡಾ. ಸಿ.ಜೆ ರಾಯ್ ಆತ್ಮಹತ್ಯೆ; ದಾಳಿ: 4 ಲಕ್ಷ ಲಂಚ ಪಡೆಯುತ್ತಿದ್ದ ಇನ್ಸ್ ಪೆಕ್ಟರ್ ಲೋಕಾಯುಕ್ತ ಬಲೆಗೆ; ಬಂಧನದ ಬಳಿಕ ಹೈಡ್ರಾಮ; ರಾಜ್ಯ ಸರ್ಕಾರಿ ನೌಕರರಿಗೆ ಖಾದಿ ಬಟ್ಟೆ ಬಳಕೆ ಕಡ್ಡಾಯ

1. ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಡಾ.ಸಿಜೆ ರಾಯ್ ಆತ್ಮಹತ್ಯೆ

ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಡಾ. ಸಿ.ಜೆ. ರಾಯ್ ಶುಕ್ರವಾರ ಬೆಂಗಳೂರಿನ ತಮ್ಮ ನಿವಾಸದಲ್ಲಿ ಪಿಸ್ತೂಲ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇರಳ ಮೂಲದ ರಾವ್ ಕಾನ್ಫಿಡೆಂಟ್ ಗ್ರೂಪ್ ಎಂಬ ಪ್ರಮುಖ ರಿಯಲ್ ಎಸ್ಟೇಟ್ ಮತ್ತು ಮೂಲಸೌಕರ್ಯ ಅಭಿವೃದ್ಧಿ ಕಂಪನಿಯ ಸಂಸ್ಥಾಪಕರಾಗಿದ್ದಾರೆ. 2005ರಲ್ಲಿ ಆರಂಭವಾದ ಈ ಸಂಸ್ಥೆ, 65ಕ್ಕೂ ಹೆಚ್ಚು ಐಷಾರಾಮಿ ಯೋಜನೆಗಳನ್ನು ಪೂರ್ಣಗೊಳಿಸಿದೆ. ವಸತಿ ಅಪಾರ್ಟ್ಮೆಂಟ್, ವಿಲ್ಲಾಗಳು, ವಾಣಿಜ್ಯ ಸಂಕೀರ್ಣಗಳು, ಶಿಕ್ಷಣ, ಆತಿಥ್ಯ ಮತ್ತು ಮನರಂಜನಾ ಕ್ಷೇತ್ರಗಳಲ್ಲಿ ಕಾನ್ಫಿಡೆಂಟ್ ಗ್ರೂಪ್ ಕಾರ್ಯನಿರ್ವಹಿಸುತ್ತಿದೆ. ಐಟಿ ದಾಳಿ ಮತ್ತು ವಿಚಾರಣೆ ಹಿನ್ನೆಲೆಯಲ್ಲಿ ರಾಯ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

2. Lokayukta ದಾಳಿ: 4 ಲಕ್ಷ ಲಂಚ ಪಡೆಯುತ್ತಿದ್ದ ಇನ್ಸ್ ಪೆಕ್ಟರ್ ಬಲೆಗೆ

ಭ್ರಷ್ಟ ಅಧಿಕಾರಿಗಳ ವಿರುದ್ಧ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ದಾಳಿ ಮುಂದುವರೆಸಿದ್ದು 4 ಲಕ್ಷ ರೂ ಲಂಚ ಪಡೆವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪೊಲೀಸ್ ಇನ್ಸ್ ಪೆಕ್ಟರ್ ಹೈಡ್ರಾಮಾ ಮಾಡಿದ್ದಾರೆ. ಬೆಂಗಳೂರಿನ ಕೆ.ಪಿ. ಅಗ್ರಹಾರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಗೋವಿಂದರಾಜು 4 ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಚೀಟಿ ವ್ಯವಹಾರಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ವ್ಯಕ್ತಿಯೊಬ್ಬರನ್ನು ಕೇಸ್‌ನಲ್ಲಿ ಸಿಕ್ಕಿಸುವುದಾಗಿ ಬೆದರಿಸಿ ಇನ್ಸ್‌ಪೆಕ್ಟರ್ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಮೈಸೂರು ರಸ್ತೆಯ ಸಿಐಆರ್ ಗ್ರೌಂಡ್ ಬಳಿ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಅವರನ್ನು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದಲ್ಲಿ ಒಟ್ಟು 5 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಡಲಾಗಿತ್ತು. ಇದರಲ್ಲಿ 1 ಲಕ್ಷ ರೂಪಾಯಿ ಈಗಾಗಲೇ ಪಡೆದುಕೊಂಡಿದ್ದರು. ಉಳಿದ 4 ಲಕ್ಷ ರೂಪಾಯಿ ಸ್ವೀಕರಿಸುವಾಗ ಟ್ರ್ಯಾಪ್ ಆಗಿದ್ದು, ಧನರಾಜ್ ಎಂಬುವವರು ನೀಡಿದ ದೂರಿನನ್ವಯ ಈ ಕಾರ್ಯಾಚರಣೆ ನಡೆಸಲಾಗಿದೆ.

3. ಮಂಗನ ಕಾಯಿಲೆ; ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ 29 ವರ್ಷದ ಯುವಕ ಸಾವು

ಕರ್ನಾಟಕದಲ್ಲಿ ಈ ವರ್ಷ ಮಂಗನ ಜ್ವರಕ್ಕೆ ಮೊದಲ ಸಾವು ಸಂಭವಿಸಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ 29 ವರ್ಷದ ಯುವಕ ಚಿಕಿತ್ಸೆ ಪಡೆದು ವೈದ್ಯಕೀಯ ಆರೈಕೆ ನೀಡಿದ್ದರೂ ಫಲಕಾರಿಯಾಗದೆ ಮತ್ತೆ ಉಲ್ಭಣಗೊಂಡು ಮೃತಪಟ್ಟಿದ್ದಾರೆ. ಆರೋಗ್ಯ ಅಧಿಕಾರಿಗಳು ಮಂಗನ ಕಾಯಿಲೆ ಸೋಂಕನ್ನು ದೃಢಪಡಿಸಿದ್ದಾರೆ ದುರ್ಬಲ ಜಿಲ್ಲೆಗಳಲ್ಲಿ ಕಣ್ಗಾವಲು ಮತ್ತು ತಡೆಗಟ್ಟುವ ಕ್ರಮಗಳನ್ನು ಹೆಚ್ಚಿಸಿದ್ದಾರೆ. ಶಿವಮೊಗ್ಗ ಮತ್ತು ನೆರೆಯ ಚಿಕ್ಕಮಗಳೂರಿನ ಕೆಲವು ಭಾಗಗಳಲ್ಲಿ ಮಂಗನ ಜ್ವರದ ವಿರಳ ಪ್ರಕರಣಗಳು ಈಗಾಗಲೇ ಕಾಣಿಸಿಕೊಳ್ಳಲು ಪ್ರಾರಂಭಿಸಿರುವ ಸಮಯದಲ್ಲಿ ಈ ಸಾವು ಸಂಭವಿಸಿದೆ. ಕರ್ನಾಟಕವು ಬಹುತೇಕ ಪ್ರತಿ ವರ್ಷ ಮಂಗನ ಜ್ವರ ಪ್ರಕರಣಗಳನ್ನು ಕಾಣುತ್ತದೆ. ವಿಶೇಷವಾಗಿ ಮಲೆನಾಡು ಪ್ರದೇಶದ ಅರಣ್ಯ ಮತ್ತು ಅರೆ-ಅರಣ್ಯ ಪ್ರದೇಶಗಳಲ್ಲಿ, ಆಗಾಗ್ಗೆ ವೈರಸ್ ಹರಡುತ್ತದೆ. ಈ ರೋಗ ಸಾಮಾನ್ಯವಾಗಿ ಜನವರಿ ಮತ್ತು ಮಾರ್ಚ್ ನಡುವೆ ಏರುಗತಿಯಲ್ಲಿರುತ್ತದೆ. ಸೋಂಕುಗಳು ಮುಂಗಾರು ಆರಂಭದವರೆಗೆ ಮುಂದುವರಿಯಬಹುದು.

4. BJP ವಿರುದ್ಧ ಕಾಂಗ್ರೆಸ್ ದೂರು

ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು ಬಿಜೆಪಿಯ 'ಎಕ್ಸ್' ಖಾತೆಯಲ್ಲಿ "ಮಾನಹಾನಿಕರ" ಪೋಸ್ಟ್ ನ್ನು ಪೋಸ್ಟ್ ಮಾಡಲಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಬೆಂಗಳೂರಿನ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಸಿಎಂ, ಡಿಸಿಎಂ ಅವರನ್ನು "ಸ್ಕ್ಯಾಮ್ ಲಾರ್ಡ್" ಎಂದು ಉಲ್ಲೇಖಿಸಿ ರಾಜ್ಯವನ್ನು "ಲೂಟಿ" ಮಾಡುವಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. 'ಸ್ಕ್ಯಾಮ್ ಲಾರ್ಡ್' ಎಂಬ ಶೀರ್ಷಿಕೆಯ ಪೋಸ್ಟ್‌ನಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಇತರ ಸಚಿವರ ಚಿತ್ರಗಳನ್ನು "ಇದು ಹಗರಣಗಳ ಕಥೆಯಲ್ಲ, ಅವರ ಹಿಂದಿನವರ ಕಥೆ" ಎಂಬ ಶೀರ್ಷಿಕೆ ನೀಡಲಾಗಿದೆ. "ಇದು ಕರ್ನಾಟಕವನ್ನು ಹಗಲಿರುಳು ಲೂಟಿ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರದ ಹಗರಣ ಸಾಮ್ರಾಜ್ಯದ ನಿಜವಾದ ಕಥೆ ಎಂದು ಅದು ಹೇಳಿದೆ. ಬಿಜೆಪಿ "ಲೂಟಿ" ಮತ್ತು "ಸ್ಕ್ಯಾಮ್" ಎಂಬ ಪದಗಳನ್ನು ಪದೇ ಪದೇ ಬಳಸುವ ಮೂಲಕ ಸಾರ್ವಜನಿಕರಲ್ಲಿ ಗೊಂದಲವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

5. ರಾಜ್ಯ ಸರ್ಕಾರಿ ನೌಕರರಿಗೆ ಖಾದಿ ಬಟ್ಟೆ ಬಳಕೆ ಕಡ್ಡಾಯ

ರಾಜ್ಯ ಸರ್ಕಾರಿ ನೌಕರರಿಗೆ ಖಾದಿ ಬಟ್ಟೆ ಬಳಕೆ ಕಡ್ಡಾಯ ಮಾಡಲಾಗಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪ್ರತಿ ತಿಂಗಳ ಮೊದಲ ಶನಿವಾರ ರಾಜ್ಯದ ಸರ್ಕಾರಿ ನೌಕರರು ಖಾದಿ ಬಟ್ಟೆ ಧರಿಸಿಕೊಂಡು ಕಚೇರಿಗೆ ಹೋಗಬೇಕು. ಬರುವ ಏಪ್ರಿಲ್ 24ರಂದು ಈ ಯೋಜನೆಗೆ ಚಾಲನೆ ದೊರೆಯಲಿದೆ. ಖಾದಿ ಉತ್ಪನ್ನಗಳನ್ನು ಉತ್ತೇಜಿಸುವ ಉದ್ದೇಶದಿಂದ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com