

ಬೆಂಗಳೂರು: ವಿಜಯ ನಗರ ಜಿಲ್ಲೆಯ ಕೊಟ್ಟೂರಿನಲ್ಲಿ ಭಯಾನಕ ರೀತಿಯಲ್ಲಿ ತ್ರಿಬಲ್ ಮರ್ಡರ್ ನಡೆದಿದೆ. ಮಗನಿಂದಲೇ ತಂದೆ-ತಾಯಿ ಹಾಗೂ ಸಹೋದರಿಯ ಕೊಲೆ ನಡೆದಿದೆ.
ಅಕ್ಷಯ್ ಕುಮಾರ್ ಬಂಧಿತ ಆರೋಪಿ. ಈತ ಜ.27 ರಂದು ತನ್ನ ತಂದೆ ಭೀಮರಾಜ್, ತಾಯಿ ಜಯಲಕ್ಷ್ಮಿ ಹಾಗೂ ಸಹೋದರಿ ಅಮೃತಾಳನ್ನ ಕೊಲೆ ಮಾಡಿದ್ದು, ಮನೆಯಲ್ಲಿಯೇ ಮೃತದೇಹಗಳನ್ನು ಹೂತುಹಾಕಿ ಬೆಂಗಳೂರಿಗೆ ಪರಾರಿಯಾಗಿದ್ದ ಎನ್ನಲಾಗಿದೆ.
ಬಳಿಕ ಅಕ್ಷಯ್ ಬೆಂಗಳೂರಿನ ತಿಲಕ ನಗರ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ಕೊಡಲು ಮುಂದಾಗಿದ್ದ. ದೂರು ಕೊಡಲು ಹೋದಾಗ, ಆತನ ನಡವಳಿಕೆ ಕಂಡು ಪೊಲೀಸರಿಗೆ ಅನುಮಾನ ಬಂದಿತ್ತು. ಬಳಿಕ ಪೊಲೀಸರು ವಿಚಾರಣೆ ಮಾಡಿದಾಗ ತಾನೇ ಕೊಲೆ ಮಾಡಿರೋದಾಗಿ ಬಾಯ್ಬಿಟ್ಟಿದ್ದಾನೆ.
ಯಾವ ಕಾರಣಕ್ಕೆ ಕೊಲೆ ಮಾಡಿದ್ದಾನೆ ಅನ್ನೋದು ಇನ್ನೂ ತಿಳಿದು ಬಂದಿಲ್ಲ. ಸದ್ಯ ಪೊಲೀಸರು ಆರೋಪಿಯನ್ನ ಬೆಂಗಳೂರಿನಿಂದ ಕರೆತಂದು ಕೊಟ್ಟೂರು ಮನೆಯಲ್ಲಿ ಪರಿಶೀಲನೆ, ಶವಪತ್ತೆ ಮತ್ತು ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ.
ಆರೋಪಿ ಅಕ್ಷಯ್ ಕುಮಾರ್ ಮೂಲತಃ ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿ ಗ್ರಾಮದವನು ಎನ್ನಲಾಗಿದೆ. ಉದ್ಯೋಗದ ಕಾರಣಕ್ಕೆ ಅಕ್ಷಯ್ ಕುಮಾರ್ ತಂದೆ ಕುಟುಂಬ ಸಮೇತ ಕೊಟ್ಟೂರಿಗೆ ಬಂದಿದ್ದರು. ಹಲವು ವರ್ಷಗಳಿಂದ ಕೊಟ್ಟೂರಿನಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದರು ಎಂಬುದು ತಿಳಿದುಬಂದಿದೆ.
Advertisement