

ಬೆಂಗಳೂರು: ಬೆಂಗಳೂರಿನ ಮೂಲಸೌಕರ್ಯ ಮತ್ತು ರಸ್ತೆ ಅಭಿವೃದ್ಧಿಗೆ 2,000 ಕೋಟಿ ರೂ. ಪ್ಯಾಕೇಜ್‌ನಲ್ಲಿ 'ತಾರತಮ್ಯ ಹಂಚಿಕೆ' ಮಾಡಲಾಗಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಆರೋಪಿಸಿದ್ದಾರೆ.
ಆದರೆ ವಿಪಕ್ಷ ನಾಯಕ ಆರ್ ಅಶೋಕ್ ಸ್ಪರ್ಧಿಸುವ ಪದ್ಮನಾಭನಗರಕ್ಕೆ ಸುಮಾರು 80 ಕೋಟಿ ರು ಅನುದಾನ ನೀಡಲಾಗಿದೆ. ಬಿಜೆಪಿ ಶಾಸಕರಿಗೆ ಹಂಚಿಕೆಯಾದ ಅನುದಾನದಲ್ಲಿ ಅತಿ ಹೆಚ್ಚಿನ ಅನುದಾನವಾಗಿದೆ. ಹೀಗಾಗಿ ಎಲ್ಲರ ಹುಬ್ಬೇರುವಂತೆ ಮಾಡಿದೆ.
ಕಾಂಗ್ರೆಸ್ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಾದ ಚಾಮರಾಜಪೇಟೆ, ಗಾಂಧಿ ನಗರ, ವಿಜಯನಗರ, ಶಾಂತಿನಗರ, ಹೆಬ್ಬಾಳ, ಗೋವಿಂದರಾಜನಗರ, ಪುಲಕೇಶಿನಗರ, ಶಿವಾಜಿನಗರ, ಬಿಟಿಎಂ ಲೇಔಟ್, ಸರ್ವಜ್ಞನಗರ ಮತ್ತು ಬ್ಯಾಟರಾಯನಪುರಕ್ಕೆ ತಲಾ 100 ಕೋಟಿ ರೂ. ಹಂಚಿಕೆಯಾಗಿದೆ.
ಆದರೆ ಬಿಜೆಪಿ ಪ್ರತಿನಿಧಿಸುವ ಕ್ಷೇತ್ರಗಳಿಗೆ ಹಂಚಿಕೆ 40 ಕೋಟಿ ರೂ.ಗಳಿಂದ 80 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ.ಡಿಕೆ.ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರವು ಬೆಂಗಳೂರಿನ ರಸ್ತೆ ಮೂಲಸೌಕರ್ಯ ಅಭಿವೃದ್ಧಿಗಾಗಿ ₹2,000 ಕೋಟಿ ಅನುದಾನಕ್ಕೆ ಅನುಮೋದನೆ ನೀಡಿದೆ.
ಈ ಬೃಹತ್ ಯೋಜನೆಯಡಿ, ವಿಧಾನಸಭಾ ಕ್ಷೇತ್ರವಾರು ಅನುದಾನ ಹಂಚಿಕೆ ಮಾಡಲಾಗಿದ್ದು, ಆಡಳಿತ ಪಕ್ಷದ ಕ್ಷೇತ್ರಗಳಿಗೆ ಹೆಚ್ಚಿನ ಪಾಲು ದೊರೆತಿದೆ ಎಂಬ ಚರ್ಚೆ ನಡೆಯುತ್ತಿದೆ. ಈ ಯೋಜನೆಯು ನಗರದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಗುರಿ ಹೊಂದಿದೆ.
ಬಿಜೆಪಿಯ ಹಿರಿಯ ನಾಯಕ ಆರ್. ಅಶೋಕ ಪ್ರತಿನಿಧಿಸುವ ಪದ್ಮನಾಭನಗರ ಕ್ಷೇತ್ರಕ್ಕೆ ₹80 ಕೋಟಿ ಮಂಜೂರಾಗಿದ್ದರೆ, ಉಳಿದಂತೆ ಪ್ರತಿಪಕ್ಷಗಳ (ಬಿಜೆಪಿ/ಜೆಡಿಎಸ್) ಶಾಸಕರಿರುವ ಬಹುತೇಕ ಕ್ಷೇತ್ರಗಳಿಗೆ ಕೇವಲ ₹40 ರಿಂದ ₹60 ಕೋಟಿಗಳಷ್ಟು ಸಾಧಾರಣ ಅನುದಾನ ಹಂಚಿಕೆ ಮಾಡಲಾಗಿದೆ.