

ಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿದು ಬಿಹಾರ ಮೂಲದ 7 ಮಂದಿ ಕಾರ್ಮಿಕರು ಸಾವಿಗೀಡಾಗಿರುವ ಘಟನೆ ಬಗ್ಗೆ ಸ್ಥಳೀಯ ಶಾಸಕ ಎಸ್ ಟಿ ಸೋಮಶೇಖರ್ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ವಾರಿ ಕುಸಿತ ಪ್ರಕರಣವು ಕೇವಲ ನಿರ್ಲಕ್ಷ್ಯದ ಪರಿಣಾಮವಲ್ಲ, ಅಪರಾಧ ಕೃತ್ಯ ಎಂದು ಆರೋಪಿಸಿದರು. ಅಕ್ರಮ ಕ್ವಾರಿ ಕಾರ್ಯಾಚರಣೆಗೆ ಭೂವಿಜ್ಞಾನ ಇಲಾಖೆ ಹಾಗೂ ಸ್ಥಳೀಯ ಪೊಲೀಸರು ಸಹಕಾರ ನೀಡಿರುವ ಆರೋಪವನ್ನೂ ಅವರು ಮಾಡಿದರು.
ಈ ಹಿಂದೆ ಅಕ್ರಮ ಕ್ವಾರಿ ಚಟುವಟಿಕೆಗಳನ್ನು ತಡೆಯುವಂತೆ ಮುಖ್ಯಮಂತ್ರಿ ಹಾಗೂ ಹಿರಿಯ ಅಧಿಕಾರಿಗಳ ಗಮನಕ್ಕೆ ಈ ವಿಷಯವನ್ನು ತಂದಿದ್ದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಅವರು ಹೇಳಿದರು.
ಘಟನೆಯಲ್ಲಿ ಏಳು ಮಂದಿ ಕಾರ್ಮಿಕರು ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂಬ ಮಾಹಿತಿ ತಮಗೆ ಲಭಿಸಿದೆ ಎಂದು ತಿಳಿಸಿದ ಸೋಮಶೇಖರ್, ಅಪಘಾತ ಸ್ಥಳಕ್ಕೆ ಭೇಟಿ ನೀಡುವ ನಿರೀಕ್ಷೆಯಿರುವ ಮುಖ್ಯಮಂತ್ರಿಗಳೊಂದಿಗೆ ಈ ವಿಷಯವನ್ನು ಗಂಭೀರವಾಗಿ ಪ್ರಸ್ತಾಪಿಸುವುದಾಗಿ ಹೇಳಿದರು.
10 ಕಾರ್ಮಿಕರ ಪೈಕಿ 7 ಮಂದಿ ದುರಂತದಲ್ಲಿ ಮೃತಪಟ್ಟಿರುವ ಮಾಹಿತಿ ಇದೆ. ಈ ಹಿಂದೆಯೇ ಎಚ್ಚೆತ್ತುಕೊಳ್ಳಿ ಎಂದು ಹೇಳಿದ್ದೆ. ಘಟನೆ ಸಂಬಂಧ ಸ್ಥಳೀಯ ಪೊಲೀಸರು, ಅರಣ್ಯ ಇಲಾಖೆ ವಿರುದ್ಧ ಕೇಸ್ ದಾಖಲಾಗಬೇಕು. ಘಟನೆ ಕಾರಣರಾದವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಅನುಮತಿ ಪಡೆದೇ ಬಂಡೆ ಸ್ಫೋಟ
ಇನ್ನು ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಹಿರಿಯ ಭೂ ವಿಜ್ಞಾನಿ ಕೃಷ್ಣವೇಣಿ, ಅನುಮತಿ ಪಡೆದೇ ಬಂಡೆ ಸ್ಫೋಟಿಸಿದ್ದಾರೆ. ಆದರೆ ಹೇಗೆ ದುರಂತ ಸಂಭವಿಸಿತು ಎಂದು ಕಾರಣ ಗೊತ್ತಿಲ್ಲ. ಸ್ಥಳ ಪರಿಶೀಲನೆ ಬಳಿಕ ಅವಘಡಕ್ಕೆ ಕಾರಣ ಗೊತ್ತಾಗಲಿದೆ ಎಂದವರು ತಿಳಿಸಿದ್ದಾರೆ. ಮತ್ತೊಂದೆಡೆ ದುರಂತ ಸ್ಥಳದಲ್ಲಿ ಮೃತಪಟ್ಟವರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಹೊಟ್ಟೆಪಾಡಿಗಾಗಿ ಒಂದು ಊರಿನಿಂದ ಮತ್ತೊಂದು ಊರಿಗೆ ಬಂದಿದ್ದೇವೆ. ಕಳೆದ ಒಂದು ವರ್ಷದಿಂದ ಇಲ್ಲಿಗೆ ಬಂದು ಕೆಲಸ ಮಾಡಿ ಜೀವನ ನಡೆಸುತ್ತಿದ್ದೇವೆ ಎಂದು ಅತ್ತುಕೊಂಡು ಹೇಳುತ್ತಿದ್ದಾರೆ.