ಶ್ರೀರಂಗಪಟ್ಟಣದಲ್ಲಿ ಬೃಹತ್ ಭೂ ಹಗರಣ: ಬರೋಬ್ಬರಿ 200 ಎಕರೆ ಸರ್ಕಾರಿ ಭೂಮಿ ಕಬಳಿಸಲು ನಕಲಿ ದಾಖಲೆ ಸೃಷ್ಟಿ; 9 ಜನರ ಬಂಧನ!

ಈ ಹಗರಣದಲ್ಲಿ ತಾಲೂಕಿನ ಭೂ ದಾಖಲೆಗಳ ಸಹಾಯಕ ನಿರ್ದೇಶಕ(ADLR) ಮೊಹಮ್ಮದ್ ಹುಸೇನ್ ಭಾಗಿಯಾಗಿದ್ದು, ಸದ್ಯ ತಲೆಮರೆಸಿಕೊಂಡಿದ್ದಾರೆ.
Upa Lokayukta Justice B Veerappa
ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ ವೀರಪ್ಪ ಹಾಗೂ ಮತ್ತಿತರರು
Updated on

ಬೆಂಗಳೂರು: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಮಹದೇವಪುರ ಗ್ರಾಮದಲ್ಲಿ ಬೃಹತ್ ಭೂ ಹಗರಣ ನಡೆದಿದ್ದು, ನಕಲಿ ದಾಖಲೆಗಳನ್ನು ಸೃಷ್ಟಿಸುವ ಮೂಲಕ ಸರ್ವೇ ನಂಬರ್ 411ರಲ್ಲಿರುವ ಬರೋಬ್ಬರಿ 200 ಎಕರೆ ಸರ್ಕಾರಿ ಜಮೀನನ್ನು ಕಬಳಿಸಿದ ಪ್ರಕರಣ ಬೆಳಕಿಗೆ ಬಂದಿದೆ.

ಈ ಹಗರಣದಲ್ಲಿ ತಾಲೂಕಿನ ಭೂ ದಾಖಲೆಗಳ ಸಹಾಯಕ ನಿರ್ದೇಶಕ(ADLR) ಮೊಹಮ್ಮದ್ ಹುಸೇನ್ ಭಾಗಿಯಾಗಿದ್ದು, ಸದ್ಯ ತಲೆಮರೆಸಿಕೊಂಡಿದ್ದಾರೆ. ಆದರೆ ಸರ್ಕಾರಿ ಕಚೇರಿಗಳಲ್ಲಿ ಸರ್ಕಾರಿ ನೌಕರನಂತೆ ನಟಿಸಿ, ಅನಧಿಕೃತವಾಗಿ ಸರ್ಕಾರಿ ತಂತ್ರಾಂಶದಲ್ಲಿ ದಾಖಲೆಗಳನ್ನು ಡಿಜಿಟಲೀಕರಣ ಮಾಡುತ್ತಿದ್ದ ಖಾಸಗಿ ವ್ಯಕ್ತಿ ನಿತಿನ್ ಪ್ರೇಮಾನಂದ ಸೇರಿದಂತೆ ಪೊಲೀಸರು ಒಂಬತ್ತು ಜನರನ್ನು ಬಂಧಿಸಿದ್ದಾರೆ.

ಈ ಖಾಸಗಿ ವ್ಯಕ್ತಿ ಇಲಾಖೆಯ ಯೂಸರ್ ಐಡಿ ಮತ್ತು ಪಾಸ್‌ವರ್ಡ್‌ಗಳನ್ನು ಪಡೆದು ADLR ಸಿಬ್ಬಂದಿ ಮಾಡಬೇಕಾದ ಕೆಲಸವನ್ನು ಅನಧಿಕೃತವಾಗಿ ಮಾಡುತ್ತಿದ್ದನು. ಸಂಬಂಧಪಟ್ಟ ಅಧಿಕಾರಿಗಳಿಗೆ ಲಂಚ ನೀಡಿ, ದಾಖಲೆಗಳನ್ನು ತಿದ್ದಿ, ಅಕ್ರಮವಾಗಿ ಆರ್‌ಟಿಸಿ ಸೃಷ್ಟಿಸಿ ಕ್ರಯಪತ್ರಗಳನ್ನು ಮಾಡಿಕೊಳ್ಳಲಾಗಿದೆ. ತಹಸೀಲ್ದಾರ್ ಕಚೇರಿ, ಎಡಿಎಲ್ ಆರ್ ಮತ್ತು ಪಿಡಿಒ ಕಚೇರಿಯ ಅಧಿಕಾರಿಗಳು ಈ ಹಗರಣದಲ್ಲಿ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ.

Upa Lokayukta Justice B Veerappa
ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಭೂಮಿ ಕಬಳಿಕೆ ಪ್ರಕರಣ: 6 ಮಂದಿ ಅಧಿಕಾರಿಗಳು ಅಮಾನತು

ಬಂಧಿತ ಸಿಬ್ಬಂದಿಗಳಲ್ಲಿ ಸರ್ವೇ ಸೂಪರ್‌ವೈಸರ್ ಯೋಗರಾಜ್, ಭೂಮಾಪಕರಾದ ಅರವಿಂದ್, ಜಯಬೋರೇಗೌಡ, ದಯಾನಂದ್, ಮಧು, ರಮೇಶ್, ಹರೀಶ್, ನೇಶಾ ಸಾರಿಕಾ ಮಲ್ಲಿ ಸಿ ಮತ್ತು ನಿತಿನ್ ಪ್ರೇಮಾನಂದ ಎಂಬ ಖಾಸಗಿ ವ್ಯಕ್ತಿ ಸೇರಿದ್ದಾರೆ. ಇದರೊಂದಿಗೆ, ಮೊದಲ ಬಾರಿಗೆ, ಇಡೀ ಸರ್ಕಾರಿ ಕಚೇರಿಯೇ ಸ್ಥಗಿತಗೊಂಡಿದೆ.

ಬಂಧಿತ ಆರೋಪಿಗಳು, ತಮ್ಮ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ಅನ್ನು ಈ ಖಾಸಗಿ ವ್ಯಕ್ತಿಗೆ ನೀಡಿದ್ದರು. ಅಧಿಕಾರಿಗಳೇ ತಮ್ಮ ಲಾಗಿನ್ ವಿವರಗಳನ್ನು ಹಂಚಿಕೊಂಡಿದ್ದರಿಂದ, ಅಕ್ರಮವಾಗಿ ದಾಖಲೆಗಳನ್ನು ತಿದ್ದುಪಡಿ ಮಾಡಲು ಸಾಧ್ಯವಾಯಿತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ ವೀರಪ್ಪ ಅವರು ಹೊರಡಿಸಿದ ವಾರಂಟ್‌ಗಳ ಆಧಾರದ ಮೇಲೆ ಆರೋಪಿಗಳ ಕಚೇರಿ ಹಾಗೂ ಮನೆಗಳಲ್ಲಿ ದಾಳಿ ನಡೆಸಲಾಗಿದೆ. ಆರೋಪಿಗಳ ಮನೆಯಲ್ಲಿ ವಶಪಡಿಸಿಕೊಳ್ಳಲಾದ 1,40,200 ರೂಪಾಯಿ ನಗದು ಹಣಕ್ಕೆ ಸಮರ್ಪಕ ಉತ್ತರ ಸಿಗದ ಕಾರಣ ಅದನ್ನು ವಶಕ್ಕೆ ಪಡೆಯಲಾಗಿದೆ ಎಂದು ನ್ಯಾ. ಬಿ ವೀರಪ್ಪ ಅವರು ತಿಳಿಸಿದ್ದಾರೆ.

ಶ್ರೀರಂಗಪಟ್ಟಣ ತಾಲ್ಲೂಕಿನ ಗ್ರಾಮದಲ್ಲಿ ಸುಮಾರು 200 ಎಕರೆ ಸರ್ಕಾರಿ ಭೂಮಿಯನ್ನು ಕಬಳಿಸಲು ಅಕ್ರಮ ಖಾತಾ ಸೃಷ್ಟಿಸಲಾಗುತ್ತಿದೆ ಎಂದು ಆರೋಪಿಸಿ ಮಹಾದೇವಪುರದ ನಾಗೇಂದ್ರ ಅವರು ಉಪ ಲೋಕಾಯುಕ್ತರಿಗೆ ದೂರು ನೀಡಿದ್ದರು. ಇದರಲ್ಲಿ ಸರ್ವೇ ಇಲಾಖೆಯ ಅಧಿಕಾರಿಗಳು, ತಹಶೀಲ್ದಾರ್ ಮತ್ತು ಎಡಿಎಲ್‌ಆರ್ ಶಾಮೀಲಾಗಿದ್ದಾರೆ ಎಂದು ಆರೋಪಿಸಿದ್ದರು.

ಈ ಹಿನ್ನೆಲೆಯಲ್ಲಿ, ನ್ಯಾಯಮೂರ್ತಿ ವೀರಪ್ಪ ಅವರು ಮಂಡ್ಯ ಲೋಕಾಯುಕ್ತ ಪೊಲೀಸರಿಗೆ, ತಹಶೀಲ್ದಾರ್ ಚೇತನಾ ಯಾದವ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಿ ಆರ್ ನಾಗೇಂದ್ರ, ಎಡಿಎಲ್ ಆರ್ ಮೊಹಮ್ಮದ್ ಹುಸೇನ್ ಮತ್ತು ಮಂಡ್ಯ ಜಿಲ್ಲೆಯ ಪಾಂಡವಪುರ ಉಪ ವಿಭಾಗದ ಸಹಾಯಕ ಆಯುಕ್ತ ಶ್ರೀನಿವಾಸ್ ಅವರ ಕಚೇರಿ ಹಾಗೂ ಮನೆಗಳ ಮೇಲೆ ದಾಳಿ ನಡೆಸುವಂತೆ ಆದೇಶಿಸಿದ್ದರು.

ಬಂಧನದ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ನ್ಯಾಯಮೂರ್ತಿ ವೀರಪ್ಪ, ತಹಶೀಲ್ದಾರ್ ಮತ್ತು ಸಹಾಯಕ ಆಯುಕ್ತರ ಆವರಣದಲ್ಲಿ ಶೋಧ ಇನ್ನೂ ಮುಂದುವರೆದಿದ್ದು, ತನಿಖೆ ಮುಂದುವರೆದಿದೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com