

ತುಮಕೂರು: SIR ಕರ್ತವ್ಯಕ್ಕಾಗಿ ಬೈಕ್ ನಲ್ಲಿ ತೆರಳುತ್ತಿದ್ದಾಗ ಅಪಘಾತವಾಗಿ ಸಾವನ್ನಪ್ಪಿದ್ದ ಗ್ರಾಮ ಲೆಕ್ಕಾಧಿಕಾರಿ ಭುವನಾ ಭುವನಾ ಕುಟುಂಬಕ್ಕೆ 1 ಕೋಟಿ ವಿಮೆ ಹಣ 15 ದಿನಗಳಲ್ಲಿ ಬರುತ್ತದೆ. ಅಲ್ಲದೇ ಕುಟುಂಬದಲ್ಲಿ ಒಬ್ಬರಿಗೆ ಸರ್ಕಾರ ಉದ್ಯೋಗ ಕೊಡುತ್ತೇವೆ. ಚುನಾವಣಾ ಆಯೋಗದಿಂದ 30 ಲಕ್ಷ ರೂ. ಮಂಜೂರು ಮಾಡಿಸುತ್ತೇವೆ ಎಂದು ಕಂದಾಯ ಸಚಿವರೂ ಆದ ಡಿಸಿಎಂ ಪರಮೇಶ್ವರ್ ಭರವಸೆ ನೀಡಿದ್ದಾರೆ.
ಭುವನಾ ಸಾವು ಖಂಡಿಸಿ ಕಂದಾಯ ನೌಕರರ ಸಂಘದಿಂದ ನಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಪರಮೇಶ್ವರ್, ಶೀಘ್ರದಲ್ಲೇ ಪರಿಹಾರ ಕೊಡಿಸುವ ಹಾಗೂ ನೌಕರರ ಬೇಡಿಕೆ ಈಡೇರಿಸುವ ಭರವಸೆ ನೀಡಿದರು. ಬಳಿಕ ನೌಕರರ ಸಂಘವು ಪ್ರತಿಭಟನೆ ಹಿಂಪಡೆದುಕೊಂಡಿದೆ.
ಈ ವೇಳೆ ಮಾತನಾಡಿದ ಪರಮೇಶ್ವರ್, ನಾನು ತಕ್ಷಣ ಸ್ಪಂದಿಸಲು ಆಗದಿದ್ದಕ್ಕೆ ಕ್ಷಮೆ ಕೋರುತ್ತೇನೆ. ನನ್ನ ಆರೋಗ್ಯದಲ್ಲಿ ವ್ಯತ್ಯಾಸ ಆಗಿತ್ತು, ಹಾಗಾಗಿ ಬರಲು ಆಗಿರಲಿಲ್ಲ. ನಿಮ್ಮನ್ನು ನಿರ್ಲಕ್ಷ್ಯ ಮಾಡಲು ನಾನು ಬಿಡಲ್ಲ ಎಂದರು.
8 ವರ್ಷದಿಂದ ಗ್ರೇಡ್-2 ತಹಶಿಲ್ದಾರ್‌ಗೆ ಬಡ್ತಿ ಆಗಿರಲಿಲ್ಲ. ನಾನು ಬಂದ ಒಂದೇ ವಾರದಲ್ಲಿ ಆ ಪ್ರಕ್ರಿಯೆ ಆರಂಭಿಸಿದ್ದೇನೆ. ನಾನು ನೌಕರರ ಪರವಾಗಿ ಇದ್ದವನು, ಅದು ನನ್ನ ಜವಾಬ್ದಾರಿ. ಹಾಗಾಗಿ ಒಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.
ಎಸ್‌ಐಆರ್ ಭೂತ ನಮ್ಮ ಮುಂದೆ ಇದೆ. ಆ ಭೂತ ನಮ್ಮ ಮುಂದೆ ತಂದು ಇಟ್ಟಿದ್ದಾರೆ. 2 ತಿಂಗಳು ಸಮಯಾವಕಾಶ ಕೊಡಬಹುದಿತ್ತು. 1 ತಿಂಗಳು ಕೊಟ್ಟು ಭಯದ ವಾತಾವರಣ ತಂದಿಟ್ಟಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.