

ಬೆಂಗಳೂರು: ಬೆಂಗಳೂರಿನಲ್ಲಿ ಸುರಂಗ ರಸ್ತೆ (Tunnel Road) ನಿರ್ಮಾಣ ಕಾಮಗಾರಿಯ ಗುತ್ತಿಗೆ ನೀಡುವ ಪ್ರಕ್ರಿಯೆಯು ತಾವು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL)ಯ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ.
ಬೆಂಗಳೂರಿನ ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು, ರಾಜ್ಯ ಸರ್ಕಾರದ ಸುರಂಗ ಮಾರ್ಗ ಯೋಜನೆಯನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ನಿನ್ನೆ ವಿಚಾರಣೆಗೆ ಹಾಜರಾಗಿದ್ದರು.
ಈ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ತೇಜಸ್ವಿ ಸೂರ್ಯ, ಮುಖ್ಯ ನ್ಯಾಯಮೂರ್ತಿಗಳು, ಈ ಅರ್ಜಿ ಬಾಕಿ ಇರುವ ವಿಚಾರವನ್ನು ಸಾಧ್ಯತೆಯ ಗುತ್ತಿಗೆದಾರರಿಗೆ ರಾಜ್ಯ ಸರ್ಕಾರ ತಿಳಿಸಬೇಕು ಮತ್ತು ಯಾವುದೇ ಹಕ್ಕು (Equity) ಸೃಷ್ಟಿಯಾಗದಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶಿಸಿದ್ದಾರೆ.
ಯಾವುದೇ ಗುತ್ತಿಗೆ ನೀಡಿದರೂ ಅದು ಪಿಐಎಲ್‌ನ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ. ಲಾಲ್‌ಬಾಗ್‌ನಲ್ಲಿ ಮರಗಳನ್ನು ಕಡಿಯದಂತೆ ನೀಡಿದ್ದ ಹಿಂದಿನ ಆದೇಶವನ್ನೂ ನ್ಯಾಯಾಲಯ ಪುನರುಚ್ಚರಿಸಿದೆ ಎಂದು ತಿಳಿಸಿದ್ದಾರೆ. ಸುರಂಗ ರಸ್ತೆಗಾಗಿ ಲಾಲ್‌ಬಾಗ್‌ನಲ್ಲಿ ಮರ ಕಡಿಯುವುದಕ್ಕೆ ತಡೆ ನೀಡಿರುವ ಹೈಕೋರ್ಟ್ ಆದೇಶವನ್ನು ಸ್ವಾಗತಿಸಿದ ಅವರು, 'ಯೋಜನೆ ಕಾನೂನುಬಾಹಿರ, ಪರಿಸರ ಮೌಲ್ಯಮಾಪನವೂ ನಡೆದಿಲ್ಲ' ಎಂದು ಆರೋಪಿಸಿದರು.
ಇದೇ ಪ್ರಕರಣದ ಅಂತಿಮ ವಿಚಾರಣೆ ಆಗಸ್ಟ್ 20ರಂದು ನಡೆಯಲಿದೆ ಎಂದು ಹೇಳಿದರು.