

ಬೆಂಗಳೂರು: ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್(ಬಿಎಂಆರ್ ಸಿಎಲ್) ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಗ್ ಶಾಕ್ ನೀಡುತ್ತಿದ್ದು, ಮತ್ತೆ ದರ ಏರಿಕೆಯಾಗುವ ಸಾಧ್ಯತೆಯಿದೆ.
ಬಿಎಂಆರ್‌ಸಿಎಲ್ ಹೊಸ ಮಾದರಿಯಲ್ಲಿ ಮೆಟ್ರೋ ಪ್ರಯಾಣ ದರ ಏರಿಕೆ ಮಾಡುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದು, ಮೂರು ವರ್ಷಗಳಿಗೊಮ್ಮೆ ಶೇ.12ರಷ್ಟು ದರ ಏರಿಕೆ ಮಾಡುವ ಬಗ್ಗೆ ಪ್ರಸ್ತಾಪಿಸಿದೆ.
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಕ್ಕೆ ಸಲ್ಲಿಸಲಾದ ಪರಿಷ್ಕೃತ ವಿಸ್ತೃತ ಯೋಜನಾ ವರದಿಯಲ್ಲಿ ದರ ಏರಿಕೆಯ ಹೊಸ ಲೆಕ್ಕಾಚಾರವನ್ನು ಉಲ್ಲೇಖಿಸಲಾಗಿದೆ. ನಮ್ಮ ಮೆಟ್ರೋ 3 'ಎ' ಸರ್ಜಾಪುರ - ಹೆಬ್ಬಾಳ ಮಾರ್ಗದ ಪರಿಷ್ಕೃತ ವಿಸ್ತೃತ ಯೋಜನಾ ವರದಿಯಲ್ಲಿ ಯೋಜನೆ ಪೂರ್ಣಗೊಳ್ಳುವ 2033ರ ವೇಳೆಗೆ ಆರ್ಥಿಕ ಆಂತರಿಕ ಆದಾಯ ದರವನ್ನು ಕಾಯ್ದುಕೊಳ್ಳಲು ಪ್ರತಿ 2 ರಿಂದ 3 ವರ್ಷಗಳಿಗೊಮ್ಮೆ ಪ್ರಯಾಣ ದರ ಪರಿಷ್ಕರಿಸುವ ಕುರಿತು ವಿವಿಧ ಮಾದರಿಗಳನ್ನು ಕೇಂದ್ರಕ್ಕೆ ಬಿಎಂಆರ್ ಸಿಎಲ್ ಪ್ರಸ್ತಾಪಿಸಿದೆ.
ಬಿಎಂಆರ್‌ಸಿಎಲ್ ಅಂದಾಜಿನಂತೆ 2033ರಲ್ಲಿ ಈ ಮಾರ್ಗದಲ್ಲಿ ಪ್ರತಿದಿನ 6.44 ಲಕ್ಷ ಪ್ರಯಾಣಿಕರು ಸಂಚರಿಸಲಿದ್ದು, ವರ್ಷಕ್ಕೆ 2,164 ಕೋಟಿ ಆದಾಯ ಹರಿದುಬರಲಿದೆ. ಪ್ರತಿ 3 ವರ್ಷಕ್ಕೊಮ್ಮೆ ಶೇ. 12ರಷ್ಟು ದರ ಪರಿಷ್ಕರಣೆಯಾದರೆ 2033ರ ವೇಳೆಗೆ ಗರಿಷ್ಠ ಪ್ರಯಾಣ ದರ 126ಕ್ಕೆ ತಲುಪುವ ಸಾಧ್ಯತೆಯಿದೆ ಎಂದು ಉಲ್ಲೇಖ ಮಾಡಲಾಗಿದೆ.
ಈ ಪ್ರಸ್ತಾಪಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದರೆ, ಬಳಿಕ ಇದನ್ನು ದರ ಪರಿಷ್ಕರಣಾ ಸಮತಿಯೂ ಪರಿಶೀಲನೆ ಮಾಡಬೇಕಿದೆ. ಬಳಿಕವಷ್ಟೇ ಗ್ರೀನ್ ಸಿಗ್ನಲ್ ಸಿಗಲಿದೆ. ಅಂತಿಮ ನಿರ್ಧಾರ ದರ ಪರಿಷ್ಕರಣೆ ಸಮತಿಯದ್ದೇ ಆಗಿರಲಿದೆ.