

ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ನಿನ್ನೆ ಬುಧವಾರ ಲೋಕಭವನದಲ್ಲಿ ಸಚಿವ ಸಂಪುಟ ಸದಸ್ಯರೊಂದಿಗೆ ಪ್ರಮಾಣವಚನ ಸ್ವೀಕರಿಸಿದ್ದು ಅವರ ಅಭಿಮಾನಿಗಳಿಗೆ ದೀರ್ಘಕಾಲದಿಂದ ಕಂಡ ಕನಸು ನನಸಾದಂತಾಗಿತ್ತು.
ಬೆಂಗಳೂರಿನ ರಾಜಭವನದಲ್ಲಿ ನಡೆದ ಸಮಾರಂಭದ ಸ್ಥಳ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು 2,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಸ್ವತಃ ಭದ್ರತಾ ವ್ಯವಸ್ಥೆಯ ಮೇಲ್ವಿಚಾರಣೆ ನಡೆಸಿ, ಅವರಿಗೆ ಮೂವರು ಜಂಟಿ ಪೊಲೀಸ್ ಆಯುಕ್ತರು ಹಾಗೂ 20 ಉಪ ಪೊಲೀಸ್ ಆಯುಕ್ತರು (ಡಿಸಿಪಿಗಳು) ಸಹಕಾರ ನೀಡಿದ್ದರು.
ಇದೇ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಡಿ ಕೆ ಶಿವಕುಮಾರ್ ಬೆಂಬಲಿಗರ ಸಂಭ್ರಮಾಚರಣೆಯಿಂದ ಬೆಂಗಳೂರಿನ ಹಲವು ಭಾಗಗಳಲ್ಲಿ ಹಬ್ಬದ ವಾತಾವರಣಕ್ಕೆ ಸಾಕ್ಷಿಯಾದವು. ನೂತನ ಮುಖ್ಯಮಂತ್ರಿಗೆ ಅಭಿನಂದನೆ ಸಲ್ಲಿಸುವ ಬೃಹತ್ ಬ್ಯಾನರ್‌ಗಳು, ಫ್ಲೆಕ್ಸ್‌ಗಳು ಹಾಗೂ ಕಟೌಟ್‌ಗಳು ನಗರದಾದ್ಯಂತ ಕಣ್ಣಿಗೆ ರಾಚುತ್ತಿದ್ದವು.
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸುಮನಹಳ್ಳಿಯಲ್ಲಿ ಪಕ್ಷದ ಕಾರ್ಯಕರ್ತರು 100 ಅಡಿ ಎತ್ತರದ ಡಿ.ಕೆ. ಶಿವಕುಮಾರ್ ಅವರ ಬೃಹತ್ ಕಟೌಟ್ ನ್ನು ಸ್ಥಾಪಿಸಿ ಸಂಭ್ರಮಿಸಿದ್ದಾರೆ.
ಡಿ.ಕೆ. ಶಿವಕುಮಾರ್ ಅವರ ಕಟ್ಟಾ ಅಭಿಮಾನಿಯಿಂದ ವಿಶಿಷ್ಟ ಅಭಿಮಾನ ಪ್ರದರ್ಶನ
ಕುಣಿಗಲ್ ವಿಧಾನಸಭಾ ಕ್ಷೇತ್ರದ ಹನುಮಾಪುರ ಗ್ರಾಮದ ನಿವಾಸಿ ಹಾಗೂ ಡಿ.ಕೆ. ಶಿವಕುಮಾರ್ ಅವರ ಕಟ್ಟಾ ಅಭಿಮಾನಿಯಾಗಿರುವ ಗಿರಿ ಗೌಡ ಅವರು ತಮ್ಮ ನಾಯಕನ ಮೇಲಿನ ಅಭಿಮಾನವನ್ನು ವಿಶಿಷ್ಟ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ.
ಡಿ.ಕೆ. ಶಿವಕುಮಾರ್ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ದಿನಾಂಕ ಮತ್ತು ಸಮಯವನ್ನು ತಮ್ಮ ಎರಡೂ ಕೈಗಳ ಮೇಲೆ ಟ್ಯಾಟೂ (ಹಚ್ಚೆ) ರೂಪದಲ್ಲಿ ಹಾಕಿಸಿಕೊಂಡಿದ್ದಾರೆ.
ತಮ್ಮ ಬಹುಕಾಲದ ಕನಸು ನನಸಾಗುತ್ತಿರುವ ಸಂತಸದಲ್ಲಿ ಗಿರಿ ಗೌಡ ಶಿವಕುಮಾರ್ ಮುಖ್ಯಮಂತ್ರಿಯಾದ ಕ್ಷಣವನ್ನು ಜೀವನಪೂರ್ತಿ ನೆನಪಿನಲ್ಲಿ ಉಳಿಸಿಕೊಳ್ಳುವ ಉದ್ದೇಶದಿಂದ ಈ ಹಚ್ಚೆ ಹಾಕಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.
ಅಭಿಮಾನಿಗಳ ಅಭಿಮಾನ
ಯಾದಗಿರಿಯಿಂದ ಬಂದ ಡಿ ಕೆ ಶಿವಕುಮಾರ್ ಅಭಿಮಾನಿಯೊಬ್ಬರು ತಮ್ಮ ಕೈ ಮೇಲೆ ಡಿ.ಕೆ. ಶಿವಕುಮಾರ್ ಅವರ ಹೆಸರಿನ ಹಚ್ಚೆ (ಟ್ಯಾಟೂ) ಹಾಕಿಸಿಕೊಂಡು ಬೆಂಬಲ ವ್ಯಕ್ತಪಡಿಸಿದ್ದಾರೆ. ರಮೇಶ್ ಎಂದು ಗುರುತಿಸಲ್ಪಟ್ಟಿರುವ ಈ ಅಭಿಮಾನಿ, ಡಿ ಕೆ ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಾರೆ ಎಂಬ ನಿರೀಕ್ಷೆಯಿಂದ ಮೂರು ತಿಂಗಳ ಹಿಂದೆಯೇ ಈ ಟ್ಯಾಟೂ ಹಾಕಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ.
ಅವರು ಮುಂದಿನ ಮುಖ್ಯಮಂತ್ರಿ ಆಗುತ್ತಾರೆ ಎಂಬ ಆಶಯ ನನ್ನಲ್ಲಿತ್ತು. ಆ ಕನಸು ಇಂದು ನನಸಾಗಿದೆ ಎಂದು ರಮೇಶ್ ಹೇಳಿದ್ದಾರೆ. ಜೊತೆಗೆ, ಪ್ರೀತಿಯು ಹೃದಯದಲ್ಲಿರಬೇಕು, ಟ್ಯಾಟೂಗಳ ಮೂಲಕ ಪ್ರದರ್ಶಿಸುವ ಅಗತ್ಯವಿಲ್ಲ ಎಂದು ಡಿ ಕೆ ಶಿವಕುಮಾರ್ ಅವರು ಸಲಹೆ ನೀಡಿದ್ದರು ಎಂದೂ ಅವರು ತಿಳಿಸಿದ್ದಾರೆ.
ಡಿ ಕೆ ಶಿವಕುಮಾರ್ ಪ್ರಮಾಣವಚನ ಸಮಾರಂಭದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕರು, ವಿವಿಧ ರಾಜಕೀಯ ಗಣ್ಯರು ಹಾಗೂ ಸಾವಿರಾರು ಬೆಂಬಲಿಗರು ಭಾಗವಹಿಸಿದ್ದು, ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದಲ್ಲಿ ನಡೆದ ಅತಿದೊಡ್ಡ ರಾಜಕೀಯ ಕಾರ್ಯಕ್ರಮಗಳಲ್ಲಿ ಒಂದಾಗಿದೆ.
Advertisement