

ಬೆಂಗಳೂರು: ಅತ್ಯಂತ ಸವಾಲಿನ ಸಂದರ್ಭಗಳಲ್ಲಿಯೂ ನಿರ್ಮಲಾ ಸೀತಾರಾಮನ್ ಅವರು ಭಾರತದ ಅತ್ಯಂತ ಯಶಸ್ವಿ ಹಣಕಾಸು ಸಚಿವರಲ್ಲಿ ಒಬ್ಬರಾಗಿದ್ದಾರೆ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಶ್ಲಾಘಿಸಿದ್ದಾರೆ.
ಬೆಂಗಳೂರಿನಲ್ಲಿಂದು ಬಿಜೆಪಿಯ ವಿಕಸಿತ ಭಾರತ ಸಂಕಲ್ಪ ಸಮಾವೇಶ'ದಲ್ಲಿ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, ವಿತ್ತ ಸಚಿವರು, ಅವರ ಆಡಳಿತ ವರ್ಷಗಳನ್ನು ನೋಡಿದಾಗ ಬಹುಶ: ನಿರ್ಮಲಾ ಸೀತಾರಾಮನ್ ಅವರು ಎದುರಿಸಿದಷ್ಟು ಭೌಗೋಳಿಕ, ರಾಜಕೀಯ ಸವಾಲುಗಳು, ಸಮಸ್ಯೆಗಳನ್ನು ಇದುವರೆಗೆ ಯಾವ ಹಣಕಾಸು ಸಚಿವರೂ ಎದುರಿಸಿರಲಿಕ್ಕಿಲ್ಲ, ಆದರೆ ನಿರ್ಮಲಾ ಸೀತಾರಾಮನ್ ಅವರು ಸವಾಲುಗಳೆಲ್ಲವನ್ನೂ ಸಮರ್ಥವಾಗಿ ಎದುರಿಸಿದ್ದಾರೆ ಎಂದರು.
ದೇಶದ ಆರ್ಥಿಕತೆ ನಿರಂತರ ಬೆಳೆಯಲು, ಹೊಸ ಉದ್ಯೋಗಾವಕಾಶ ಸೃಷ್ಟಿಯಾಗಲು, ಕಾಲೇಜಿನಿಂದ ಹೊರಬರುವ ಯುವ ಪ್ರತಿಭೆಗಳಿಗೆ ಉದ್ಯೋಗಾವಕಾಶ ಸೃಷ್ಟಿಸಲು, ತೈಲ ಬೆಲೆ ಏರಿಕೆ, ಬೆಲೆ ಏರಿಕೆಯ ಮಧ್ಯೆ ಹಣದುಬ್ಬರ ನಿಯಂತ್ರಿಸಿ, ದೇಶದ ಮಧ್ಯಮ ವರ್ಗದ ಜನರು ಇವತ್ತಿಗೂ ಸುಖವಾಗಿ ಜೀವನ ನಡೆಸಲು ನಿರ್ಮಲಾ ಸೀತಾರಾಮನ್ ಬಹಳ ದೊಡ್ಡ ಪಾತ್ರ ವಹಿಸಿದ್ದಾರೆ, ಅವರು ಅಭಿನಂದನಾರ್ಹರು ಎಂದರು.
ಬೆಂಗಳೂರಿನ ಗುರು ರಾಘವೇಂದ್ರ ಸಹಕಾರ ಸೊಸೈಟಿಯ ಸಮಸ್ಯೆಯಿದೆ, ನ್ಯಾಶನಲ್ ಕೋ ಆಪರೇಟಿವ್ ಬ್ಯಾಂಕ್ ಸಮಸ್ಯೆ ಬಂತು. ನಿರ್ಮಲಾ ಸೀತಾರಾಮನ್ ಅವರು ರಾಷ್ಟ್ರೀಯ ಬ್ಯಾಂಕುಗಳ ಜೊತೆ ವಿಲೀನಗೊಳಿಸಿ 40-50 ಸಾವಿರ ಜನ ಠೇವಣಿದಾರರಿಗೆ ಸಹಾಯ ಮಾಡಿದರು. ಗುರು ರಾಘವೇಂದ್ರ ಬ್ಯಾಂಕಿನ ಸಮಸ್ಯೆ ಬಗೆಹರಿದಿಲ್ಲ, ನಮ್ಮ ಕ್ಷೇತ್ರದಲ್ಲಿ 60 ಸಾವಿರಕ್ಕೂ ಹೆಚ್ಚು ಕುಟುಂಬಗಳು ಸಮಸ್ಯೆಯಿದೆ, ಗುರು ರಾಘವೇಂದ್ರ ಸಹಕಾರ ಬ್ಯಾಂಕಿನ ಸಮಸ್ಯೆ ಆದಷ್ಟು ಶೀಘ್ರ ಬಗೆಹರಿಸಿಕೊಡಿ ಎಂದು ಸಚಿವೆಗೆ ಸಂಸದ ತೇಜಸ್ವಿ ಸೂರ್ಯ ಮನವಿ ಮಾಡಿಕೊಂಡರು.
ಪ್ರಧಾನಿ ನರೇಂದ್ರ ಮೋದಿ ಸರ್ಕಾರವು 12 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ಅವರು ಇಂದು ಬೆಂಗಳೂರಿನ ಬನ್ನಪ್ಪ ಗಾರ್ಡನ್‌ನಲ್ಲಿ ತಾಯಿಯ ಹೆಸರಿನಲ್ಲಿ ಒಂದು ಗಿಡ ಅಭಿಯಾನದ ಅಂಗವಾಗಿ ಗಿಡ ನೆಟ್ಟರು. ಬಳಿಕ ಸಂತ ಶ್ರೀ ದೇವರ ದಾಸಿಮಯ್ಯ ಅವರಿಗೆ ಪುಷ್ಪ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಸಂಸದ ಪಿ. ಸಿ. ಮೋಹನ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಪದಾಧಿಕಾರಿಗಳು ಮತ್ತು ಪ್ರಮುಖರು ಉಪಸ್ಥಿತರಿದ್ದರು.
Advertisement