
ವಿಧಾನ ಸಭೆ ಅಧಿವೇಶನದ ವೇಳೆ ಶಾಸಕರ ಪ್ರಶ್ನೆಗಳಿಗೆ ಸಚಿವರು ಸರಿಯಾಗಿ ಉತ್ತರ ನೀಡದ ಕಾರಣ ಗರಂ ಆದ ಸ್ಪೀಕರ್ ಯು.ಟಿ. ಖಾದರ್ ಕಲಾಪವನ್ನು ಮುಂದೂಡಿದ ಪ್ರಸಂಗ ನಡೆದಿದೆ. ಲಿಖಿತ ರೂಪದ 230 ಪ್ರಶ್ನೆಗಳ ಪೈಕಿ 84 ಪ್ರಶ್ನೆಗಳಿಗೆ ಮಾತ್ರ ಉತ್ತರಿಸಲಾಗಿತ್ತು. ಹೀಗಾಗಿ ಸಚಿವರ ನಡೆಗೆ ಬೇಸರ ವ್ಯಕ್ತಪಡಿಸಿದ ಸ್ಪೀಕರ್ ಉತ್ತರ ಕೊಡದಿರಲು ಕಾರಣ ಹೇಳುವವರೆಗೂ ಸದನ ನಡೆಸಲ್ಲ ಎಂದು ಕಲಾಪ ಮೊಟಕುಗೊಳಿಸಿ ಪೀಠದಿಂದ ತೆರಳಿದ್ದರು. ವಿಧಾನಸಭೆ ಅಧಿವೇಶನಕ್ಕೆ ಸಚಿವರು ಗೈರಾಗಿದ್ದಾರೆ. ಅಲ್ಲದೇ ಶಾಸಕರ ಪ್ರಶ್ನೆಗಳಿಗೆ ಉತ್ತರ ನೀಡಲು ಸಚಿವರು ಇಲ್ಲ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇಲ್ಲ ಎಂದು ಯುಟಿ ಖಾದರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಬಳಿಕ ಸಿಎಂ ಸಿದ್ದರಾಮಯ್ಯ ಸ್ಪೀಕರ್ ಖಾದರ್ ಜೊತೆ ಮಾತುಕತೆ ನಡೆಸಿ ಮನವೊಲಿಸಿದರು. ಸ್ಪೀಕರ್ ಜೊತೆ ಮಾತನಾಡಿದ ಬಳಿಕ ಮೂವರು ಅಧಿಕಾರಿಗಳನ್ನು ಅಮಾನತು ಮಾಡುವಂತೆ ಸಿದ್ದರಾಮಯ್ಯ ಸೂಚನೆ ನೀಡಿದರು.
ರಾಜ್ಯದಲ್ಲಿ LPG ಸಿಲಿಂಡರ್ ಕೊರತೆಯನ್ನು ಎದುರಿಸಲು ವಿದೇಶಗಳಿಂದ ಅನಿಲವನ್ನು ಆಮದು ಮಾಡುವುದೂ ಸೇರಿದಂತೆ ಪರ್ಯಾಯ ಕ್ರಮಗಳನ್ನು ಪರಿಶೀಲಿಸಲು ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಜನಸಂಖ್ಯೆಯ ದೊಡ್ಡ ಭಾಗವು ಆಹಾರಕ್ಕಾಗಿ ಹೊಟೇಲ್ ಮೇಲೆ ಅವಲಂಬಿತವಾಗಿದ್ದು, ಎಲ್‌ಪಿಜಿ ಕೊರತೆಯಿಂದ ಹೊಟೇಲ್ ಸೇವೆಗಳು ಅಸ್ತವ್ಯಸ್ತವಾದರೆ ಸಾಮಾನ್ಯ ಜೀವನದ ಮೇಲೂ ಪರಿಣಾಮ ಬೀರುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು. ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ, ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಸಿಎಂ ಹೇಳಿದರು. ಇದೇ ವೇಳೆ, ರಾಜ್ಯದಲ್ಲಿ ನಿತ್ಯ 44 ಸಾವಿರ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೇಕು. ಶೇ. 20ರಂತೆ ನಮಗೆ 9 ಸಾವಿರ ವಾಣಿಜ್ಯ ಸಿಲಿಂಡರ್ ಸಿಗುತ್ತದೆ. 9 ಸಿಲಿಂಡರ್ ಪೈಕಿ 4 ಸಾವಿರ ಆಸ್ಪತ್ರೆಗಳಿಗೆ ಹೋಗುತ್ತದೆ. ಹೊಟೇಲ್ ಗಳಿಗೆ 1 ಸಾವಿರ ನೀಡುತ್ತೇವೆ ಎಂದರು. ಇನ್ನು LPG ಕೊರೆತೆ ಹಿನ್ನೆಲೆ ಕೇಂದ್ರಕ್ಕೆ ಸಿದ್ದರಾಮಯ್ಯ ಮತ್ತೊಮ್ಮೆ ಪತ್ರ ಬರೆಯುತ್ತಾರೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್ ಮುನಿಯಪ್ಪ ಹೇಳಿದರು. ಎಲ್‌ಪಿಜಿ ಪೂರೈಕೆ ಪರಿಸ್ಥಿತಿಯ ಬಗ್ಗೆ ಆತಂಕ ಬೇಡ ಎಂದು ಸಾರ್ವಜನಿಕರಿಗೆ ಮನವಿ ಮಾಡಿದ ಸಚಿವರು, ಹೋಟೆಲ್‌ಗಳು ತಾತ್ಕಾಲಿಕವಾಗಿ ವಿದ್ಯುತ್ ಸ್ಟೌವ್‌ಗಳನ್ನು ಬಳಸುವಂತೆ ಒತ್ತಾಯಿಸಿದರು.
ರಾಜ್ಯದ ಬಾಗಲಕೋಟೆ, ದಾವಣಗೆರೆ ದಕ್ಷಿಣ ಕ್ಷೇತ್ರಗಳ ವಿಧಾನಸಭೆ ಉಪಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಏಪ್ರಿಲ್ 9ರಂದು ಎರಡೂ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ಮೇ 4ರಂದು ಫಲಿತಾಂಶ ಪ್ರಕಟವಾಗಲಿದೆ. ದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿ ವೇಳೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಈ ಎರಡೂ ಕ್ಷೇತ್ರಗಳ ಉಪ ಚುನಾವಣೆಯ ದಿನಾಂಕ ಘೋಷಿಸಿದರು. ಮಾರ್ಚ್ 16ರಿಂದ ಉಪ ಚುನಾವಣೆ ಅಧಿಸೂಚನೆ ಪ್ರಕಟವಾಗಲಿದ್ದು, ಮಾರ್ಚ್ 24ರಂದು ನಾಮಪತ್ರ ಸಲ್ಲಿಸಲು ಮತ್ತು ಮಾರ್ಚ್ 26 ನಾಮಪತ್ರ ಹಿಂಪಡೆಯಲು ಕೊನೆ ದಿನವಾಗಿದೆ. ಹೆಚ್.ವೈ ಮೇಟಿ ನಿಧನದಿಂದ ಬಾಗಲಕೋಟೆ ಕ್ಷೇತ್ರ ತೆರವಾಗಿದ್ದರೆ, ಶಾಮನೂರು ಶಿವಶಂಕರಪ್ಪ ನಿಧನದಿಂದ ದಾವಣಗೆರೆ ದಕ್ಷಿಣ ಕ್ಷೇತ್ರ ಖಾಲಿಯಾಗಿತ್ತು.
ಬೂಕರ್ ಪ್ರಶಸ್ತಿ ಪುರಸ್ಕೃತೆ ಸಾಹಿತಿ ಬಾನು ಮುಷ್ತಾಕ್ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಚಪ್ಪಲಿ ಧರಿಸಿ ಪುಷ್ಪ ನಮನ ಮಾಡಿದ್ದು ವಿವಾದಕ್ಕೆ ಕಾರಣವಾಗಿದೆ. ಮಂಡ್ಯದ ಅಂಬೇಡ್ಕರ್ ಭವನದಲ್ಲಿ, ರಾಜ್ಯ ದಲಿತ ಸಂಘರ್ಷ ಸಮಿತಿ ಆಯೋಜಿದ್ದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿವಿಗಾಗಿ ಜನಜಾಗೃತಿ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಬಾನು ಮುಷ್ತಾಕ್, ಚಪ್ಪಲಿ ಧರಿಸಿ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಇದನ್ನು ಗಮನಿಸಿದ ಸಂಘಟಕರು, ಚಪ್ಪಲಿಯನ್ನು ತೆಗೆಯುವಂತೆ ಹೇಳಿದರು. ಅಲ್ಲದೆ ಚಪ್ಪಲಿ ಹೊಲಿಯುವುದು ನಮ್ಮ ವೃತ್ತಿ. ಅದು ನಮ್ಮ ಮನೆ ದೇವರು. ನಮ್ಮ ಅಸ್ಮಿತೆಯ ಸಂಕೇತ, ನಾವು ಚಪ್ಪಲಿ ಹೊಲಿಯುವವರು. ಹೀಗಾಗಿ ನಾನು ಚಪ್ಪಲಿ ತೆಗೆಯುವುದಿಲ್ಲ ಎಂದು ಹೇಳಿದ್ದರು ಎಂದು ಸಹ ಸುದ್ದಿಯಾಗಿತ್ತು. ಚಪ್ಪಲಿ ಮನೆ ದೇವರು ಎಂದು ನಾನು ಹೇಳಿಲ್ಲ, ಮಾಧ್ಯಮಗಳು ಕಪೋಲಕಲ್ಪಿತ ವರದಿ ಮಾಡಿವೆ. ನಾವು ಹಾಗೆ ಹೇಳಿದ್ದರೆ ಪುರಾವೆಗಳನ್ನು ನೀಡಲಿ ಎಂದು ಬಾನು ಮುಷ್ತಾಕ್ ಸವಾಲು ಹಾಕಿದ್ದಾರೆ.
ಬ್ಯಾಂಕಾಕ್‌ನಿಂದ ಆಗಮಿಸಿದ 39.37 ಲಕ್ಷ ರೂ. ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ಹೊಂದಿದ್ದ ಪ್ರಯಾಣಿಕನನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಬಂಧಿತನಿಂದ 1.125 ಕೆಜಿ ಹೈಡ್ರೋಪೋನಿಕ್ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಮಾರ್ಚ್ 14 ರಂದು ಭಟನೆ ನಡೆದಿದ್ದು, ವ್ಯಕ್ತಿಯನ್ನು ಎನ್‌ಡಿಪಿಎಸ್ ಕಾಯ್ದೆಯಡಿಯಲ್ಲಿ ಬಂಧಿಸಲಾಗಿದೆ. ಗಾಂಜಾವನ್ನು ಚೆಕ್-ಇನ್ ಮಾಡಿದ ಬ್ಯಾಗೇಜ್‌ನಲ್ಲಿ ಫೋಟೋ ಫ್ರೇಮ್‌ನಲ್ಲಿ ಮರೆಮಾಡಿ ಇರಿಸಲಾಗಿತ್ತು ಎಂದು ಬೆಂಗಳೂರು ಕಸ್ಟಮ್ಸ್ ತಿಳಿಸಿದೆ.
Advertisement