

ಮಂಡ್ಯ: ಬಾಲಗರ್ಭಿಣಿಯರ ಸ್ಕ್ಯಾನಿಂಗ್ ಪ್ರಕರಣದಲ್ಲಿ ವೈದ್ಯರನ್ನು ಬಂಧಿಸಿರುವುದು ಸರಿಯಲ್ಲ ಎಂದು ಹೇಳುವ ಮೂಲಕ ಕೆ.ಆರ್. ಪೇಟೆ ಜೆಡಿಎಸ್ ಶಾಸಕ ಎಚ್.ಟಿ. ಮಂಜು ವಿವಾದ ಸೃಷ್ಟಿಸಿದ್ದಾರೆ.
ಕಳೆದ ಒಂದು ವಾರದ ಹಿಂದೆ ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆಯಲ್ಲಿ ಬಾಲ ಗರ್ಭಿಣಿಯರನ್ನು ಕಾನೂನು ಬಾಹಿರವಾಗಿ ಸ್ಕ್ಯಾನಿಂಗ್ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಮೂವರು ವೈದ್ಯರನ್ನ ಬಂಧಿಸಿದ್ದಾರೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಶಾಸಕ ಹೆಚ್.ಡಿ ಮಂಜು ವೈದ್ಯರ ಬೆಂಬಲಕ್ಕೆ ನಿಂತಿದ್ದಾರೆ.
ತುರ್ತು ಸೇವೆ ನೀಡುವುದು ವೈದ್ಯರ ಕರ್ತವ್ಯ. ಹೀಗಾಗಿ ಕೇಳಿಕೊಂಡು ಬಂದವರಿಗೆ ಸ್ಕ್ಯಾನಿಂಗ್ ಮಾಡಿದ್ದಾರೆ. ಅದರ ಮಾಹಿತಿಯನ್ನು ನೀಡುವಲ್ಲಿ ಸಣ್ಣ ನಿರ್ಲಕ್ಷ್ಯ ತೋರಿದ್ದಾರೆ. ಅಷ್ಟಕ್ಕೇ ವೈದ್ಯರನ್ನು ಬಂಧಿಸುವುದು ಎಷ್ಟು ಸರಿಪ್ರಶ್ನಿಸಿದರು.
ವೈದ್ಯರು ಯಾವುದೇ ತಪ್ಪು ಮಾಡಿಲ್ಲ, ಅಲ್ಲಿ ನಿರ್ಲಕ್ಷ್ಯ ಆಗಿದೆ. ಅಷ್ಟಕ್ಕೆ ಅವರನ್ನ ಬಂಧಿಸಿ ಜೈಲಿಗೆ ಹಾಕೋದು ಸರಿಯಲ್ಲ. ಇದರಿಂದ ವೈದ್ಯರನ್ನು ಮಾನಸಿಕವಾಗಿ ಕುಗ್ಗಿಸಿದಂತೆ ಆಗುತ್ತದೆ. ತಪ್ಪು ಯಾರು ಮಾಡಿದ್ದಾರೋ ಅವರ ವಿರುದ್ಧ ಕ್ರಮವಾಗಬೇಕು, ಅದನ್ನು ವೈದ್ಯರನ್ನು ಬಂಧಿಸುವುದು ಸರಿಯಲ್ಲ. ಈ ರೀತಿ ಪ್ರಕರಣಗಳು ಆದರೆ ವೈದ್ಯರು ಸೇವೆ ಸಲ್ಲಿಸಲು ಹಿಂದೇಟು ಹಾಕುತ್ತಾರೆ ಎಂದು ಹೆಚ್.ಟಿ ಮಂಜು ಬಂಧಿತ ವೈದ್ಯರ ಪರ ಬ್ಯಾಟಿಂಗ್ ಮಾಡಿದ್ದಾರೆ.
ಕೆ.ಆರ್. ಪೇಟೆ ತಾಲ್ಲೂಕು ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಸೌಲಭ್ಯವಿಲ್ಲವಾದ್ದರಿಂದ ವೈದ್ಯರು ಖಾಸಗಿ ಸ್ಕ್ಯಾನಿಂಗ್ ಸೆಂಟರ್‌ಗೆ ಶಿಫಾರಸು ಮಾಡಿದ್ದಾರೆ. ಬಂದ ಗರ್ಭಿಣಿಯರನ್ನು 70 ಕಿ.ಮೀ. ದೂರದ ಜಿಲ್ಲಾಸ್ಪತ್ರೆಗೆ ಕಳಿಸಲು ಸಾಧ್ಯವೇ? ವೈದ್ಯರು ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಕೆಲವರು ಸ್ವಯಂ ನಿವೃತ್ತಿಗೆ ಮುಂದಾಗಿದ್ದಾರೆ. ತಾಲ್ಲೂಕಿನ ಗೌರವಕ್ಕೆ ಧಕ್ಕೆಯಾಗಿದೆ. ಹೀಗಾದರೆ ಸಾರ್ವಜನಿಕರಿಗೆ ಆರೋಗ್ಯ ಸೇವೆ ಒದಗಿಸುವುದು ಹೇಗೆ ಎಂದು ಕೇಳಿದರು.
Advertisement