Sri Ravishankara Guruji
ಶ್ರೀ ರವಿಶಂಕರ ಗುರೂಜಿ

'ಸಂವಹನದ ಕೊರತೆಯೇ ಇಂದು ಮಾನವಕುಲದ ಮುಂದಿರುವ ಅತಿದೊಡ್ಡ ಸವಾಲು': ಶ್ರೀ ರವಿಶಂಕರ ಗುರೂಜಿ

ಜನರಲ್ಲಿ ಹೆಚ್ಚುತ್ತಿರುವ ಸ್ವಾರ್ಥಭಾವ ಮತ್ತು ವ್ಯಕ್ತಿಗತ ಹಾಗೂ ಪರಸ್ಪರ ಸಂವಹನದ ಕೊರತೆಯೇ ಅಸಮಾಧಾನದ ಪ್ರಮುಖ ಕಾರಣಗಳಾಗಿವೆ ಎಂದು ಶ್ರೀ ರವಿಶಂಕರ ಗುರೂಜಿ ಅಭಿಪ್ರಾಯಪಟ್ಟಿದ್ದಾರೆ.
Published on

ಉಕ್ರೇನ್-ರಷ್ಯಾ ಯುದ್ಧ ಹಾಗೂ ಪಶ್ಚಿಮ ಏಷ್ಯಾದ ಸಂಘರ್ಷಗಳು ಜಗತ್ತನ್ನೇ ತಲ್ಲಣಗೊಳಿಸಿದ್ದು, ಅನೇಕ ದೇಶಗಳ ಜನರ ಜೀವನದ ಮೇಲೆ ಪರಿಣಾಮ ಬೀರಿವೆ. ಅನಿಶ್ಚಿತತೆ, ಜೀವಹಾನಿ, ಉದ್ಯೋಗ ನಷ್ಟ, ದರ ಏರಿಕೆ ಮತ್ತು ಭವಿಷ್ಯದ ಭಯ ಇವುಗಳಿಂದ ಜನರಲ್ಲಿ ಒತ್ತಡ, ಅಶಾಂತಿ, ಅಸಹನೆ ಹಾಗೂ ಸಂಬಂಧಗಳ ಕುಸಿತ ಸೇರಿದಂತೆ ಹಲವು ಜೀವನಶೈಲಿ ಸಮಸ್ಯೆಗಳು ಹೆಚ್ಚುತ್ತಿವೆ.

ಈ ನಕಾರಾತ್ಮಕ ಭಾವನೆಗಳು ಹಿಂಸಾಚಾರ, ರೋಡ್ ರೇಜ್, ಮಾನಸಿಕ ಅಶಾಂತಿ, ದೌರ್ಜನ್ಯ ಮತ್ತು ಆತ್ಮಹಾನಿ ರೂಪದಲ್ಲಿ ಹೊರಹೊಮ್ಮುತ್ತಿವೆ. ಜನರಲ್ಲಿ ಹೆಚ್ಚುತ್ತಿರುವ ಸ್ವಾರ್ಥಭಾವ ಮತ್ತು ವ್ಯಕ್ತಿಗತ ಹಾಗೂ ಪರಸ್ಪರ ಸಂವಹನದ ಕೊರತೆಯೇ ಈ ಅಸಮಾಧಾನದ ಪ್ರಮುಖ ಕಾರಣಗಳಾಗಿವೆ ಎಂದು ಶ್ರೀ ರವಿಶಂಕರ ಗುರೂಜಿ ಅಭಿಪ್ರಾಯಪಟ್ಟಿದ್ದಾರೆ.

ದಿ ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ಸಂಸ್ಥಾಪಕರಾದ ಅವರು ತಮ್ಮ 70ನೇ ಜನ್ಮದಿನದ ಅಂಗವಾಗಿ ನೀಡಿದ ವಿಶೇಷ ಸಂದರ್ಶನದಲ್ಲಿ, “ಇಂದು ಜನರಲ್ಲಿ ತಪಸ್ಸು ಅಥವಾ ಆತ್ಮಶಿಸ್ತು ಶೂನ್ಯವಾಗಿದೆ. ಜನರು ಅತಿಯಾಗಿ ಆವೇಶಪೂರ್ಣ ಮತ್ತು ಸ್ವಾರ್ಥಿಗಳಾಗಿರುವುದರಿಂದ ಇತರರ ದೃಷ್ಟಿಕೋನವನ್ನು ಪರಿಗಣಿಸುವುದಿಲ್ಲ. ಇದರಿಂದಲೇ ಸಂಘರ್ಷಗಳು ಹುಟ್ಟುತ್ತವೆ. ಪೂರ್ವಗ್ರಹವಿದ್ದಾಗ ನಾವು ಇತರರ ಮಾತನ್ನು ಕೇಳುವುದೇ ಇಲ್ಲ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ (The New Indian Express) ಪತ್ರಿಕೆ ಪ್ರತಿನಿಧಿಗೆ ಹೇಳಿದ್ದಾರೆ.

Q

ಇಂದಿನ ಮಾನವಕೋಟಿಯ ದೊಡ್ಡ ಸವಾಲು ಏನು?

A

ಸಂವಹನದ ಕೊರತೆ ಮತ್ತು ಪರಸ್ಪರ ಕಾಳಜಿ, ಹಂಚಿಕೊಳ್ಳುವ ಮನೋಭಾವದ ಅಭಾವವೇ ದೊಡ್ಡ ಸವಾಲು

Q

ಒತ್ತಡ ಮತ್ತು ಆತಂಕದ ನಡುವಿನ ಸಂದೇಶ ಏನು?

A

ಇಂದಿನ ಯುವಜನತೆ ಆಂತರಿಕ ಸಂಘರ್ಷಗಳನ್ನು ಎದುರಿಸುತ್ತಿದೆ. ಸಹನೆಯ ಮಟ್ಟ ಕುಸಿದಿರುವುದು ಇದಕ್ಕೆ ಕಾರಣ. ಮೆದುಳಿನ “Anterior Cingulate Cortex (ACC)” ಭಾಗ ದುರ್ಬಲವಾದಾಗ ಸಹನೆ ಕಡಿಮೆಯಾಗುತ್ತದೆ ಎಂದು ವಿಜ್ಞಾನ ಹೇಳುತ್ತದೆ.

“ತಪಸ್ವಿಗಳು, ಇಷ್ಟವಿಲ್ಲದಿದ್ದರೂ ಕೆಲವು ವಿಷಯಗಳನ್ನು ಸಹಿಸಿಕೊಳ್ಳಬೇಕು ಎಂದು ಹೇಳುತ್ತಾರೆ. ಇದರಿಂದ ACC ಬಲವಾಗುತ್ತದೆ. ಇಂದು ತಪಸ್ಸು ಸಂಪೂರ್ಣವಾಗಿ ಕಡಿಮೆಯಾಗಿದೆ. ಅದಕ್ಕಾಗಿಯೇ ಜನರು ಆವೇಶಪೂರ್ಣರಾಗಿದ್ದಾರೆ. ಇಂತಹವರು ಸ್ವಾರ್ಥಿಗಳಾಗಿ, ಇತರರ ಅಭಿಪ್ರಾಯವನ್ನು ಪರಿಗಣಿಸುವುದಿಲ್ಲ. ಅವರು ಖಿನ್ನತೆಗೆ ಒಳಗಾಗಬಹುದು ಅಥವಾ ಆಕ್ರಮಣಕಾರಿ ಸ್ವಭಾವ ಬೆಳೆಸಿಕೊಳ್ಳಬಹುದು. ಇವೆರಡೂ ಸಮಾಜಕ್ಕೆ ಒಳ್ಳೆಯದಲ್ಲ. ಪ್ರಾಣಾಯಾಮ, ಕ್ರಿಯಾ ಮತ್ತು ಧ್ಯಾನವೇ ಆಂತರಿಕ ಶಕ್ತಿಯನ್ನು ನೀಡುತ್ತದೆ.

Q

ಯುವಜನತೆಗೆ ಆಧ್ಯಾತ್ಮ ಹೇಗೆ ತಲುಪಿಸಬಹುದು?

A

ಅರ್ಜೆಂಟೀನಾದಲ್ಲಿ ಭಜನಾ ಕ್ಲಬ್ಬಿಂಗ್ ಪ್ರಾರಂಭಿಸಿದಾಗ ಭಜನೆಗಳನ್ನು ಬಾರ್‌ಗಳಿಗೆ ತೆಗೆದುಕೊಂಡು ಹೋಗಿ, ಮದ್ಯಪಾನವನ್ನು ಕೆಲ ಗಂಟೆಗಳ ಕಾಲ ನಿಲ್ಲಿಸಿ, ಸಾಫ್ಟ್ ಡ್ರಿಂಕ್ಸ್ ಮಾತ್ರ ನೀಡುವಂತೆ ಕೇಳಿದ್ದೆವು. ಜನರು ಸಂಗೀತಮಯ ಭಜನೆಗಳಲ್ಲಿ ಭಾಗವಹಿಸಿದರು. ಇದು ಯಶಸ್ವಿಯಾಯಿತು.

ಮದ್ಯ ಮತ್ತು ಮತ್ತಿನ ಪದಾರ್ಥಗಳ ಬದಲಿಗೆ ಆಧ್ಯಾತ್ಮಿಕ ಆನಂದದ ಮೂಲಕ ಯುವಕರನ್ನು ವ್ಯಸನದಿಂದ ಹೊರತೆಗೆದುಕೊಳ್ಳಬಹುದು

Q

ಗಮನ ಕೇಂದ್ರೀಕರಣ ಕಡಿಮೆಯಾಗಲು ಕಾರಣವೇನು?

A

ಬಹಳಷ್ಟು ಪ್ರಭಾವಗಳು ಮತ್ತು ಮಾಹಿತಿಗಳ ಅತಿಯಾದ ದಾಳಿ ಮನಸ್ಸನ್ನು ಗೊಂದಲಗೊಳಿಸುತ್ತದೆ. ಇದರಿಂದ ಸ್ಪಷ್ಟತೆ, ದೃಷ್ಟಿಕೋನ ಮತ್ತು ಏಕಾಗ್ರತೆ ಕಡಿಮೆಯಾಗುತ್ತದೆ. ಧ್ಯಾನವು ಅವನ್ನು ಮರುಸ್ಥಾಪಿಸುತ್ತದೆ

Q

ಧ್ಯಾನ ಇಂದಿನ ಕಾಲದಲ್ಲಿ ಅಗತ್ಯವೇ?

A

ಧ್ಯಾನ ಈಗ ಐಷಾರಾಮಿ ವಿಷಯವಲ್ಲ, ಅವಶ್ಯಕತೆಯಾಗಿದೆ. ದಿನಕ್ಕೆ 10 ನಿಮಿಷ ಧ್ಯಾನ ಮಾಡಿದರೂ ಸಾಕು. ಇದು ಮಾನಸಿಕ ಸ್ವಚ್ಛತೆಯಂತಿದೆ; ಹಲ್ಲು ತೊಳೆಯುವಂತೆ

Q

ಬಾಲ್ಯದಿಂದ ಆಧ್ಯಾತ್ಮಿಕ ಬದುಕಿನತ್ತ ಹೇಗೆ ಬಂದಿರಿ?

A

ನನಗೆ ಆಧ್ಯಾತ್ಮ ಮೀನಿಗೆ ನೀರಿನಂತಿತ್ತು. ಬಾಲ್ಯದಲ್ಲೇ ಅದರಲ್ಲಿ ತಲ್ಲೀನನಾಗಿದ್ದೆ. ನನ್ನ ಸ್ನೇಹಿತರು ಕ್ರಿಕೆಟ್ ಬಗ್ಗೆ ಮಾತನಾಡುತ್ತಿದ್ದರೆ, ನನಗೆ ಅದರಲ್ಲಿ ಆಸಕ್ತಿ ಇರಲಿಲ್ಲ. ಶಾಲೆಯ ನಂತರ ನನ್ನ ಗುರು ಪಂಡಿತ್ ಸುಧಾಕರ್ ಚತುರ್ವೇದಿ ಹಾಗೂ ನಂತರ ಮಹರ್ಷಿ ಮಹೇಶ್ ಯೋಗಿಯವರೊಂದಿಗೆ ಸಮಯ ಕಳೆಯುತ್ತಿದ್ದೆ

Q

ಆರ್ಟ್ ಆಫ್ ಲಿವಿಂಗ್ ಸ್ಥಾಪನೆ ಹೇಗೆ?

A

24ನೇ ವಯಸ್ಸಿನಲ್ಲಿ ಆರ್ಟ್ ಆಫ್ ಲಿವಿಂಗ್ ಆರಂಭಿಸಿದೆ. ಆರಂಭದಲ್ಲಿ ಭಾರತದಲ್ಲೂ ಪಶ್ಚಿಮ ದೇಶಗಳಲ್ಲೂ ಸಾಕಷ್ಟು ವಿರೋಧ ಎದುರಿಸಬೇಕಾಯಿತು. ಯೋಗ ಮತ್ತು ಧ್ಯಾನವನ್ನು ಕುಟುಂಬ ಜೀವನದೊಂದಿಗೆ ಜನರು ಸಂಪರ್ಕಿಸುತ್ತಿರಲಿಲ್ಲ. ಅದಕ್ಕಾಗಿಯೇ ‘ಆರ್ಟ್ ಆಫ್ ಲಿವಿಂಗ್’ ಎಂಬ ಹೆಸರನ್ನು ಆಯ್ಕೆ ಮಾಡಿದೆ

Q

ಅಯೋಧ್ಯೆ ಮತ್ತು ಕಾಶ್ಮೀರ ವಿಷಯಗಳಲ್ಲಿ ನಿಮ್ಮ ಅಭಿಪ್ರಾಯ ಮತ್ತು ಪಾತ್ರ?

A

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಮನವಿಯ ಮೇರೆಗೆ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಸದಸ್ಯರೊಂದಿಗೆ ಮಾತುಕತೆ ನಡೆಸಿದ್ದೆ. ಕಾಶ್ಮೀರದಲ್ಲಿ ಉಗ್ರವಾದ ವಿರೋಧಿ ಕಾರ್ಯಚಟುವಟಿಕೆಗಳ ಭಾಗವಾಗಿ “ಡೀ-ರ್ಯಾಡಿಕಲೈಸೇಶನ್” ಕಾರ್ಯಕ್ರಮ ನಡೆಸಿದೆವು. ಪೂರ್ವಗ್ರಹವೇ ದೊಡ್ಡ ಸಮಸ್ಯೆ. ಜನರು ಇತರರ ದೃಷ್ಟಿಕೋನ ಕೇಳಲು ಸಿದ್ಧರಾಗುವುದಿಲ್ಲ

Q

ಸುದರ್ಶನ ಕ್ರಿಯೆಯ ಪ್ರಯೋಜನಗಳು

A

ಸುದರ್ಶನ ಕ್ರಿಯೆ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಸಹಾಯಕವಾಗಿದೆ. ಜಗತ್ತಿನ ವಿವಿಧ ಸಂಸ್ಥೆಗಳು ಸುಮಾರು 700 ಸಂಶೋಧನಾ ಲೇಖನಗಳನ್ನು ಪ್ರಕಟಿಸಿವೆ. ಇದು ಒತ್ತಡ ಕಡಿಮೆ ಮಾಡುವುದು, ರೋಗನಿರೋಧಕ ಶಕ್ತಿ ಹೆಚ್ಚಿಸುವುದು, ಮಾನಸಿಕ ಸ್ಪಷ್ಟತೆ ಹೆಚ್ಚಿಸುವುದು ಸೇರಿದಂತೆ ಹಲವು ಪ್ರಯೋಜನಗಳನ್ನು ನೀಡುತ್ತದೆ

Q

ಜೈಲು ಸುಧಾರಣೆ ಕುರಿತ ಅಭಿಪ್ರಾಯ

A

ಕೆಲ ದೇಶಗಳಲ್ಲಿ ಧ್ಯಾನ ಮತ್ತು ಸುದರ್ಶನ ಕ್ರಿಯೆ ಅಭ್ಯಾಸ ಮಾಡುವ ಕೈದಿಗಳ ಶಿಕ್ಷಾವಧಿ ಕಡಿಮೆ ಮಾಡುವ ವ್ಯವಸ್ಥೆ ಇದೆ. ಭಾರತದಲ್ಲೂ ಉತ್ತಮ ನಡವಳಿಕೆಗೆ ಪ್ರೋತ್ಸಾಹ ನೀಡುವ ವ್ಯವಸ್ಥೆಗಳಿವೆ

Q

ಒತ್ತಡ ನಿವಾರಣೆ ಹೇಗೆ?

A

ಮೊದಲು ನಾನು ಒತ್ತಡಕ್ಕೆ ಒಳಗಾಗುತ್ತೇನೆ ಎಂಬುದೇ ಪ್ರಶ್ನೆ. ನಾನು ಯಾವುದನ್ನೂ ಮನಸ್ಸಿನೊಳಗೆ ಬಿಡುವುದಿಲ್ಲ. ಜ್ಞಾನ ಮತ್ತು ಜಾಗೃತಿ ಒತ್ತಡದಿಂದ ದೂರ ಇಡುತ್ತವೆ

Q

ಜೀವನದ ಬಗ್ಗೆ ತಮ್ಮ ದೃಷ್ಟಿಕೋನ

A

ಜೀವನವೆಂದರೆ ಒಂದು ಕನಸು. ಭೂತಕಾಲವೂ ಕನಸು, ಭವಿಷ್ಯವೂ ಮತ್ತೊಂದು ಕನಸು. ಇದರಿಂದ ಎಚ್ಚರಗೊಳ್ಳುವುದೇ ಜೀವನದ ಕರೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com