ಮನೆಗೆ ಚಾಕು ಪಾರ್ಸೆಲ್ ಪ್ರಕರಣ: FIR ದಾಖಲು, ಇಂತಹ ಬೆದರಿಕೆಗಳಿಗೆ ಬಗ್ಗುವವನೂ ಅಲ್ಲ, ಹೆದರುವವನೂ ಅಲ್ಲ ಎಂದ "ಛಲವಾದಿ"

ನನ್ನ ವಿಳಾಸಕ್ಕೆ ಚಾಕು, ಚೂರಿಗಳನ್ನು ಕಳುಹಿಸಿ ಬೆದರಿಸುವ ಮೂಲಕ ನನ್ನ ಧ್ವನಿಯನ್ನು ಅಡಗಿಸಬಹುದು ಎಂದು ಕಾಂಗ್ರೆಸ್ ಭಾವಿಸಿದ್ದರೆ ಅದು ಅವರ ಹಗಲುಗನಸು ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
Chalavadi Narayanaswamy
ಛಲವಾದಿ ನಾರಾಯಣಸ್ವಾಮಿ
Updated on: 

ಬೆಂಗಳೂರು: ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮನೆಗೆ ಚಾಕು ಪಾರ್ಸೆಲ್ ಪ್ರಕರಣ ಸಂಬಂಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಛಲವಾದಿ ನಾರಾಯಣಸ್ವಾಮಿ ದೂರಿನ ಮೇರೆಗೆ ಎಫ್‌ಐಆರ್ (FIR) ದಾಖಲಾಗಿದೆ.

ಅಪರಿಚಿತರ ವಿರುದ್ಧ ದೂರು ದಾಖಲಿಸಿದ್ದು, ಚಾಕುಗಳನ್ನ ಕಳುಹಿಸಿದವರಿಗಾಗಿ ಹುಡುಕಾಟ ನಡೆಯುತ್ತಿದೆ. ಛಲವಾದಿ ನಾರಾಯಣಸ್ವಾಮಿ ಕೂಡ ಕಳೆದೊಂದು ವಾರದಿಂದ ಕಾಂಗ್ರೆಸ್‌ನ ಕೆಲವು ಹುಡುಗರು ಪದೇಪದೇ ಬಂದು ಗೂಂಡಾ ಪ್ರದರ್ಶನ ಮಾಡುತ್ತಿದ್ದಾರೆ. ಅವರ ಬೆದರಿಕೆಗಳಿಗೆ ನಾನು ಹೆದರಲ್ಲ. ಅಂಬೇಡ್ಕರ್ ಸಂವಿಧಾನದ ಅಡಿಯಲ್ಲಿ ನಾನು ಶಕ್ತಿ, ಯುಕ್ತಿಯಿಂದ ಹೋರಾಟ ಮಾಡುತ್ತೇನೆ ಎಂದಿದ್ದಾರೆ.

ಈ ಮಧ್ಯೆ ಛಲವಾದಿ ನಾರಾಯಣಸ್ವಾಮಿ ನಿವಾಸಕ್ಕೆ ಭೇಟಿ ನೀಡಿದ ವಿಪಕ್ಷ ನಾಯಕ ಆರ್.ಅಶೋಕ್, ಸೆವೆನ್ ಮಿನಿಸ್ಟರ್ ಕ್ವಾಟ್ರಸ್‌ನಲ್ಲಿ ಛಲವಾದಿ ಅವರ ನಿವಾಸ ಇದೆ. ಪಕ್ಕದಲ್ಲೇ ಜಡ್ಜ್‌ಗಳ ನಿವಾಸ ಕೂಡ ಇದೆ. ಆದರೂ ಕಾಂಗ್ರೆಸ್‌ನವರು ಇಲ್ಲಿಗೆ ಬರುತ್ತಾರೆ ಅಂದ್ರೆ ಏನು ಹೇಳೋದು? ಇದೆನ್ನೆಲ್ಲಾ ನೋಡುತ್ತಿದ್ದರೆ ಕಾಂಗ್ರೆಸ್‌ನ ಅವನತಿ ಪ್ರಾರಂಭ ಆಗಿದೆ ಎಂದು ಕಿಡಿಕಾರಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬರೆದುಕೊಂಡಿರುವ ಛಲವಾದಿ ನಾರಾಯಣಸ್ವಾಮಿ, ನನ್ನ ವಿಳಾಸಕ್ಕೆ ಚಾಕು, ಚೂರಿಗಳನ್ನು ಕಳುಹಿಸಿ ಬೆದರಿಸುವ ಮೂಲಕ ನನ್ನ ಧ್ವನಿಯನ್ನು ಅಡಗಿಸಬಹುದು ಎಂದು ಕಾಂಗ್ರೆಸ್ ಭಾವಿಸಿದ್ದರೆ ಅದು ಅವರ ಹಗಲುಗನಸು! ಈ "ಛಲವಾದಿ" ಇಂತಹ ಬೆದರಿಕೆಗಳಿಗೆ ಬಗ್ಗುವವನೂ ಅಲ್ಲ, ಹೆದರುವವನೂ ಅಲ್ಲ. ನನ್ನ ಮೈಯಲ್ಲಿ ಹರಿಯುತ್ತಿರುವುದು ಬಾಬಾಸಾಹೇಬರ ವಿಚಾರಧಾರೆ ಮತ್ತು ಸ್ವಾಭಿಮಾನದ ರಕ್ತ. ನಾನು ಹೋರಾಟದ ಹಾದಿಯಲ್ಲಿ ಬೆಳೆದು ಬಂದವನು; ಬೆದರಿಕೆಗಳಿಗೆ ಮಣಿಯುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

ಈ ಹೇಯ ಕೃತ್ಯವನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ. ಮುಂಬರುವ ವಿಧಾನಮಂಡಲದ ಅಧಿವೇಶನದಲ್ಲಿ ಈ ಪ್ರಕರಣವನ್ನು ಪ್ರಸ್ತಾಪಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಹೋರಾಟ ನಡೆಸುತ್ತೇನೆ. ಕಾಂಗ್ರೆಸ್‌ನ ಇಂತಹ ಅರಾಜಕತೆಯ ರಾಜಕಾರಣಕ್ಕೆ ಪ್ರಜಾಪ್ರಭುತ್ವದ ಹಾದಿಯಲ್ಲಿ ನಾಡಿನ ಜನರೇ ತಕ್ಕ ಉತ್ತರ ನೀಡಲಿದ್ದಾರೆ ಎಂದಿದ್ದಾರೆ.

Chalavadi Narayanaswamy
'ತುಂಡು ತುಂಡಾಗಿ ಕತ್ತರಿಸುತ್ತಾರೆ' ಹೇಳಿಕೆ: ಛಲವಾದಿ ನಾರಾಯಣಸ್ವಾಮಿ ಮನೆಗೆ ಚಾಕು, ಚೂರಿ ಆರ್ಡರ್; ಡೆಲಿವರಿ ಬಾಯ್ಸ್ ಬಂದಾಗ ಹೈಡ್ರಾಮಾ!

ಕಾಂಗ್ರೆಸ್‌ನ ದ್ವೇಷದ ರಾಜಕಾರಣಕ್ಕೆ ಬೆದರುವ ಜಾಯಮಾನ ನನ್ನದಲ್ಲ. ನನ್ನ ನಿವಾಸದ ಎದುರು ಪ್ರತಿಭಟನೆ ನಡೆಸುವ ನೆಪದಲ್ಲಿ, ಬ್ಲಿಂಕಿಟ್ (Blinkit) ಆ್ಯಪ್ ಮೂಲಕ 'ಕ್ಯಾಶ್ ಆನ್ ಡೆಲಿವರಿ' ರೂಪದಲ್ಲಿ ೨೦ಕ್ಕೂ ಹೆಚ್ಚು ಚಾಕು ಹಾಗೂ ಚೂರಿಗಳನ್ನು ಪಾರ್ಸಲ್ ಮಾಡಿ ಕಳುಹಿಸುವ ಮೂಲಕ ಕಾಂಗ್ರೆಸ್ ಮತ್ತು ಎನ್‌ಎಸ್‌ಯುಐ (NSUI) ಕಾರ್ಯಕರ್ತರು ಕೀಳುಮಟ್ಟದ ದ್ವೇಷದ ರಾಜಕಾರಣ ಪ್ರದರ್ಶಿಸಿದ್ದಾರೆ. ಇಂತಹ ಹೇಡಿತನದ ಬೆದರಿಕೆಗಳಿಗೆ ನಾನು ಕಿಂಚಿತ್ತೂ ಹೆದರುವುದಿಲ್ಲ; ಬಾಬಾಸಾಹೇಬ್ ಅಂಬೇಡ್ಕರ್ ಅವರು ನಮಗೆ ಧೈರ್ಯದಿಂದ ಬದುಕಲು ಮತ್ತು ಸತ್ಯವನ್ನು ಮಾತನಾಡಲು ಕಲಿಸಿಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.

ಇನ್ನು, ಈ ಹಿಂದೆ ನಾನು ನೀಡಿದ್ದ 'ಕಾಂಗ್ರೆಸ್ ತುಂಡಾಗುತ್ತೆ' ಎಂಬ ಹೇಳಿಕೆಯು ಸಂಪೂರ್ಣವಾಗಿ ರಾಜಕೀಯ ವಿಶ್ಲೇಷಣೆಯಾಗಿದ್ದು, ಇತಿಹಾಸದಲ್ಲಿ ದೇವರಾಜ ಅರಸು, ಬಂಗಾರಪ್ಪ, ಶರದ್ ಪವಾರ್ ಹಾಗೂ ಮಮತಾ ಬ್ಯಾನರ್ಜಿ ಅವರ ಕಾಲದಲ್ಲಿ ಕಾಂಗ್ರೆಸ್ ಇಬ್ಭಾಗವಾದ ರೀತಿಯಲ್ಲೇ, ಸಿದ್ದರಾಮಯ್ಯನವರ ವಿಚಾರದಲ್ಲೂ ಆ ಪಕ್ಷ ಒಡೆಯಲಿದೆ ಎಂಬ ವಾಸ್ತವವನ್ನು ಮಾತ್ರ ನಾನು ಮುಕ್ತವಾಗಿ ಹೇಳಿದ್ದೇನೆ ಎಂದು ಛಲವಾದಿ ನಾರಾಯಣಸ್ವಾಮಿ ಸಮರ್ಥಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X