ಪೆಟ್ರೋಲ್‌ನಲ್ಲಿ ನಿಗದಿತ ಪ್ರಮಾಣಕ್ಕಿಂತ 'ಅಧಿಕ' ಎಥೆನಾಲ್ ಮಿಶ್ರಣ: ನಮ್ಮ ವರದಿಗೆ ನಾವು ಬದ್ಧ- ರಿಜ್ವಾನ್ ಅರ್ಷದ್!

ರಾಜ್ಯಾದ್ಯಂತ ಪೆಟ್ರೋಲ್ ಪಂಪ್‌ಗಳಿಂದ ಸಂಗ್ರಹಿಸಲಾದ 63 ಮಾದರಿಗಳಲ್ಲಿ ನಿಜವಾದ ಎಥೆನಾಲ್ ಅಂಶ ಎಷ್ಟಿದೆ ಎಂಬುದನ್ನು ವಿವರಿಸಲು OMCಗಳಿಗೆ ರಿಜ್ವಾನ್ ಅರ್ಷದ್ ಸವಾಲು ಹಾಕಿದರು.
Min Rizwan Arshad
ರಿಜ್ವಾನ್ ಅರ್ಷದ್
Updated on: 

ಬೆಂಗಳೂರು: ತೈಲ ಮಾರುಕಟ್ಟೆ ಕಂಪನಿಗಳು (OMCಗಳು) ಪೆಟ್ರೋಲ್‌ನಲ್ಲಿ ನಿಗದಿತ ಶೇ.20ಕ್ಕಿಂತ ಹೆಚ್ಚಿನ ಎಥೆನಾಲ್ ಅನ್ನು ಮಿಶ್ರಣ ಮಾಡುತ್ತಿವೆ ಎಂಬ ತನ್ನ ಫಲಿತಾಂಶ ವರದಿಗಳಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಸಚಿವ ರಿಜ್ವಾನ್ ಅರ್ಷದ್ ಸೋಮವಾರ ಹೇಳಿದ್ದಾರೆ. ಕೆಲವು ಮಾದರಿಗಳು ಶೇಕಡಾ 31.2 ರಷ್ಟು ಮಟ್ಟವನ್ನು ತೋರಿಸುತ್ತಿವೆ ಮತ್ತು ಈ ವಿಷಯದ ಕುರಿತು ಪ್ರಶ್ನೆಗಳಿಂದ ತಪ್ಪಿಸಿಕೊಳ್ಳುತ್ತಿವೆ ಎಂದು ಆರೋಪಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮಾಪನಶಾಸ್ತ್ರ ಸಚಿವರು, ರಾಜ್ಯ ಸರ್ಕಾರವು ನಿಗದಿತ ಮಾದರಿಗಳನ್ನು ಸಂಶೋಧನೆ ನಡೆಸಿದೆ. ರಾಜ್ಯಾದ್ಯಂತ ಪೆಟ್ರೋಲ್ ಪಂಪ್‌ಗಳಿಂದ ಸಂಗ್ರಹಿಸಲಾದ 63 ಮಾದರಿಗಳಲ್ಲಿ ನಿಜವಾದ ಎಥೆನಾಲ್ ಅಂಶ ಎಷ್ಟಿದೆ ಎಂಬುದನ್ನು ವಿವರಿಸಲು OMCಗಳಿಗೆ ಸವಾಲು ಹಾಕಿದರು. ಗ್ರಾಹಕರಿಗೆ ಅವರ ವಾಹನಗಳ ಹೊಂದಾಣಿಕೆಯನ್ನು ಅವಲಂಬಿಸಿ E10, E20, E30 ಮತ್ತು ಶುದ್ಧ ಪೆಟ್ರೋಲ್ ಖರೀದಿಸುವ ಆಯ್ಕೆಯನ್ನು ನೀಡಬೇಕೆಂದು ಅವರು ಒತ್ತಾಯಿಸಿದರು.

"ಕರ್ನಾಟಕ ಸರ್ಕಾರ ತನ್ನ ವರದಿ ಮತ್ತು ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್‌ನಲ್ಲಿ ಶೇಕಡಾ 20 ಕ್ಕಿಂತ ಹೆಚ್ಚು ಎಥೆನಾಲ್ ಅನ್ನು ಮಿಶ್ರಣ ಮಾಡುತ್ತಿವೆ ಎಂಬ ತನ್ನ ಹೇಳಿಕೆಗೆ ಬದ್ಧವಾಗಿದೆ ಎಂದು ದೇಶದ ಎಲ್ಲರಿಗೂ ನಾನು ಭರವಸೆ ನೀಡಲು ಬಯಸುತ್ತೇನೆ. ಇದು ವಾಹನ ಎಂಜಿನ್‌ಗಳಿಗೆ ಗಂಭೀರ ಹಾನಿಯನ್ನುಂಟುಮಾಡಬಹುದು ಮತ್ತು ಸಾಮಾನ್ಯ ಜನರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳಬಹುದು ಎಂದು ಅರ್ಷದ್ ವರದಿಗಾರರಿಗೆ ತಿಳಿಸಿದರು.

ಪ್ರತ್ಯೇಕ ಪೆಟ್ರೋಲ್ ಬಂಕ್ ಗಳಲ್ಲಿ ಅಕ್ರಮಗಳು ನಡೆದಿರಬಹುದು ಎಂಬ OMCಗಳ ವಾದವನ್ನು ತಿರಸ್ಕರಿಸಿದ ಅವರು, ಎಥೆನಾಲ್ ಮಿಶ್ರಣವು ಟರ್ಮಿನಲ್‌ಗಳಲ್ಲಿ ನಡೆಸಲಾಗುವ ನಿಯಂತ್ರಿತ ಮತ್ತು ಸ್ವಯಂಚಾಲಿತ ಪ್ರಕ್ರಿಯೆಯಾಗಿದೆ ಮತ್ತು ಪೆಟ್ರೋಲಿಯಂ ಡೀಲರ್‌ಗಳಿಂದಲ್ಲ ಎಂದು ಹೇಳಿದರು.

ರಾಜ್ಯದಲ್ಲಿ 63 ಕಡೆಗಳಲ್ಲಿ ಮಾದರಿಗಳನ್ನು ಸಂಗ್ರಹಿಸಿ, ಅದರಲ್ಲಿ ಒಂದನ್ನು ಆ ತೈಲ ಕಂಪನಿಗಳ ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು. ಮತ್ತೊಂದನ್ನು ಪೆಟ್ರೋಲ್‌ ಬಂಕ್‌ಗಳ ಮಾಲೀಕರಿಗೆ ನೀಡಲಾಗಿದ್ದು, ಮೂರನೇ ಮಾದರಿಯನ್ನು ಪರೀಕ್ಷೆಗಾಗಿ ಖಾಸಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ರಾಜ್ಯ ಸರ್ಕಾರ ಖಾಸಗಿ ಲ್ಯಾಬ್‌ನಿಂದ ಪಡೆದುಕೊಂಡ ವರದಿಯ ಪ್ರಕಾರ ಎಥೆನಾಲ್‌ನ ಮಿಶ್ರಣ ಶೇ. 21 ರಿಂದ 31ರವರೆಗೂ ಇದೆ. ಇದು ಕೇಂದ್ರ ಸರ್ಕಾರ ನಿರ್ಧರಿಸಿದ ಶೇ. 20ರ ಮಿತಿಯನ್ನು ದಾಟಿದೆ. ಆದರೆ ನಮ ವರದಿ ವೈಜ್ಞಾನಿಕವಲ್ಲ ಎಂಬ ಆಕ್ಷೇಪಣೆಗಳನ್ನು ತೈಲ ಕಂಪನಿಗಳು ಎತ್ತಿವೆ ಎಂದು ತಿಳಿಸಿದರು.

ರಾಜ್ಯ ಸರ್ಕಾರ ನಿಯಮಾವಳಿಗಳ ಅನುಸಾರ ಬಂಕ್‌ಗಳು ಮತ್ತು ತೈಲ ಕಂಪನಿಗಳ ಪ್ರತಿನಿಧಿಗಳ ಸಮುಖದಲ್ಲೇ ಮಾದರಿ ಸಂಗ್ರಹಿಸಿದೆ. ಈ ಸಂದರ್ಭದಲ್ಲಿ ಎಲ್ಲಾ ಅಧಿಕಾರಿಗಳು ಸಹಿ ಹಾಕಿದ್ದಾರೆ. ತೈಲ ಕಂಪನಿಗಳಿಗೆ ಕಳುಹಿಸಲಾದ ಮಾದರಿಗಳ ಫಲಿತಾಂಶವನ್ನು ನಮಗೆ ನೀಡಲಾಗಿಲ್ಲ. ಪರ್ಯಾಯವಾಗಿ ರಾಜ್ಯ ಸರ್ಕಾರ ನ್ಯಾಷನಲ್‌ ಅಕಾಡೇಷನ್‌ ಬೋರ್ಡ್‌ ಆಫ್‌ ಟೆಸ್ಟಿಂಗ್‌ ಆ್ಯಂಡ್‌ ಲ್ಯಾಬೊರೇಟರಿ (ಎನ್‌ಎಬಿಎಲ್‌)ಯಿಂದ ಮಾನ್ಯತೆ ಪಡೆದ ಖಾಸಗಿ ಪ್ರಯೋಗಾಲಯಗಳಿಗೆ ಮಾದರಿ ಕಳುಹಿಸಿ ವರದಿ ಪಡೆದುಕೊಂಡಿದ್ದೇವೆ ಎಂದು ತಿಳಿಸಿದರು.

ಎಥೆನಾಲ್‌ ಮಿಶ್ರಣ ಪತ್ತೆ ಹಚ್ಚಲು ಸಾಮಾನ್ಯ ಜ್ಞಾನ ಸಾಲುವುದಿಲ್ಲ. ಅದೊಂದು ರಾಕೆಟ್‌ ಸೈನ್ಸ್ ನಿಮಿಂದ ಸಾಧ್ಯವಿಲ್ಲ ಎಂದು ಹೇಳುತ್ತಿರುವ ತೈಲ ಕಂಪನಿಗಳು, ನಮ್ಮ ವರದಿ ಪ್ರಕಟಗೊಂಡ ಬಳಿಕ ಆನ್‌ಲೈನ್‌ನಲ್ಲಿ ಸಿಗುವ 600 ರೂ. ಬೆಲೆಯ ಹೈಡ್ರೋ ಮೀಟರ್‌ ಅನ್ನು ಬಳಸಿ ಕೆಲವು ಬಂಕ್‌ಗಳಲ್ಲಿ ಸ್ಥಳದಲ್ಲೇ ತಪಾಸಣೆ ನಡೆಸುತ್ತಿದ್ದು, ಎಥೆನಾಲ್‌ ಮಿಶ್ರಣ ಎಷ್ಟು ಎಂದು ಘೋಷಣೆ ಮಾಡುತ್ತಿವೆ. ತೈಲ ಕಂಪನಿಗಳ ಪರವಾಗಿ ಬಂಕ್‌ ಮಾಲೀಕರಿಂದಲೂ ಹೇಳಿಕೆ ಕೊಡಿಸಲಾಗುತ್ತಿದೆ ಎಂದು ದೂರಿದರು.

ನಮ ಮಾದರಿಯ ಪರೀಕ್ಷಾ ವರದಿ ಸರಿಯಿಲ್ಲ ಎಂದು ಹೇಳುವ ತೈಲ ಕಂಪನಿಗಳು ಸಾಮಾನ್ಯ ಮಾಪನದ ಮೂಲಕವೇ ಫಲಿತಾಂಶ ಘೋಷಿಸುವಂತಹ ದ್ವಂದ್ವ ಅನುಸರಿಸುತ್ತಿವೆ. ಎಷ್ಟು ಪ್ರಮಾಣದಲ್ಲಿ ಎಥೆನಾಲ್‌ ಮಿಶ್ರಣವಾಗುತ್ತಿದೆ ಎಂಬುದನ್ನಾದರೂ ಅಧಿಕೃತವಾಗಿ ಘೋಷಿಸಲು ಹಿಂದೇಟು ಹಾಕುತ್ತಿವೆ ಎಂದು ಟೀಕಿಸಿದರು.

ಕೇಂದ್ರ ಸರ್ಕಾರವೇ ಹೊಣೆ: ಎಥೆನಾಲ್‌ ಮಿಶ್ರಣ ಸಾಮಾನ್ಯ ಕಲಬೆರೆಕೆ ಪ್ರಕರಣ ಎಂದು ಪರಿಗಣಿಸಲಾಗುವುದಿಲ್ಲ. ಪೆಟ್ರೋಲ್‌ ಬಂಕ್‌ ಮಾಲೀಕರು ಎಥೆನಾಲ್‌ ಅನ್ನು ಸ್ಥಳೀಯವಾಗಿ ಮಿಶ್ರಣ ಮಾಡಲಾಗುವುದಿಲ್ಲ. ರಾಜ್ಯದಲ್ಲಿ 6 ಕಡೆ ಇಂಧನ ಪೂರೈಸುವ ಅಧಿಕೃತವಾದ ಟರ್ಮಿನಲ್‌ಗಳಿದ್ದು, ಅವು ತೈಲ ಕಂಪನಿಗಳ ಹಿಡಿತಲ್ಲಿದೆ. ಅಲ್ಲಿಂದಲೇ ಎಥೆನಾಲ್‌ ಮಿಶ್ರಣವಾಗುತ್ತಿದೆ. ಇದಕ್ಕೆ ಕೇಂದ್ರ ಸರ್ಕಾರವೇ ಹೊಣೆ ಎಂದು ಆರೋಪಿಸಿದರು.

ಇ-20ಯಲ್ಲಿ ಬಳಸಲಾಗುವ ಎಥೆನಾಲ್‌ ನಲ್ಲಿ ಕ್ಲೋರೈಡ್‌ ಮತ್ತು ಸಲ್ಪೇಟ್‌ ಪ್ರಮಾಣ ಜಾಸ್ತಿ ಇದೆ. ಇಂಜಿನ್‌ ಹಾಳಾಗುತ್ತದೆ ಎಂದು ಜುಲೈ 28ರಂದು ಸೊಸೈಟಿ ಆಫ್‌ ಇಂಡಿಯನ್‌ ಆಟೋ ಮೊಬೈಲ್‌ ಮ್ಯಾನುಪ್ಯಾಕ್ಚರ್‌ ವತಿಯಿಂದ ಪತ್ರ ಬರೆಯಲಾಗಿತ್ತು. ಒತ್ತಡ ಹೇರಿ ವಾರದಲ್ಲೇ ಅದನ್ನು ಹಿಂಪಡೆಯುವಂತೆ ಮಾಡಿದ್ದಾರೆ. ಆಕೋ ವಿಮಾ ಕಂಪನಿ ಇ-20 ಇಂಧನದಿಂದ ಹಾಳಾಗುವ ಇಂಜಿನ್‌ಗಳಿಗೆ ನಾವು ಪರಿಹಾರ ನೀಡುವುದಿಲ್ಲ ಎಂದಿತ್ತು. ಹುಂಡೈ, ಟೊಯೋಟಾದಂತಹ ಪ್ರತಿಷ್ಠಿತ ಉತ್ಪಾದನ ಸಂಸ್ಥೆಗಳು ಎಥೆನಾಲ್‌ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದವು. ಬಿಎಂಡಬ್ಲ್ಯೂ ಎಥೆನಾಲ್‌ ಅನ್ನು ಶೇ.30 ರಷ್ಟು ಮಿಶ್ರಣ ಮಾಡಿದರೆ ನಮ ಕಾರಿನ ಇಂಜಿನ್‌ಗಳು ಸಹಿಸುವುದಿಲ್ಲ ಎಂದು ಹೇಳಿತ್ತು.

ಕೇಂದ್ರ ಸರ್ಕಾರದ ಅಟಾರ್ನಿ ಜನರಲ್‌ ಇ-20 ಪ್ರಯೋಗಾರ್ಥ ಮಾತ್ರ ಎಂದು ಸುಪ್ರೀಂಕೋರ್ಟ್‌ ವಿಚಾರಣೆಯಲ್ಲಿ ಪ್ರಮಾಣ ಪತ್ರ ಸಲ್ಲಿಸಿದರು. ಕೇಂದ್ರ ಸಚಿವ ಕುಮಾರಸ್ವಾಮಿ ಕೂಡ ಕೆಲವು ಉತ್ಪಾದಕ ಸಂಸ್ಥೆಗಳು ತಮ ಬಳಿ ಎಥೆನಾಲ್‌ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದನ್ನು ತಿಳಿಸಿದರು. ಈ ಎಲ್ಲಾ ಹೇಳಿಕೆಗಳನ್ನು ಕೆಲವೇ ದಿನಗಳಲ್ಲಿ ಹಿಂಪಡೆಯುವಂತೆ ಮಾಡಲಾಗಿದೆ ಎಂದು ರಿಜ್ವಾನ್‌ ಆರೋಪಿಸಿದರು.

Min Rizwan Arshad
ಎಥೆನಾಲ್ ಮಿಶ್ರಣ ವಿವಾದ: 67 ಕಡೆ ಪೆಟ್ರೋಲ್ ಮಾದರಿ ಸಂಗ್ರಹಿಸಿ ಪರಿಶೀಲನೆ- ಸಿಎಂ ಶಿವಕುಮಾರ್

ಇ-20, ಇ-30 ಸೇರಿದಂತೆ ಯಾವುದೇ ಪ್ರಮಾಣದ ಎಥೆನಾಲ್‌ ಮಿಶ್ರಣವಾಗಿದ್ದರೂ ಅದನ್ನು ಖರೀದಿಸುವ ಆಯ್ಕೆ ಗ್ರಾಹಕರಿಗಿರಬೇಕು. ಮತ್ತು ಎಥೆನಾಲ್‌ ಮಿಶ್ರಿತ ಇಂಧನ ಖರೀದಿಸುವ ಗ್ರಾಹಕರಿಗೆ ಬೆಲೆಯಲ್ಲಿ ರಿಯಾಯಿತಿ ನೀಡಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು. ಮೈಲೇಜ್‌ ಕಡಿಮೆಯಾಗುವುದು ಸೇರಿದಂತೆ ಹಲವು ಸಮಸ್ಯೆಗಳಿವೆ. ಪೆಟ್ರೋಲ್‌ನಲ್ಲಿ 34 ಮೆಗಾ ಜ್ಯುವೆಲ್‌್ಸ ಅಂಶಗಳಿರುತ್ತವೆ. ಎಥೆನಾಲ್‌ ಮಿಶ್ರಣ ಮಾಡಿದರೆ ಅದು 30 ಮೆಗಾ ಜ್ಯುವೆಲ್‌್ಸಗೆ ಇಳಿಯುತ್ತದೆ. ಹೀಗಾಗಿ ಮೈಲೇಜ್‌ ಕಡಿಮೆಯಾಗುತ್ತದೆ ಎಂದು ವಿವರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X