

ವಿಜಯಪುರ: ಕೇವಲ 7 ಕಿಲೋ ಮೀಟರ್ ಉದ್ದದ ಮೆಟ್ರೊ ಜಾಲದ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿಗೆ ಬರುವ ಅಗತ್ಯವಿತ್ತಾ, ಸರಿ ಅವರು ಬಂದಿದ್ದಾರೆ, ಅವರ ಮುಂದೆ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ರಾಜ್ಯಕ್ಕೆ ಆಗಬೇಕಾದ ಎಲ್ಲಾ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ ಎಂದು ಸಚಿವ ಎಂ ಬಿ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.
ಇಂದು ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಮೆಟ್ರೊ ಪಿಂಕ್ ಲೈನ್ ಉದ್ಘಾಟನೆ ಬಳಿಕ ವೇದಿಕೆಯಲ್ಲಿ ಭಾಷಣ ಮಾಡಿದ ಡಿ ಕೆ ಶಿವಕುಮಾರ್ ರಾಜ್ಯಕ್ಕೆ ಬರ ಪರಿಹಾರ, ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಲು, ಮೆಟ್ರೊದಲ್ಲಿ ಕರ್ನಾಟಕದ ಕೊಡುಗೆ ಹೀಗೆ ಎಲ್ಲಾ ವಿಷಯಗಳನ್ನು ಪ್ರಧಾನಿಗಳ ಮುಂದೆ ಪ್ರಸ್ತಾಪಿಸಿದ್ದಾರೆ. ಇನ್ನು ಮಾಡಬೇಕಾಗಿರುವುದು ಪ್ರಧಾನಿಯವರ ವಿವೇಚನೆಗೆ ಬಿಟ್ಟ ವಿಚಾರ ಎಂದರು.
ಹತಾಶೆಯಿಂದ ಪ್ರಧಾನಿ ಮೋದಿ ಅವರು ರಾಹುಲ್ ಗಾಂಧಿ ಅವರ ಫೋನ್ ಕದ್ದಾಲಿಕೆ ಮಾಡುತ್ತಿರಬೇಕು, ಅವರ ಜಯಪ್ರಿಯತೆ ಕಡಿಮೆಯಾಗುತ್ತಿದೆ, ಹೀಗಾಗಿ ಹತಾಶೆಗೊಂಡಿರಬೇಕು, ರಾಹುಲ್ ಗಾಂಧಿಯವರು ಮಾಡಿರುವ ಆರೋಪ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ಜಾರಿ ನಿರ್ದೇಶನಾಲಯ (ಇಡಿ), ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆಗಳ ಮೇಲೆ ಬಿಜೆಪಿ ನಿಯಂತ್ರಣ ಹೊಂದಿದೆ ಎಂದು ಆರೋಪಿಸಿದರು.
100 ಕಿ ಮೀ ದಾಟಿದ ಮೆಟ್ರೊ ಜಾಲ
ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ ನಮ್ಮ ಮೆಟ್ರೋ ಪಿಂಕ್ ಲೈನ್ನ ಎಲಿವೇಟೆಡ್ ಮಾರ್ಗವನ್ನು ಉದ್ಘಾಟಿಸಿದರು. ಸುಮಾರು 3,470 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಹೊಸ ಮಾರ್ಗವು ನಗರದ ಸಂಪರ್ಕ ವ್ಯವಸ್ಥೆಯನ್ನು ಸುಧಾರಿಸುವುದರ ಜತೆಗೆ ದೈನಂದಿನ ಪ್ರಯಾಣವನ್ನು ಸುಗಮಗೊಳಿಸಲಿದೆ. ಅಲ್ಲದೆ, ಪ್ರಯಾಣಿಕರ ಪ್ರಯಾಣದ ಸಮಯವನ್ನು ಕಡಿಮೆ ಮಾಡಲು ನೆರವಾಗಲಿದೆ.
ಈ ಎಲಿವೇಟೆಡ್ ಮಾರ್ಗವು ಕಾಳೇನ ಅಗ್ರಹಾರ, ಹುಳಿಮಾವು, ಐಐಎಂಬಿ (ಬಿಳೇಕಹಳ್ಳಿ-ಐಐಎಂಬಿ), ಜೆ.ಪಿ. ನಗರ 4ನೇ ಹಂತ, ಜಯದೇವ ಆಸ್ಪತ್ರೆ ಮತ್ತು ತಾವರೆಕೆರೆ ಸೇರಿದಂತೆ ಆರು ನಿಲ್ದಾಣಗಳನ್ನು ಸಂಪರ್ಕಿಸಲಿದೆ.
ಈ ಮಾರ್ಗದ ಉದ್ಘಾಟನೆಯೊಂದಿಗೆ ಬೆಂಗಳೂರಿನ ಕಾರ್ಯಾಚರಣೆಯಲ್ಲಿರುವ ಮೆಟ್ರೋ ಜಾಲವು ಮೊದಲ ಬಾರಿಗೆ 100 ಕಿ.ಮೀ. ಗಡಿ ದಾಟಲಿದೆ.
ಯೋಜನೆಯ ವೆಚ್ಚ
ಪ್ರಧಾನಿ ಕಚೇರಿಯ ಮಾಹಿತಿಯ ಪ್ರಕಾರ, ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ ಪಿಂಕ್ ಲೈನ್ನ ಎಲಿವೇಟೆಡ್ ಮಾರ್ಗವನ್ನು ಸುಮಾರು 3,470 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ.