

ಬೆಂಗಳೂರು: ಬೆಂಗಳೂರಿನ ನಮ್ಮ ಮೆಟ್ರೋ ಪಿಂಕ್ ಲೈನ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ- ಸಿಎಂ ಡಿಕೆ ಶಿವಕುಮಾರ್ ಅವರ ನಡುವಿನ ಸೌಹಾರ್ದಯುತ ಮಾತುಕತೆ, ಲಘು ಹಾಸ್ಯದ ಕ್ಷಣಗಳ ಫೋಟೋ, ವಿಡಿಯೋ ಈಗ ಎಲ್ಲೆಡೆ ವೈರಲ್ ಆಗತೊಡಗಿದೆ.
ಪ್ರಧಾನಿ ಮೋದಿ ಪಿಂಕ್ ಲೈನ್ ಉದ್ಘಾಟನೆ ವೇಳೆ ಟಿಕೆಟ್ ಕೌಂಟರ್ ನಲ್ಲಿ ಶಿವಕುಮಾರ್ ಜೊತೆಗೆ ನಗುತ್ತಾ ಏನನ್ನೋ ಮಾತನಾಡುತ್ತಿರುವ ಫೋಟೋ ಬಗ್ಗೆ ಕುತೂಹಲ ಮೂಡಿತ್ತು. ಈಗ ಸ್ವತಃ ಡಿಕೆ ಶಿವಕುಮಾರ್ ತಮ್ಮ ಹಾಗೂ ಪ್ರಧಾನಿ ನಡುವೆ ನಡೆದ ಲಘು ಸಂಭಾಷಣೆಯ ವಿವರ ಹಂಚಿಕೊಂಡಿದ್ದಾರೆ.
ಮೆಟ್ರೋ ಪ್ರಯಾಣದ ವೇಳೆ ಪ್ರಧಾನಿ ತೋರಿದ ಆತ್ಮೀಯತೆ, ಅವರೇ ಸ್ಮಾರ್ಟ್ ಕಾರ್ಡ್ ಖರೀದಿಸಿದ ಪ್ರಸಂಗ, ಬೆಂಗಳೂರಿನ ಮೆಟ್ರೋ ವಿಸ್ತರಣೆ, ಕೇಂದ್ರದಿಂದ ಹೆಚ್ಚಿನ ಅನುದಾನದ ಬೇಡಿಕೆ ಸೇರಿದಂತೆ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಪ್ರಧಾನಿ ಮೋದಿ ಅವರೇ ಖರೀದಿಸಿದ ಮೆಟ್ರೋ ಸ್ಮಾರ್ಟ್
ಮೆಟ್ರೋ ಟಿಕೆಟ್ ಖರೀದಿಸುವ ಸಂದರ್ಭದಲ್ಲಿ ತಮ್ಮ ಬಳಿ ಹಣ ಇರಲಿಲ್ಲ. ಹಾಗಾಗಿ ನನ್ನ ಟಿಕೆಟ್ ಕೂಡ ನೀವೇ ತೆಗೆದುಕೊಳ್ಳಿ ಎಂದು ಪ್ರಧಾನಿಯವರಿಗೆ ಹೇಳಿದ್ದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರೇ ಸ್ಮಾರ್ಟ್ ಕಾರ್ಡ್ ಖರೀದಿಸಿದ್ದರು. ಇದೇ ಆ ಕಾರ್ಡ್ ಎಂದು ಮಾಧ್ಯಮದವರಿಗೆ ತೋರಿಸುವ ಮೂಲಕ ಆ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ. ಮೆಟ್ರೋ ಪ್ರಯಾಣದ ಸಂದರ್ಭದಲ್ಲಿ ಪ್ರಧಾನಿ ತಮ್ಮನ್ನು ಆತ್ಮೀಯವಾಗಿ ನಡೆಸಿಕೊಂಡರು ಎಂಬುದನ್ನೂ ತಿಳಿಸಿದ್ದಾರೆ.
ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬೇಡ:
ಪ್ರಧಾನಿ ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದು ಮತ್ತು ಒಟ್ಟಿಗೆ ಪ್ರಯಾಣಿಸಿದ ವಿಚಾರವಾಗಿ ಮಾತನಾಡಿದ ಡಿ.ಕೆ. ಶಿವಕುಮಾರ್, ಅಭಿವೃದ್ಧಿ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ. ಚುನಾವಣೆ ಬಂದಾಗ ರಾಜಕೀಯ ಬೇರೆ. ಆದರೆ ಸಾರ್ವಜನಿಕರ ಸೇವೆ ಮಾಡುವುದು ನಮ್ಮ ಕರ್ತವ್ಯ. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದು ಹೇಳಿದ್ದಾರೆ.
ಕರ್ನಾಟಕವಿಲ್ಲದೆ ಅಭಿವೃದ್ಧಿ ಹೇಗೆ ಸಾಧ್ಯ?
ಕರ್ನಾಟಕ ದೇಶದಲ್ಲೇ ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳಲ್ಲಿ ಒಂದಾಗಿದ್ದು, ರಾಜ್ಯಕ್ಕೆ ಹೆಚ್ಚಿನ ಅನುದಾನ ನೀಡಬೇಕು ಎಂದು ಪ್ರಧಾನಿ ಬಳಿ ಮನವಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ. ಬೆಂಗಳೂರು ಮೆಟ್ರೋವನ್ನು ಮುಂದಿನ ದಿನಗಳಲ್ಲಿ 500 ಕಿಲೋಮೀಟರ್‌ವರೆಗೆ ವಿಸ್ತರಿಸುವ ಗುರಿಯನ್ನೂ ಕೇಂದ್ರದ ಮುಂದೆ ಪ್ರಸ್ತಾಪಿಸಿದ್ದೇನೆ ಎಂದು ಹೇಳಿದ್ದಾರೆ.
50:50 ಅನುದಾನ ಇದ್ದರೂ ರಾಜ್ಯದ ಮೇಲೆಯೇ ಹೆಚ್ಚಿನ ಹೊರೆ? ಮೆಟ್ರೋ ಯೋಜನೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಲಾ ಶೇ.50ರಷ್ಟು ಅನುದಾನ ನೀಡುವ ವ್ಯವಸ್ಥೆ ಇದೆ. ಆದರೆ ವಾಸ್ತವದಲ್ಲಿ ಕರ್ನಾಟಕ ಸರ್ಕಾರದ ಮೇಲೆಯೇ ಹೆಚ್ಚಿನ ಆರ್ಥಿಕ ಹೊರೆ ಬೀಳುತ್ತಿದೆ ಎಂದು ಸಿಎಂ ಹೇಳಿದ್ದಾರೆ.
ಭೂಸ್ವಾಧೀನ, ವಿದ್ಯುತ್ ಮತ್ತು ನೀರಿನ ಮಾರ್ಗಗಳ ಸ್ಥಳಾಂತರ, ರಾಜ್ಯದ ತೆರಿಗೆಗಳು, ವಿದೇಶಿ ಸಾಲ ಮರುಪಾವತಿ ಹಾಗೂ ಯೋಜನಾ ವೆಚ್ಚ ಹೆಚ್ಚಳದ ಹೊಣೆಯನ್ನು ರಾಜ್ಯವೇ ಹೊರಬೇಕಾಗಿದೆ ಎಂದು ಅವರು ಹೇಳಿದ್ದಾರೆ. ಹೀಗಾಗಿ ಮೆಟ್ರೋ ಯೋಜನೆಗಳ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯಗಳು ನ್ಯಾಯಯುತವಾಗಿ ಹಂಚಿಕೊಳ್ಳಬೇಕು, ಯೋಜನೆಗಳಿಗೆ ಶೀಘ್ರ ಅನುಮತಿ ನೀಡಬೇಕು ಎಂದು ಪ್ರಧಾನಿಯವರಲ್ಲಿ ಮನವಿ ಮಾಡಿದ್ದಾರೆ.