

ತುಮಕೂರು: ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಮಾದಿಹಳ್ಳಿ ಬಳಿ ಬೈಕಿಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದಿದ್ದು, ಭೀಕರ ಅಪಘಾತದಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ.
ಮೃತ ಯುವಕರನ್ನು ಗೆದ್ದಲೆಹಳ್ಳಿ ನಿವಾಸಿ ದಿನೇಶ್ ಅವರ ಪುತ್ರ ಸಂಜು(23) ಹಾಗೂ ಬೈರನಾಯಕನಹಳ್ಳಿ ಗ್ರಾಮದ ಆನಂದ್ ಕುಮಾರ್ ಅವರ ಪುತ್ರ ಹರ್ಷ(23) ಎಂದು ಗುರುತಿಸಲಾಗಿದೆ.
ಇಂದು ಸಂಬಂಧಿಕರ ಮದುವೆ ಮುಗಿಸಿ ಬೈಕ್‌ನಲ್ಲಿ ವಾಪಸ್ ಬರುತ್ತಿದ್ದ ಯುವಕರು ತಿಪಟೂರು-ಅರಸೀಕೆರೆ ರಸ್ತೆಯ ಮಾದಿಹಳ್ಳಿ ಬಳಿ ಯೂ-ಟರ್ನ್ ತೆಗೆದುಕೊಳ್ಳುವಾಗ ಅರಸೀಕೆರೆ ಕಡೆಯಿಂದ ತಿಪಟೂರಿಗೆ ಬರುತ್ತಿದ್ದ ಬಸ್ ಡಿಕ್ಕಿ ಹೊಡೆದಿದೆ.
ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಈ ಸಂಬಂಧ ತಿಪಟೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.