

ಬೆಂಗಳೂರು: ಜನಪ್ರತಿನಿಧಿಯಾಗಿ ಹೇಗೆ ಮಾತನಾಡಬೇಕು ಎಂಬ ಕನಿಷ್ಠ ಪರಿಜ್ಞಾನವೂ ಇಲ್ಲದೆ ಶಾಲಾ ಮಕ್ಕಳ ಮುಂದೆ ದ್ವೇಷಪೂರಿತ ಹಾಗೂ ಅಸಂವಿಧಾನಿಕ ಮಾತುಗಳನ್ನಾಡಿರುವುದು ಸರಿಯಲ್ಲ. ಮಕ್ಕಳಲ್ಲಿ ಕೆಟ್ಟ ವಿಚಾರಗಳನ್ನು ಬಿತ್ತುವುದೇ ಬಿಜೆಪಿ ನಾಯಕರ ಚಾಳಿಯಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬೆಳ್ತಂಗಡಿ ಶಾಸಕರಾಗಿರುವ ಹರೀಶ್ ಪೂಂಜಾ ಬೆಳ್ತಂಗಡಿ ತಾಲ್ಲೂಕಿನ ಪುಂಜಾಲಕಟ್ಟೆಯ ಕರ್ನಾಟಕ ಪಬ್ಲಿಕ್ ಶಾಲೆ (ಕೆಪಿಎಸ್)ಯ ನೂತನ ಸಭಾಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಕಾಂಗ್ರೆಸ್ ಪಕ್ಷದ ಬಗ್ಗೆ ಅವಾಚ್ಯ ಶಬ್ದಗಳನ್ನು ಬಳಸಿದ್ದರಲ್ಲದೆ, ದ್ವೇಷದ ಭಾಷಣ ಮಾಡಿದ್ದರು. ಈ ಬಗ್ಗೆ ಸಚಿವ ಮಧು ಬಂಗಾರಪ್ಪ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ರಾಜಕಾರಣವನ್ನು ರಾಜಕೀಯ ವೇದಿಕೆಗಳಿಗೆ ಸೀಮಿತಗೊಳಿಸಬೇಕು. ಶಾಲೆಗಳಲ್ಲಿ ಈ ರೀತಿ ಮಾತನಾಡುವುದು ಸರಿಯಲ್ಲ. ಶಾಸಕರಿಗೆ ಕನಿಷ್ಠ ಸಾಮಾನ್ಯ ತಿಳಿವಳಿಕೆ ಇರಬೇಕಲ್ಲವೇ? ಅವರ ಮನಸ್ಸಿನಲ್ಲಿ ವಿಷವಿದ್ದರೆ ಅದನ್ನೇ ಹೊರಹಾಕುತ್ತಾರೆ.
ಈ ವಿಚಾರವನ್ನು ನಾವು ಸುಮ್ಮನೆ ಬಿಡುವುದಿಲ್ಲ. ಶಾಸಕರು ಏನು ಮಾತನಾಡಿದ್ದಾರೆ ಎಂಬ ಬಗ್ಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ವರದಿಯ ಆಧಾರದ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ದೂರು ನೀಡಲು ಮುಂದೆ ಬಂದರೂ ಸ್ವಾಗತಿಸುತ್ತೇವೆ. ಆದರೆ, ದೂರುಗಳಿಗಾಗಿ ಕಾಯದೆ ಇಲಾಖೆಯಿಂದಲೇ ಕ್ರಮ ಕೈಗೊಳ್ಳುತ್ತೇವೆ ಎಂದರು.
ಬೆಂಗಳೂರಿನಲ್ಲಿ ಮಾತನಾಡಿದ ಮಧು ಬಂಗಾರಪ್ಪ, ಶಾಲಾ ಮಕ್ಕಳ ಮುಂದೆ ರಾಜಕೀಯ ಭಾಷಣ ಮಾಡಿದ ಶಾಸಕ ಹರೀಶ್ ಪೂಂಜಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಈಗಾಗಲೇ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.
ರಾಜಕಾರಣವನ್ನು ರಾಜಕೀಯ ವೇದಿಕೆಗಳಿಗೆ ಸೀಮಿತಗೊಳಿಸಬೇಕು. ಶಾಲೆಗಳಲ್ಲಿ ಈ ರೀತಿ ಮಾತನಾಡುವುದು ಸರಿಯಲ್ಲ. ಶಾಸಕರಿಗೆ ಕನಿಷ್ಠ ಸಾಮಾನ್ಯ ತಿಳುವಳಿಕೆ ಇರಬೇಕಲ್ಲವೇ? ಅವರ ಮನಸ್ಸಿನಲ್ಲಿ ವಿಷವಿದ್ದರೆ ಅದನ್ನೇ ಹೊರಹಾಕುತ್ತಾರೆ. ಈ ವಿಚಾರವನ್ನು ನಾವು ಸುಮ್ಮನೆ ಬಿಡುವುದಿಲ್ಲ. ಶಾಸಕರು ಏನು ಮಾತನಾಡಿದ್ದಾರೆ ಎಂಬ ಬಗ್ಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ವರದಿಯ ಆಧಾರದ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ದೂರು ನೀಡಲು ಮುಂದೆ ಬಂದರೂ ಸ್ವಾಗತಿಸುತ್ತೇವೆ. ಆದರೆ, ದೂರುಗಳಿಗಾಗಿ ಕಾಯದೆ ಇಲಾಖೆಯಿಂದಲೇ ಕ್ರಮ ಕೈಗೊಳ್ಳುತ್ತೇವೆ ಎಂದರು.
ಶಾಲೆಗಳು ದೇವಸ್ಥಾನಗಳಿದ್ದಂತೆ. ಅಂತಹ ಪವಿತ್ರ ಸ್ಥಳದಲ್ಲಿ ರಾಜಕೀಯ ಮಾತನಾಡುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ ಸಚಿವರು, ರಾಜಕಾರಣಕ್ಕಾಗಿ ಈಗಾಗಲೇ ದೇವಸ್ಥಾನಗಳನ್ನು ಬಳಸಿಕೊಂಡಿರುವವರು ಇದೀಗ ಶಾಲೆಗಳಿಗೂ ನೇರವಾಗಿ ಪ್ರವೇಶಿಸುತ್ತಿದ್ದಾರೆ. ಜನರು ಇಂತಹ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಶಿಕ್ಷಣ ಸಚಿವನಾಗಿ ಈ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇನೆ. ಅವರು ಕ್ಷಮೆ ಕೇಳುತ್ತಾರೋ ಇಲ್ಲವೋ ಎಂಬುದು ಮುಖ್ಯವಲ್ಲ. ಕಾನೂನು ಪ್ರಕಾರ ಕೈಗೊಳ್ಳಬೇಕಾದ ಕ್ರಮವನ್ನು ಖಂಡಿತ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು.
ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆ ಪಬ್ಲಿಕ್ ಶಾಲೆಯಲ್ಲಿ ಶನಿವಾರ ನಡೆದ ಅಭಿನಂದನಾ ಸಭೆಯಲ್ಲಿ ಮಾತನಾಡಿದ್ದ ಶಾಸಕ ಹರೀಶ್ ಪೂಂಜ, ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದರು. "ಬೆಳ್ತಂಗಡಿಯಲ್ಲಿ ಒಂದು ರೂಪಾಯಿ ಅನುದಾನ ನೀಡದ ದರಿದ್ರ ಕಾಂಗ್ರೆಸ್ ಪಕ್ಷವಿದೆ. ಕಾರ್ಯಕ್ರಮವನ್ನು ಕೊನೆಯ ಕ್ಷಣದಲ್ಲಿ ರದ್ದುಗೊಳಿಸುವಂತೆ ಪ್ರಾಂಶುಪಾಲರು ಹಾಗೂ ಶಿಕ್ಷಕರಿಗೆ ಅಧಿಕಾರಿಗಳು ಚಿತ್ರಹಿಂಸೆ ನೀಡಿದ್ದಾರೆ. ಇಂತಹ ದರಿದ್ರ ಪಕ್ಷವನ್ನು ಯಾರೂ ಬೆಂಬಲಿಸಬೇಡಿ" ಎಂದು ಮಕ್ಕಳ ಮುಂದೆ ಮಾತನಾಡಿದ್ದರು.