

ಕರ್ನಾಟಕದ ಸಾಂಸ್ಕೃತಿಕ ಅಸ್ಮಿತೆಯ ಪ್ರತೀಕ ಹಾಗೂ ಸಮಾಜ ಸುಧಾರಕ ಬಸವಣ್ಣನವರ ಆದರ್ಶಗಳಿಗೆ ದೊಡ್ಡ ಅವಮಾನವಾಗಿರುವ 'ಬಸವ ಮಂಟಪ' ಶೀರ್ಷಿಕೆಯ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳಲು ಹಾಗೂ ಅದರ ಪ್ರಕಟಣೆಗೆ ಹೊಣೆಗಾರರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಮುಂದಾಗಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು ಶುಕ್ರವಾರ ತಿಳಿಸಿದ್ದಾರೆ.
ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ ಕೆ ಶಿವಕುಮಾರ್, ಈ ವಿಚಾರವು ಕರ್ನಾಟಕಕ್ಕೆ ಹಾಗೂ ರಾಜ್ಯದ ಸಾಂಸ್ಕೃತಿಕ ಅಸ್ಮಿತೆ ಎಂದು ಗೌರವಿಸಲ್ಪಡುವ ಸಮಾಜ ಸುಧಾರಕ ಬಸವಣ್ಣನವರ ತತ್ವಾದರ್ಶಗಳಿಗೆ ಮಾಡಿದ ದೊಡ್ಡ ಅವಮಾನವಾಗಿದೆ ಎಂದು ಹೇಳಿದರು.
ದೇಶದಾದ್ಯಂತ ಮಾದರಿಯಾಗಿರುವ ಬಸವಣ್ಣನವರ ಬೋಧನೆಗಳು ಮತ್ತು ತತ್ವ ಆದರ್ಶಗಳನ್ನು ಪ್ರಚಾರಪಡಿಸಲು ಸರ್ಕಾರ ಬದ್ಧವಾಗಿದೆ. ಜನರು ಅವರ ತತ್ವಗಳನ್ನು ಅರ್ಥಮಾಡಿಕೊಂಡು ಅನುಸರಿಸುವಂತೆ ಗ್ರಾಮಗಳು, ಮನೆಗಳು, ಶಾಲೆಗಳು ಮತ್ತು ಸರ್ಕಾರಿ ಕಚೇರಿಗಳಲ್ಲಿ ಅವುಗಳನ್ನು ಪ್ರಚಾರ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಬಸವ ಸಮಿತಿಯಿಂದ ಮನವಿ ಸ್ವೀಕರಿಸಿದ ಬಳಿಕ ಈ ವಿಚಾರವಾಗಿ ಸರ್ಕಾರ ವಿವರವಾದ ಚರ್ಚೆ ನಡೆಸಿದೆ ಎಂದು ಡಿ ಕೆ ಶಿವಕುಮಾರ್ ಹೇಳಿದರು.
'ಬಸವ ಮಂಟಪ' ಶೀರ್ಷಿಕೆಯ ಪುಸ್ತಕವನ್ನು ವಶಪಡಿಸಿಕೊಳ್ಳುವಂತೆ ಈಗಾಗಲೇ ಸೂಚನೆ ನೀಡಿದ್ದೇವೆ. ಇದರ ಹಿಂದೆ ಇರುವವರ ವಿರುದ್ಧ ನಮ್ಮ ಸರ್ಕಾರ ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.