

ಬೆಳಗಾವಿ: 12ನೇ ಶತಮಾನದ ಸಮಾಜ ಸುಧಾರಕ ‘ಬಸವಣ್ಣ ಹಾಗೂ ಅವರ ವಚನಗಳನ್ನು ಅವಮಾನಿಸಿದ ಅನಿವಾಸಿ ಭಾರತೀಯ, ದಾವಣಗೆರೆ ಮೂಲದ ರವಿ ಹಂಜ್ ಅವರ ಹತ್ಯೆಗೆ ಐದು ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಲಿಂಗಾಯತ ಮುಖಂಡರೊಬ್ಬರು ಶನಿವಾರ ಬಹಿರಂಗವಾಗಿಯೇ ಘೋಷಿಸಿದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ನಡೆದಿದೆ.
ಇಂದು ಅಥಣಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ರವಿ ಹಂಜ್ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಲಿಂಗಾಯತ ಮುಖಂಡ ಪ್ರಕಾಶ್ ಮಹಾಜನ್ ಅವರು ಮಾತನಾಡುವ ವೇಳೆ ಈ ವಿವಾದಾತ್ಮಕ ಘೋಷಣೆ ಮಾಡಿದ್ದಾರೆ.
ಈ ವಿಚಾರದಲ್ಲಿ ಬಸವಣ್ಣನವರ ಭಕ್ತರೆಲ್ಲರೂ ಒಂದಾಗಬೇಕು ಎಂದು ಹೇಳಿದ ಪ್ರಕಾಶ್ ಅವರು, ರವಿ ಹಂಜ್ ಅವರನ್ನು ಕೊಲೆ ಮಾಡುವವರಿಗೆ ಐದು ಲಕ್ಷ ರೂಪಾಯಿ ಬಹುಮಾನ ನೀಡುತ್ತೇನೆ. ಯಾರಾದರೂ ಕೊಲೆ ಮಾಡುವವರಿದ್ದರೆ ತಮಗೆ ಕರೆ ಮಾಡುವಂತೆ ಸುಪಾರಿ ಹೇಳಿಕೆ ನೀಡಿದ್ದಾರೆ.
‘ಬಸವ ಮಂಟಪ’ ಕೃತಿಯ ಕರ್ತೃ ರವಿ ಹಂಜ್ ಅವರು ಬಸವಣ್ಣನವರನ್ನು ಕೀಳು ಪದಗಳಿಂದ ನಿಂದಿಸಿದ್ದು, ಲಿಂಗಾಯತರನ್ನು ‘ಲಿಂಗಹತ’ ಎಂದು ನಮೂಸಿದ್ದಾರೆ’ ಎಂದು ಆರೋಪಿಸಿದರು.