

ಬೆಂಗಳೂರು: ನೈಸ್ ಯೋಜನೆಗಾಗಿ ಭೂ ಕಬಳಿಕೆ ವಿಚಾರದಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿ ನಡುವೆ ಭಾರಿ ಆರೋಪ, ಪ್ರತ್ಯಾರೋಪ ಮುಂದುವರೆದಿದೆ. ಈ ಮಧ್ಯೆ ಕೇಂದ್ರ ಸಚಿವ ಕುಮಾರಸ್ವಾಮಿ ಇಂದು ಕೆಂಗೇರಿ ಬಳಿಯ ಬಿ.ಎಂ.ಕಾವೆಲ್'ನಲ್ಲಿ ಸಿಎಂ ಡಿಕೆಶಿ ಕುಟುಂಬಕ್ಕೆ ಸೇರಿದು ಎನ್ನಲಾದ 200 ಎಕರೆಗೂ ಹೆಚ್ಚಿನ ಭೂಮಿ ವೀಕ್ಷಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಸಣ್ಣಪುಟ್ಟ ರೈತರ ಒಂದು ಎಕರೆ, ಎರಡು ಎಕರೆ ಜಮೀನೆಲ್ಲ ನೈಸ್ ಪಾಲಾಗಿದೆ. ಆದರೆ, ಇಲ್ಲೊಬ್ಬ ವ್ಯಕ್ತಿಯ ಪರಿವಾರಕ್ಕೆ ಸೇರಿದ 200 ಎಕರೆಗೂ ಹೆಚ್ಚಿನ ಭೂಮಿ ಇದೆ. ಬಿ.ಎಂ.ಕಾವೆಲ್'ನಲ್ಲಿ ವಿಶಾಲವಾಗಿ ಕಾಣುವ ಈ ಭೂಮಿ ರಾಜ್ಯದ ಹಾಲಿ ಮುಖ್ಯಮಂತ್ರಿ ಮತ್ತು ಅವರ ಕುಟುಂಬದ ಸದಸ್ಯರಿಗೆ ಸೇರಿದ್ದು. ಇವರಿಗೆ ಮಾತ್ರ ನೂರಾರು ಎಕರೆ! ಬಡಜನರಿಗೆ ಮಾತ್ರ ಭೂಮಿ ಬೇಕಿಲ್ಲವಂತೆ!! ಇದು ಇವರ ನೀತಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ನೈಸ್ ಕಂಪನಿ ಸಿದ್ದಗಂಗಾ ಮಠಕ್ಕೆ ಆಗಲಿ, ಬಡ ರೈತರಿಗೆ ಆಗಲಿ NOC ಕೊಡುವುದಿಲ್ಲ. ಆದರೆ, ಪ್ರಭಾವಗಳಿಗೆ ಸುನಾಯಸವಾಗಿ ಅದು ಲಭ್ಯವಾಗುತ್ತದೆ ಎಂದು ಆರೋಪಿಸಿದ್ದಾರೆ.
ಇತ್ತೀಚಿಗಷ್ಟೇ ಸಿಎಂ ಡಿಕೆ ಶಿವಕುಮಾರ್ ಅವರ ಭೂಕಬಳಿಕೆ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ದಾಖಲೆ ಬಿಡುಗಡೆ ಮಾಡಿದ್ದ ಕುಮಾರಸ್ವಾಮಿ, ಬೆಂಗಳೂರು-ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ (BMIC) ಯೋಜನೆಗಾಗಿ ಕೆಐಎಡಿಬಿ (KIADB) ಸ್ವಾಧೀನಪಡಿಸಿಕೊಂಡಿದ್ದ ಸುಮಾರು 300 ಎಕರೆಗೂ ಅಧಿಕ ಭೂಮಿಯನ್ನು ಡಿ.ಕೆ. ಶಿವಕುಮಾರ್ ಕುಟುಂಬದವರು ತಮ್ಮ ಹೆಸರಿಗೆ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದ್ದರು. ಡಿ.ಕೆ. ಶಿವಕುಮಾರ್, ಅವರ ಸಹೋದರ ಡಿ.ಕೆ. ಸುರೇಶ್, ತಾಯಿ ಗೌರಮ್ಮ ಹಾಗೂ ಪುತ್ರಿ ಆಭರಣ ಹೆಸರಿನಲ್ಲಿ ಕ್ರಯಪತ್ರಗಳ ದಾಖಲೆಗಳಿವೆ ಎಂದು ಹೇಳಿದ್ದರು.
2004ರಲ್ಲಿ ಡಿ.ಕೆ. ಶಿವಕುಮಾರ್ ಅವರು ನಗರಾಭಿವೃದ್ಧಿ ಸಚಿವರಾಗಿದ್ದಾಗ ಮೂಲ ಒಪ್ಪಂದವನ್ನು ಬದಲಿಸಿ ಜಮೀನು ಮರುಹಂಚಿಕೆ ಮಾಡಿಕೊಂಡಿದ್ದಾರೆ ಎಂಬುದು ಅವರ ಪ್ರಮುಖ ಆರೋಪವಾಗಿದೆ.
ಆದರೆ, ತಮ್ಮ ಮತ್ತು ಕುಟುಂಬದವರ ಮೇಲಿನ ಭೂಕಬಳಿಕೆ ಆರೋಪಗಳನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಂಪೂರ್ಣವಾಗಿ ತಳ್ಳಿಹಾಕಿದ್ದು, ತಾನು ಹಾಗೂ ತಮ್ಮ ಕುಟುಂಬ ಮಾಡಿರುವ ಎಲ್ಲ ವ್ಯವಹಾರಗಳು ಮತ್ತು ಆಸ್ತಿಗಳು ಆದಾಯ ತೆರಿಗೆ ಇಲಾಖೆ ಹಾಗೂ ಚುನಾವಣಾ ಆಯೋಗದ affidavits (ಪ್ರಮಾಣಪತ್ರ) ಗಳಲ್ಲಿ ಸ್ಪಷ್ಟವಾಗಿ ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.