

ವಿಜಯಪುರ: ಪ್ರಸ್ತುತ ದೇಶಾದ್ಯಂತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(SIR)ಗೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ಈ ಸಂಬಂಧ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದೆ.
ಈ ಮಧ್ಯ ಜೀವಂತವಾಗಿರುವ ಎಂಟು ಮತದಾರರು ಮೃತಪಟ್ಟಿದ್ದಾರೆ ಎಂಬ ಕಾರಣ ನೀಡಿ, ಅವರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವಂತೆ ಶಾಸಕರ ಲೆಟರ್‌ಹೆಡ್'ನಲ್ಲೇ ಅರ್ಜಿ ಸಲ್ಲಿಸಿದ ಆರೋಪದ ಮೇಲೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಈ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಸ್ವತಂತ್ರವಾಗಿ ಮರಣ ಪ್ರಮಾಣಪತ್ರಗಳನ್ನು ಪರಿಶೀಲಿಸಿ ವರದಿ ಮಾಡಿದ ನಂತರ, ನಗರದ ಬಾಗವಾನ್ ಕಾಲೋನಿಯ ನಿವಾಸಿ ಅಬ್ದುಲ್ ರಝಾಕ್ ಮೌಲಾಸಾಬ್ ಅವರು ವಿಜಯಪುರದ ಜಲನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನ ಆಧಾರದ ಮೇಲೆ ಪೊಲೀಸರು ಯತ್ನಾಳ್ ಸೇರಿದಂತೆ ಮೂವರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ತಾವು ಜೀವಂತವಾಗಿದ್ದರೂ, ತಮ್ಮನ್ನೂ ಸೇರಿದಂತೆ ಇತರ ಬದುಕಿರುವ ಜನರನ್ನು ಮೃತಪಟ್ಟಿದ್ದಾರೆ ಎಂದು ಬಿಂಬಿಸಿ ನಕಲಿ ಮರಣ ಪ್ರಮಾಣ ಪತ್ರಗಳನ್ನು ತಯಾರಿಸಲಾಗಿದೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಅವರ ಬೆಂಬಲಿಗರು ಕಳೆದ ಸೆ.3 ರಂದು ಈ ಸುಳ್ಳು ಪ್ರಮಾಣ ಪತ್ರಗಳನ್ನು ವಿಜಯಪುರ ನಗರ ಪಾಲಿಕೆ ಆಯುಕ್ತರಿಗೆ ಸಲ್ಲಿಸಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲು ಕೋರಿದ್ದಾರೆ. ಶಾಸಕರ ಲೆಟರ್‌ಹೆಡ್'ನಲ್ಲೇ ಮನವಿ ಮಾಡಿದ್ದಾರೆ ಎಂದು ಅಬ್ದುಲ್ ಆರೋಪಿಸಿದ್ದಾರೆ.
ಜಲನಗರ ಪೊಲೀಸ್ ಠಾಣೆಯ ಅಧಿಕಾರಿಗಳು ದೂರಿನ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.