ಹಾಸನ: ಸ್ವರೂಪ್‌ ಪ್ರಕಾಶ್ ವಿರುದ್ಧ ಖಾಸಗಿ ವಾಹಿನಿ ಸ್ಟಿಂಗ್; ವಿವರಣೆ ಕೋರಿ ಶಾಸಕರಿಗೆ ನೋಟಿಸ್ ಜಾರಿ ಮಾಡಿದ JDS

ಸಾರ್ವಜನಿಕ ಕಾಮಗಾರಿ ಗುತ್ತಿಗೆಗೆ ಸಂಬಂಧಿಸಿದ ಈ ಆರೋಪದ ಹಿನ್ನೆಲೆಯಲ್ಲಿ, ಪಕ್ಷದ ನಾಯಕತ್ವವು ಶಾಸಕರಿಗೆ ನೋಟಿಸ್ ಜಾರಿ ಮಾಡಿದೆ.
Swaroop prakash
ಸ್ವರೂಪ್ ಪ್ರಕಾಶ್
Updated on: 

ಹಾಸನ :ಜೆಡಿ(ಎಸ್) ಶಾಸಕ ಸ್ವರೂಪ್ ಪ್ರಕಾಶ್ ಅವರ ವಿರುದ್ಧ ಖಾಸಗಿ ಟಿವಿ ವಾಹಿನಿಯೊಂದರ 'ಸ್ಟಿಂಗ್ ಆಪರೇಷನ್' (ರಹಸ್ಯ ಕಾರ್ಯಾಚರಣೆ) ವಿಡಿಯೋವೊಂದು ಹರಿದಾಡುತ್ತಿದ್ದು ಕಮಿಷನ್ ಆರೋಪಗಳಿಗೆ ಎಡೆಮಾಡಿಕೊಟ್ಟಿದೆ. ಸಾರ್ವಜನಿಕ ಕಾಮಗಾರಿ ಗುತ್ತಿಗೆಗೆ ಸಂಬಂಧಿಸಿದ ಈ ಆರೋಪದ ಹಿನ್ನೆಲೆಯಲ್ಲಿ, ಪಕ್ಷದ ನಾಯಕತ್ವವು ಶಾಸಕರಿಗೆ ನೋಟಿಸ್ ಜಾರಿ ಮಾಡಿದೆ.

ಶುಕ್ರವಾರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ ಈ ವಿಡಿಯೋದಲ್ಲಿ, ಶಾಸಕರು ಮತ್ತು ಗುತ್ತಿಗೆದಾರರ ನಡುವೆ ಕಾಮಗಾರಿ ಗುತ್ತಿಗೆಗೆ ಸಂಬಂಧಿಸಿದ ಕಮಿಷನ್ ಕುರಿತು ಚರ್ಚೆ ನಡೆಯುತ್ತಿರುವುದು ಕಂಡುಬರುತ್ತದೆ.

ಪತ್ರಿಕೆಯೊಂದರ ವರದಿಯ ಪ್ರಕಾರ, ಸ್ವರೂಪ್ ಪ್ರಕಾಶ್ ಎಂದು ಗುರುತಿಸಲಾದ ವ್ಯಕ್ತಿಯು ಶೇ. 8ರಷ್ಟು ಕಮಿಷನ್ ಕೇಳಿದರೆ, ಗುತ್ತಿಗೆದಾರರು ಶೇ. 5ರಷ್ಟು ನೀಡುವುದಾಗಿ ಹೇಳುತ್ತಾರೆ. ಇದಕ್ಕೆ ಶಾಸಕರು ಒಪ್ಪಿಗೆ ಸೂಚಿಸಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ.

ಈ ಸ್ಟಿಂಗ್ ಆಪರೇಷನ್ ದೃಶ್ಯಾವಳಿಯಲ್ಲಿ, ಶಾಸಕರೆಂದು ಗುರುತಿಸಲಾದ ವ್ಯಕ್ತಿಯು ಹಣವನ್ನು ಸ್ವೀಕರಿಸುತ್ತಿರುವುದು ಕೂಡ ಸೆರೆಯಾಗಿದೆ ಎಂದು ಹೇಳಲಾಗಿದೆ. ಈ ವಿಡಿಯೋ ಸ್ವರೂಪ್ ಪ್ರಕಾಶ್ ಅವರಿಗೆ ಸಂಬಂಧಿಸಿದ್ದು ಎಂದು ವರದಿಯಾಗಿದ್ದರೂ, ದೃಶ್ಯಾವಳಿಯ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಳ್ಳಲಾಗಿಲ್ಲ. ಅಲ್ಲದೆ, ಈ ಕಾಮಗಾರಿ ಗುತ್ತಿಗೆಯ ಮೌಲ್ಯ, ಸಂಬಂಧಪಟ್ಟ ಇಲಾಖೆ ಅಥವಾ ಸ್ಥಳದ ಬಗ್ಗೆ ಯಾವುದೇ ವಿವರಗಳು ಲಭ್ಯವಿಲ್ಲ.

Swaroop prakash
ಸ್ಟಿಂಗ್ ಆಪರೇಷನ್ ಕೇಸು ಮುಚ್ಚಿಹಾಕಲಾಗಿದೆ; ಆರ್ ಅಶೋಕ್ ಆರೋಪ, ನ.1ಕ್ಕೆ ದೆಹಲಿಯಲ್ಲಿ ಸಿದ್ದರಾಮಯ್ಯ ರಾಹುಲ್ ಗಾಂಧಿ ಭೇಟಿ

ಈ ವಿಡಿಯೋ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಜೆಡಿ(ಎಸ್) ಪಕ್ಷವು ಕ್ರಮಕ್ಕೆ ಮುಂದಾಗಿದೆ. ಜೆಡಿ(ಎಸ್) ನಾಯಕ ಹಾಗೂ ಕರ್ನಾಟಕ ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ಅವರು, ಕಮಿಷನ್ ಆರೋಪಗಳಿಗೆ ಸಂಬಂಧಿಸಿದಂತೆ ಸ್ವರೂಪ್ ಪ್ರಕಾಶ್ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಶಾಸಕರಿಂದ ಪ್ರತಿಕ್ರಿಯೆ ಬಂದ ನಂತರ ಪಕ್ಷವು ಈ ವಿಷಯದ ಬಗ್ಗೆ ಚರ್ಚಿಸಿ, ಮುಂದಿನ ಕ್ರಮದ ಕುರಿತು ನಿರ್ಧಾರ ಕೈಗೊಳ್ಳಲಿದೆ ಎಂದು ಅವರು ಹೇಳಿದರು. ತಪ್ಪು ನಡೆದಿರುವುದು ಸಾಬೀತಾದರೆ ಖಂಡಿತವಾಗಿಯೂ ಕ್ರಮ ಕೈಗೊಳ್ಳಲಾಗುವುದು ಎಂದು ರೇವಣ್ಣ ಸ್ಪಷ್ಟಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X