ED ದಾಳಿ ಅಂತ್ಯ: 3 ಕೋಟಿ ರೂ ನಗದು, ಅಪಾರ ಪ್ರಮಾಣದ ಚಿನ್ನ, ಬೆಳ್ಳಿ ಪತ್ತೆ; ಆ ಹಣ ನಮ್ಮದೇ ಎಂದ ಸತೀಶ್ ಜಾರಕಿಹೊಳಿ

ಇಡಿ ದಾಳಿ ಅಂತ್ಯವಾದ ಬಳಿಕ ಬೆಂಗಳೂರಿನ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಸತೀಶ್ ಜಾರಕಿಹೊಳಿ ಅವರು, ಇಡಿ ಅಧಿಕಾರಿಗಳು ಎರಡು ಕೋಟಿ ರೂ. ನಗದು ಹಾಗೂ ಹಲವು ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದರು.
Minister Satish Jarkiholi, his residence at Kuvempu Nagar in Belagavi
ಸಚಿವ ಸತೀಶ್ ಜಾರಕಿಹೊಳಿ ಅವರ ಬೆಳಗಾವಿಯ ಕುವೆಂಪು ನಗರದಲ್ಲಿರುವ ನಿವಾಸ
Updated on

ಬೆಂಗಳೂರು: ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ(ಫೆಮಾ) ಉಲ್ಲಂಘಸಿ ವಿದೇಶದಲ್ಲಿ ಅಕ್ರಮವಾಗಿ ಹೂಡಿಕೆ ಮಾಡಿದ ಆರೋಪದಡಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಮನೆ ಮೇಲೆ ಬುಧವಾರ ದಾಳಿ ನಡೆಸಿದ್ದ, ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ಎರಡು ದಿನಗಳ ಕಾಲ ತೀವ್ರ ಶೋಧ ನಡೆಸಿದ್ದಾರೆ.

ಸತೀಶ್ ಜಾರಕಿಹೊಳಿ ಅವರ ಬೆಳಗಾವಿ ಹಾಗೂ ಬೆಂಗಳೂರು ಮನೆ, ಕಚೇರಿ, ಅವರ ಬಾಮೈದ, ಅಬಕಾರಿ ಇಲಾಖೆಯ ಜಂಟಿ ಆಯುಕ್ತ ವೈ. ಮಂಜುನಾಥ್ ಸೇರಿದಂತೆ ಅವರ ಆಪ್ತರ ಮನೆ ಸೇರಿದಂತೆ 18 ಕಡೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದರು.

ಇದೀಗ ಇಡಿ ಅಧಿಕಾರಿಗಳ ಶೋಧ ಅಂತ್ಯವಾಗಿದ್ದು, ಈ ವೇಳೆ ಹಲವು ಮಹತ್ವದ ದಾಖಲೆಗಳ ಜೊತೆಗೆ ಸತೀಶ್ ಜಾರಕಿಹೊಳಿ ಅವರ ಪುತ್ರಿ ಹಾಗೂ ಚಿಕ್ಕೋಡಿ ಸಂಸದೆ ಪ್ರಿಯಾಂಕಾ ನಿವಾಸದಲ್ಲಿ 1.2 ಕೋಟಿ ರೂಪಾಯಿ ನಗದು ಪತ್ತೆಯಾಗಿದೆ. ಇದರೊಂದಿಗೆ ದಾಳಿಯಲ್ಲಿ ಒಟ್ಟು 3 ಕೋಟಿ ರೂ. ಹಣ, ಅಪಾರ ಪ್ರಮಾಣದ ಚಿನ್ನ ಹಾಗೂ ಬೆಳ್ಳಿ ಪತ್ತೆಯಾಗಿದ್ದು, ಇದು ಸತೀಶ್ ಜಾರಕಿಹೊಳಿಗೆ ಸಂಕಷ್ಟ ತಂದಿಟ್ಟಿದೆ.

ದಾಳಿ ವೇಳೆ ಹಣ ಪತ್ತೆಯಾಗಿರುವ ಬಗ್ಗೆ ಇಡಿ ಅಧಿಕಾರಿಗಳು, ದೆಹಲಿಯಲ್ಲಿರುವ ಕೇಂದ್ರ ಕಚೇರಿಗೆ ಮಾಹಿತಿ ನೀಡಿದ್ದಾರೆ. ಹಣದ ಮಾಹಿತಿ ಜೊತೆಗೆ 34 ಗಂಟೆ ನಡೆದ ಕಾರ್ಯಾಚರಣೆಯ ಸಂಪೂರ್ಣ ಮಾಹಿತಿಯನ್ನು ರವಾನಿಸಿದ್ದಾರೆ.

Minister Satish Jarkiholi, his residence at Kuvempu Nagar in Belagavi
ಸಚಿವ ಸತೀಶ್ ಜಾರಕಿಹೊಳಿ ನಿವಾಸ ಮೇಲೆ ದಾಳಿ ಏಕೆ; ED ಹೇಳಿದ್ದೇನು? Video

ಬುಧವಾರ ತಡರಾತ್ರಿ 2 ಗಂಟೆವರೆಗೆ ವಿಚಾರಣೆ ನಡೆಸಿದ್ದ ಇಡಿ, ಇಂದು ಬೆಳಗ್ಗೆ 6 ಗಂಟೆಯಿಂದಲೂ ಮತ್ತೆ ಇ.ಡಿ ದಾಳಿ ಆರಂಭಿಸಿತ್ತು. ವಿಚಾರಣೆ ವೇಳೆ ವಿದೇಶ ವ್ಯವಹಾರಗಳ ಬಗ್ಗೆ ಜಾರಕಿಹೊಳಿ ಮಾಹಿತಿ ನೀಡದಿರುವುದರಿಂದ ಸಂಕಷ್ಟ ಎದುರಾಗುವ ಸಾಧ್ಯತೆಗಳು ಹೆಚ್ಚಾಗಿದೆ.

ಸತೀಶ್ ಜಾರಕಿಹೊಳಿ ಅವರ ಗೋಕಾಕ್ ನಿವಾಸದಲ್ಲಿ ಸಿಕ್ಕ ಹಣ ವಶಕ್ಕೆ ಪಡೆಯಲು ಅಧಿಕಾರಿಗಳು ಬೊಲೇರೋ ವಾಹನದಲ್ಲಿ ಎರಡು ಟ್ರಂಕ್ ಕೂಡ ತಂದಿದ್ದಾರೆ. ಸಚಿವರ ಸಿಎ ಪ್ರದೀಪ್ ಕುಮಾರ್ ಇಂಡಿ, ಸೈದಪ್ಪ ಗದಾಡಿ ಅವರನ್ನು ಕರೆಸಿಕೊಂಡು ಮಾಹಿತಿಯನ್ನೂ ಪಡೆದಿದ್ದಾರೆ.

ಹಣ, ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆ

ಇಡಿ ದಾಳಿ ಅಂತ್ಯವಾದ ಬಳಿಕ ಬೆಂಗಳೂರಿನ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಸತೀಶ್ ಜಾರಕಿಹೊಳಿ ಅವರು, ಇಡಿ ಅಧಿಕಾರಿಗಳು ಎರಡು ಕೋಟಿ ರೂ. ನಗದು ಹಾಗೂ ಹಲವು ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದರು.

ಇಡಿ ದಾಳಿ ವೇಳೆ ನಮ್ಮ ಮನೆಯಲ್ಲಿ ಸಿಕ್ಕ ಹಣ ನಮ್ಮದೇ. ಅದಕ್ಕೆ ಸೂಕ್ತ ದಾಖಲೆಗಳನ್ನು ನೀಡುತ್ತೇವೆ. ಇಡಿಯ ಎಲ್ಲಾ ಪ್ರಶ್ನೆಗಳಿಗೂ ನಮ್ಮ ಬಳಿ ಉತ್ತರ ಇದೆ. ಆದರೆ ದೇಶಾದ್ಯಂತ ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಸತೀಶ್ ಜಾರಕಿಹೊಳಿ ಆರೋಪಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com